Thursday, December 5, 2024
Homeಇದೀಗ ಬಂದ ಸುದ್ದಿವಕ್ಫ್ ಮುಜುಗರ ತಪ್ಪಿಸಿಕೊಳ್ಳಲು ವಿವಾದಿತ ನಿರ್ದೇಶನಗಳನ್ನು ಹಿಂಪಡೆಯಲು ಮುಂದಾದ ರಾಜ್ಯ ಸರ್ಕಾರ

ವಕ್ಫ್ ಮುಜುಗರ ತಪ್ಪಿಸಿಕೊಳ್ಳಲು ವಿವಾದಿತ ನಿರ್ದೇಶನಗಳನ್ನು ಹಿಂಪಡೆಯಲು ಮುಂದಾದ ರಾಜ್ಯ ಸರ್ಕಾರ

State government moves to withdraw controversial directives to avoid Waqf embarrassment

ಬೆಂಗಳೂರು,ನ.10- ವಕ್ಫ್ ಆಸ್ತಿ ವಿಚಾರವಾಗಿ ತೀವ್ರ ಮುಜುಗರಕ್ಕೆ ಒಳಗಾಗಿದ್ದ ರಾಜ್ಯಸರ್ಕಾರ ಅದರಿಂದ ಪಾರಾಗಲು ಸ್ಪಷ್ಟ ನಿರ್ದೇಶನದ ಸುತ್ತೋಲೆಯನ್ನು ಹೊರಡಿಸುವ ಮೂಲಕ ರಾಜಕೀಯ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದೆ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಎಲ್ಲಾ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ವಕ್ಫ್ ಹೆಸರಿನಲ್ಲಿ ಖಾತೆ ಬದಲಾವಣೆ ಕುರಿತು ಈ ಮೊದಲು ನೀಡಲಾಗಿದ್ದ ವಿವಾದಿತ ನಿರ್ದೇಶನಗಳನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ವಕ್ಫ್ ವಿವಾದ ತೀವ್ರಗೊಂಡ ಬಳಿಕ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಹಾಗೂ ಇತರೆ ಸಚಿವರು ರೈತರು ಹಾಗೂ ಇತರರ ವಕ್ಫ್ ಹೆಸರಿನಲ್ಲಿರುವ ಆಸ್ತಿಗಳನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹಲವು ಬಾರಿ ಹೇಳಿದರು. ಅದರ ಹೊರತಾಗಿಯೂ ಕೆಲವು ಅಧಿಕಾರಿಗಳು ರಾಜ್ಯಸರ್ಕಾರದ ನಿರ್ದೇಶನ ಎಂದು ಹೇಳುತ್ತಾ ನೋಟೀಸ್ ನೀಡುವುದು, ಒಕ್ಕಲೆಬ್ಬಿಸಲು ಪ್ರಯತ್ನಿಸುವ ಕಾರ್ಯಗಳನ್ನು ಮುಂದುವರೆಸಿದ್ದರು.

ನ.7 ರಂದು ಕಳೆದ ಮೂರು ದಿನಗಳ ಹಿಂದೆ ಕೆಲವು ಅಧಿಕಾರಿಗಳು ವಕ್ಫ್ ಆಸ್ತಿ ಹೆಸರಿನಲ್ಲಿ ಮತ್ತೊಮೆ ನೋಟೀಸ್ ನೀಡಿದ್ದರು. ಇದು ಉಪಚುನಾವಣೆಯ ಹೊಸ್ತಿಲಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭಾರಿ ಮುಜುಗರ ಉಂಟು ಮಾಡಿತ್ತು.

ಹೀಗಾಗಿ ನಿನ್ನೆ ಸ್ಪಷ್ಟ ನಿರ್ದೇಶನದ ಪತ್ರ ಬರೆಯಲಾಗಿದೆ. ಅದರ ಪ್ರಕಾರ ವಕ್ಫ್ ಆಸ್ತಿಗಳ ಮಿಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ತಕ್ಷಣದಿಂದಲೇ ಹಿಂಪಡೆಯುವುದಾಗಿ ಮತ್ತು ಮಿಟೇಷನ್ ಪ್ರಕ್ರಿಯೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿದೆ.

ಈ ಕುರಿತು ನೀಡಲಾದ ಎಲ್ಲಾ ನೋಟೀಸ್ಗಳನ್ನು ಹಿಂಪಡೆಯುವುದು ಸದರಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮಗಳನ್ನು ಜರುಗಿಸಬಾರದು ಎಂದು ಆದೇಶಿಸಲಾಗಿದೆ. ಮುಖ್ಯಮಂತ್ರಿಗಳ ಸೂಚನೆ ಅನುಸಾರ ಈ ಮೊದಲು ಇದೇ ವರ್ಷದ ಏ.15, ಏ.23 ಮತ್ತು ನ.11 ರಂದು ಬರೆಯಲಾಗಿದ್ದ ನೆನಪೋಲೆ -2 ಇವುಗಳನ್ನು ತಕ್ಷಣದಿಂದ ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.

ಮುಖ್ಯಮಂತ್ರಿಯವರ ಆದೇಶ, ಮೇಲಧಿಕಾರಿಗಳ ಅನುಮೋದನೆ, ಅನುಮತಿ ಇಲ್ಲದೆಯೇ ನ.7 ರಂದು ನೆನಪೋಲೆ-2 ಅನ್ನು ಹೊರಡಿಸಿದ್ದ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸುವುದಾಗಿಯೂ ತಿಳಿಸಲಾಗಿದೆ. ಈ ಬಾರಿ ಕಟ್ಟುನಿಟ್ಟಿನ ಆದೇಶ ನೀಡಲಾಗುತ್ತಿದೆ. ಇದನ್ನು ಉಲ್ಲಂಘಿಸಿದರೆ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ವಕ್‌್ಫ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾದ್ಯಂತ ಜನಾಂದೋಲನಗಳನ್ನು ರೂಪಿಸಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಸಿರು ಕಟ್ಟಿಸುವ ವಾತಾವರಣ ನಿರ್ಮಿಸಿತ್ತು.

ಇದನ್ನು ತಪ್ಪಿಸಲು ಮುಖ್ಯಮಂತ್ರಿಯವರು ಹಲವು ಬಾರಿ ಮೌಖಿಕ ನಿರ್ದೇಶನಗಳನ್ನು ನೀಡಿದ್ದರೂ ಅದೇನೂ ಪರಿಣಾಮ ಬೀರಲಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ನ.7 ರಂದು ಕೆಲವು ಅಧಿಕಾರಿಗಳು ಮತ್ತಷ್ಟು ನೋಟೀಸ್ಗಳನ್ನು ನೀಡಿದರು. ಇದು ಭಾರಿ ಪ್ರಮಾಣದ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಆದೇಶ ಹೊರಡಿಸಲಾಗಿದೆ.

RELATED ARTICLES

Latest News