ಬೆಂಗಳೂರು,ಫೆ.27- ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಪಕ್ಷಕ್ಕೆ ಭಾರೀ ಮುಜುಗರ ಸೃಷ್ಟಿಸಿರುವ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಬಿಜೆಪಿಯಿಂದಲೇ ಉಚ್ಚಾಟಿಸುವ ಸಾಧ್ಯತೆ ಇದೆ.
ಪಕ್ಷದ ವ್ಹಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರವಾಗಿ ಮತ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಘಟಕ ಸೋಮಶೇಖರ್‍ರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸಬೇಕೆಂದು ಕೇಂದ್ರದ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಲಿದೆ. ಶಾಸಕರಾಗಿರುವುದರಿಂದ ಸೋಮಶೇಖರ್ ಮೇಲೆ ರಾಜ್ಯಘಟಕ ಶಿಸ್ತು ಕ್ರಮ ಜರುಗಿಸಲು ಆಗುವುದಿಲ್ಲ. ಹೀಗಾಗಿ ಅವರ ವಿರುದ್ಧ ಕೇಂದ್ರದ ಶಿಸ್ತುಸಮಿತಿಯೇ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದರಿಂದ ಒಂದೆರಡು ದಿನಗಳಲ್ಲೇ ಶಿಫಾರಸು ಪತ್ರ ರವಾನೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಎಸ್.ಟಿ.ಸೋಮಶೇಖರ್ ಅಡ್ಡಮತದಾನ ಮಾಡಿರುವುದು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಸೃಷ್ಟಿಸಿದೆ. ಭವಿಷ್ಯದಲ್ಲಿ ಯಾರೊಬ್ಬರೂ ಪಕ್ಷದ ಶಿಸ್ತು ಉಲ್ಲಂಘನೆ ಮಾಡಬಾರದೆಂದರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೇಂದ್ರಕ್ಕೆ ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಈಗಾಗಲೇ ವಿಜಯೇಂದ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದು, ಪಕ್ಷದಿಂದಲೇ ಉಚ್ಚಾಟನೆ ಮಾಡುವ ಸಾಧ್ಯತೆಗಳು ನಿಚ್ಛಳವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರದಿಂದ ಗೆದ್ದ ನಂತರ ಸೋಮಶೇಖರ್ ಬಿಜೆಪಿಯಿಂದ ಅಂತರ ಕಾಪಾಡಿಕೊಂಡು ಕಾಂಗ್ರೆಸ್‍ಗೆ ಹತ್ತಿರವಾಗಿದ್ದರು.
4 ಡ್ರಗ್ ಪೆಡ್ಲರ್‌ಗಳ ಬಂಧನ : 2.35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ
ಇತ್ತೀಚೆಗೆ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಮತಯಾಚನೆ ಮಾಡಿ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎ.ಪಿ.ರಂಗನಾಥ್ ವಿರುದ್ಧವಾಗಿ ಕೆಲಸ ಮಾಡಿದ್ದರು. ಹೀಗೆ ಪ್ರತಿಹಂತದಲ್ಲೂ ಬಿಜೆಪಿಗೆ ಮುಜುಗರ ಸೃಷ್ಟಿಸುತ್ತಿರುವ ಎಸ್.ಟಿ.ಸೋಮಶೇಖರ್‍ರವರನ್ನು ಪಕ್ಷದಿಂದಲೇ ಹೊರ ಹಾಕಬೇಕೆಂಬ ಒತ್ತಡಗಳು ಕೇಳಿಬಂದಿವೆ.
ಶಾಸಕ ಸ್ಥಾನಕ್ಕೆ ಸೋಮಶೇಖರ್ ರಾಜೀನಾಮೆ?
ಈ ಹಿಂದೆ ವಿಜಯ್‍ಮಲ್ಯ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಬಿಜೆಪಿಯ ಹಲವು ಶಾಸಕರು ಪಕ್ಷದ ಅಕೃತ ಅಭ್ಯರ್ಥಿ ವಿರುದ್ಧವಾಗಿ ಮತ ಚಲಾಯಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ಹಲವು ಶಾಸಕರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿತ್ತು. ಈಗ ಸೋಮಶೇಖರ್ ವಿರುದ್ಧವೂ ಇದೇ ಅಸ್ತ್ರವನ್ನು ಬಳಸಲು ಬಿಜೆಪಿ ಮುಂದಾಗಿದೆ. ಇದಕ್ಕೆ ಮುನ್ಸೂಚನೆ ಎಂಬಂತೆ ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ನಾವು ಶಿಸ್ತು ಕ್ರಮ ಜರುಗಿಸುವಂತೆ ವಿಧಾನಸಭೆಯ ಸಭಾಧ್ಯಕ್ಷರಿಗೆ ದೂರು ನೀಡುತ್ತೇವೆಂದು ಹೇಳಿದ್ದಾರೆ.