Friday, February 23, 2024
Homeರಾಜ್ಯಜಾಗತಿಕ ಕಂಪನಿಗಳೊಂದಿಗೆ 23,000 ಕೋಟಿ.ಮೊತ್ತದ 8 ತಿಳಿವಳಿಕೆ ಒಪ್ಪಂದಗಳಿಗೆ ರಾಜ್ಯ ಸರ್ಕಾರ ಸಹಿ

ಜಾಗತಿಕ ಕಂಪನಿಗಳೊಂದಿಗೆ 23,000 ಕೋಟಿ.ಮೊತ್ತದ 8 ತಿಳಿವಳಿಕೆ ಒಪ್ಪಂದಗಳಿಗೆ ರಾಜ್ಯ ಸರ್ಕಾರ ಸಹಿ

ಬೆಂಗಳೂರು, ಜ.24- ಜಾಗತಿಕ ಕಂಪನಿಗಳ ಜೊತೆಗೆ 23,000 ಕೋಟಿ ರೂ.ಮೊತ್ತದ 8 ತಿಳಿವಳಿಕೆ ಒಪ್ಪಂದಗಳಿಗೆ (ಎಂಒಯು) ರಾಜ್ಯ ಸರ್ಕಾರವು ಸಹಿ ಹಾಕಿರುವುದಾಗಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಭಾಗವಹಿಸಲು ದಾವೋಸ್‍ಗೆ ತೆರಳಿದ್ದ ಕರ್ನಾಟಕದ ಉನ್ನತ ಮಟ್ಟದ ನಿಯೋಗದ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 100 ಮೆಗಾವ್ಯಾಟ್ ಸಾಮಥ್ರ್ಯದ ಬೃಹತ್ ಗಾತ್ರದ ಡೇಟಾ ಸೆಂಟರ್ ಸ್ಥಾಪಿಸಲು ವೆಬ್ ವಕ್ರ್ಸ್ 20,000 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ಪ್ರಕಟಿಸಿದೆ. ಇದರಿಂದ 1000 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದರು.

ಡಿಜಿಟಲ್ ಕೌಶಲ್ಯ ವೃದ್ಧಿ ಪ್ರಕ್ರಿಯೆ ಹಮ್ಮಿಕೊಳ್ಳಲು ಮೈಕ್ರೊಸಾಫ್ಟ್ ವಾಗ್ದಾನ ಮಾಡಿದೆ. ಗ್ರಾಮೀಣ ಪ್ರದೇಶ ಕೇಂದ್ರಿತ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಹಿಟಾಚಿ ಕಂಪನಿಯು ಎಂಒಯುಗೆ ಸಹಿ ಹಾಕಿದೆ. ಬೆಂಗಳೂರಿನ ಆಚೆಗೂ ಕೈಗಾರಿಕೆಗಳ ಅಭಿವೃದ್ಧಿಗೆ ಸಮಾನ ಕೊಡುಗೆ ನೀಡಲು ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ವಹಿವಾಟು ಆರಂಭಿಸಲು ಹಲವಾರು ಕಂಪನಿಗಳು ಆಸಕ್ತಿ ತೋರಿಸಿವೆ. ವಿಜಯಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತಿತರ ಸ್ಥಳಗಳಲ್ಲಿ ಕೈಗಾರಿಕೆಗಳ ಸಮಾನ ಅಭಿವೃದ್ಧಿ ಗುರಿಗೆ ಕೊಡುಗೆ ನೀಡುವ ಹಲವಾರು ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಲುಲು ಗ್ರೂಪ್:
ವಿಜಯಪುರದಲ್ಲಿ 300 ಕೋಟಿ ರೂ.ವೆಚ್ಚದಲ್ಲಿ ಹೊಸ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಹಾಗೂ ಕಲಬುರಗಿಯಲ್ಲಿನ ತನ್ನ ಘಟಕದ ಸಾಮಥ್ರ್ಯ ವಿಸ್ತರಿಸುವ ಉದ್ದೇಶಕ್ಕೆ ಬಂಡವಾಳ ಹೂಡಿಕೆ ಮಾಡಲು ಲುಲು ಸಮೂಹವು ಯೋಜಿಸಿದೆ. ಬಿಎಲ್ ಅಗ್ರೊ: ವಿಜಯಪುರದಲ್ಲಿ ಸುಸಜ್ಜಿತ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಲಿದೆ. ದೇಶಿ ಮತ್ತು ರಫ್ತು ಮಾರುಕಟ್ಟೆಗಳಿಗೆ ಪೂರೈಸಲು ಸ್ಥಳೀಯ ಆಹಾರ ಉತ್ಪನ್ನಗಳನ್ನು ಖರೀದಿಸಿ ಅವುಗಳ ಶ್ರೇಣೀಕರಣ, ವಿಂಗಡಣೆ ಮತ್ತು ಪ್ಯಾಕೇಜಿಂಗ್ ಉದ್ದೇಶಕ್ಕೆ ಈ ಘಟಕ ನೆರವಾಗಲಿದೆ

ಎಚ್‍ಪಿ:
ಎಚ್‍ಪಿ ಎಂಟರ್‍ಪ್ರೈಸ್, ಬೆಂಗಳೂರಿನಲ್ಲಿರುವ ತನ್ನ ಕ್ಯಾಂಪಸ್‍ನ ಸಾಮಥ್ರ್ಯ ಹೆಚ್ಚಿಸಿ ಜಾಗತಿಕವಾಗಿ ಅತಿದೊಡ್ಡ ಎಚ್‍ಪಿ ಕ್ಯಾಂಪಸ್ ರೂಪಿಸಲು ಎರಡು ಹೊಸ ಕಟ್ಟಡಗಳನ್ನು ಪ್ರಾರಂಭಿಸಲು ಸಜ್ಜಾಗಿದೆ.ಎಬಿ ಇನ್‍ಬೇವ್: ಎಬಿ ಇನ್‍ಬೇವ್ ಕಂಪನಿಯು 400 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ, ಕರ್ನಾಟಕದಲ್ಲಿ ತನ್ನ ಅತ್ಯಾಧುನಿಕ ಮದ್ಯ ತಯಾರಿಕಾ ಘಟಕದ ಸಾಮಥ್ರ್ಯ ವಿಸ್ತರಿಸುವ ಗುರಿ ಹೊಂದಿದೆ.

ವೋಲ್ವೊ ಗ್ರೂಪ್:
ಕರ್ನಾಟಕದಲ್ಲಿ ತನ್ನ ವಾಣಿಜ್ಯ ವಾಹನ ತಯಾರಿಕಾ ಘಟಕದ ವಿಸ್ತರಣೆ ಬಗ್ಗೆ ಆಸಕ್ತಿ ತಳೆದಿರುವ ವೋಲ್ವೊ ಗ್ರೂಪ್, ಸದ್ಯದಲ್ಲಿಯೇ ರೂಪುಗೊಳ್ಳಲಿರುವ ಶುದ್ಧ ಸಂಚಾರ ನೀತಿಯ ಬಗ್ಗೆ ಪೂರಕ ಮಾಹಿತಿ ನೀಡಲು ಮತ್ತು ವಾಹನ ತಯಾರಿಕೆ ವಿಸ್ತರಿಸಲು ಸೂಕ್ತ ಪ್ರದೇಶಗಳನ್ನು ಗುರುತಿಸಲು ಉತ್ಸುಕತೆ ತೋರಿಸಿದೆ ಎಂದು ಅವರು ವಿವರಿಸಿದರು.

ಎಚ್‍ಸಿಎಲ್, ಎಚ್‍ಪಿ. ಸಿಸ್ಕೊ ಮತ್ತು ಸೋನಿಯಂತಹ ಕಂಪನಿಗಳ ಜೊತೆಗಿನ ಪಾಲುದಾರಿಕೆಯ ಸಮಾಲೋಚನೆಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ವಿಷಯವಾಗಿ ಹೊರಹೊಮ್ಮಿದೆ. ಸುಸ್ಥಿರತೆ ಮತ್ತು ನಾಗರೀಕ ಸೇವೆಗಳು ಸಹ ಈ ಚರ್ಚೆಗಳಲ್ಲಿ ಮಹತ್ವದ ವಿಷಯಗಳಾಗಿದ್ದವು. ವಿವಿಧ ನವೋದ್ಯಮಗಳು ಮತ್ತು ಸ್ಥಾಪಿತ ಕಂಪನಿಗಳ ಜೊತೆಗೆ ಭವಿಷ್ಯದ ನಡೆಗಳ ಬಗ್ಗೆ ಮಾತುಕತೆಗಳು ನಡೆದಿವೆ ಎಂದರು.

ಭಾರತ್ ನ್ಯಾಯ ಯಾತ್ರೆಗೆ ಭದ್ರತೆ ನೀಡುವಂತೆ ಅಮಿತ್ ಷಾಗೆ ಖರ್ಗೆ ಪತ್ರ

ಎಚ್‍ಪಿ, ರಾಕ್‍ವೆಲ್, ಸೋನಿ ಮತ್ತು ವೋಲ್ವೊ ಮತ್ತಿತರ ಕಂಪನಿಗಳ ಜೊತೆಗಿನ ಮಾತುಕತೆಗಳಲ್ಲಿ ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆ ಉದ್ದೇಶಕ್ಕೆ ಸಾಮಥ್ರ್ಯ ಹೆಚ್ಚಳ ಮತ್ತು ಎಂಜಿನಿಯರಿಂಗ್ ಕೇಂದ್ರಗಳನ್ನು ವಿಸ್ತರಿಸುವ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು ಎಂದು ಅವರು ಹೇಳಿದರು.

ಜಾಗತಿಕ ಕೈಗಾರಿಕೆ ಹಾಗೂ ಉದ್ಯಮ ಜಗತ್ತು ತ್ವರಿತವಾಗಿ ಬದಲಾಗುತ್ತಿದೆ. ಈ ಬದಲಾವಣೆಗಳನ್ನು ತಿಳಿದುಕೊಳ್ಳಲು ಶೃಂಗಸಭೆಯಲ್ಲಿ ಭಾಗವಹಿಸುವುದು ಮಹತ್ವದ ಸಂಗತಿಯಾಗಿತ್ತು. ಜಾಗತಿಕ ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಿಕೆ ಮಾಡಲು ಹಾಗೂ ತಮ್ಮ ವಹಿವಾಟು ವಿಸ್ತರಿಸಲು ಸುರಕ್ಷಿತ ಮತ್ತು ಭರವಸೆಯ ತಾಣವಾಗಿ ಭಾರತದತ್ತ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದಕ್ಕೆ ನಾವು ಸಾಕ್ಷಿಯಾಗಿರುವುದು ಉತ್ತೇಜಕರ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.

ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ತಯಾರಿಕೆ (ಇಎಸ್‍ಡಿಎಂ), ಡೇಟಾ ಸೆಂಟರ್, ಆಟೊಮೊಬೈಲ್, ವಿದ್ಯುತ್ ಚಾಲಿತ ವಾಹನ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‍ಎಂಸಿಜಿ) ಮತ್ತು ಜಾಗತಿಕ ಸಾಮಥ್ರ್ಯ ಕೇಂದ್ರಗಳು (ಜಿಸಿಸಿ) ಒಳಗೊಂಡ ಮಹತ್ವದ ವಲಯಗಳ ಬಗ್ಗೆ ನಾವು ಹೆಚ್ಚಿನ ಗಮನ ನೀಡಿದ್ದೆವು ಎಂದರು.

ವಿಶ್ವ ಆರ್ಥಿಕ ವೇದಿಕೆಯ ಮುಖಂಡರ ಜೊತೆಗಿನ ದ್ವಿಪಕ್ಷೀಯ ಸಭೆಗಳಲ್ಲೂ ನಮ್ಮ ನಿಯೋಗವು ಭಾಗವಹಿಸಿತ್ತು. ಸುಸ್ಥಿರ ಹೂಡಿಕೆ ಆಕರ್ಷಣೆ, ಪರಿಸರ ಸ್ನೇಹಿ ವಾಣಿಜ್ಯ ವಹಿವಾಟು, ಜೈವಿಕ ಸಂಪನ್ಮೂಲಗಳ ರಕ್ಷಣೆ ಉದ್ದೇಶದ ಹವಾಮಾನ ಕಾರ್ಯಸೂಚಿಯಲ್ಲಿ ಕರ್ನಾಟಕವು ನಿರ್ವಹಿಸಬೇಕಾಗಿರುವ ಪ್ರಮುಖ ಪಾತ್ರ ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಶ್ರೇಷ್ಠತೆಯ ಕೇಂದ್ರ ಸ್ಥಾಪಿಸುವುದಕ್ಕೆ ಈ ಸಭೆಗಳಲ್ಲಿ ಆದ್ಯತೆ ನೀಡಲಾಗಿತ್ತು ಎಂದು ಅವರು ಹೇಳಿದರು.

RELATED ARTICLES

Latest News