Tuesday, July 16, 2024
Homeರಾಜ್ಯಸರ್ಕಾರಿ ಶಾಲೆಗಳಲ್ಲಿ `ನಾವು ಮನುಜರು' ಎಂಬ ವಿನೂತನ ಕಾರ್ಯಕ್ರಮ

ಸರ್ಕಾರಿ ಶಾಲೆಗಳಲ್ಲಿ `ನಾವು ಮನುಜರು’ ಎಂಬ ವಿನೂತನ ಕಾರ್ಯಕ್ರಮ

ಬೆಂಗಳೂರು,ಜು.11- ಮೇಲು-ಕೀಳು ಎಂಬ ಮನೋಭಾವವನ್ನು ಹೋಗಲಾಡಿಸಿ ಮಕ್ಕಳಲ್ಲಿ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವನೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸುವ ಸದುದ್ದೇಶದಿಂದ ಶಾಲಾ ಮಕ್ಕಳಲ್ಲಿ ನಾವು ಮನುಜರು ಎಂಬ ವಿಶೇಷ ಶೈಕ್ಷಣಿಕ ನೂತನ ಕಾರ್ಯಕ್ರಮವನ್ನು ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಕಾರ್ಯಕ್ರಮವು ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ಇನ್ನು ಮುಂದೆ ಶಾಲೆಗಳಲ್ಲಿ ಚರ್ಚೆ, ವಿಮರ್ಶೆ ಮತ್ತು ಸಂವಾದಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯನ್ನು ಬೆಳೆಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಮಾರ್ಚ್‌ನಲ್ಲಿ ಮಂಡಿಸಿದ್ದ ಬಜೆಟ್‌ ವೇಳೆ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಸಮಸಮಾಜ ನಿರ್ಮಾಣ ಹಾಗೂ ನಾವೆಲ್ಲರೂ ಮನುಜರು ಎಂಬುದನ್ನು ಉಲ್ಲೇಖಿಸಿದ್ದರು. ಹೀಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಡಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶಾಲಾ ಮಕ್ಕಳಲ್ಲಿ ಸಾಮರಸ್ಯ ಮೂಡಿಸುವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತುವ ಮತ್ತು ವೈಜ್ಞಾನಿಕ ಮನೋಭಾವನೆ ಮೂಡಿಸಲು ನಾವು ಮನುಜರು ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಘೋಷಿಸಿದ್ದರು.

ಇದೀಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಅಧಿಸೂಚನೆಯಂತೆ ಇನ್ನು ಮುಂದೆ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ನಾವು ಮನುಜರು ಎಂಬ ವಿನೂತನವಾದ ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕಾಗುತ್ತದೆ.

ಏನಿದು ಕಾರ್ಯಕ್ರಮ :
ಈ ಕಾರ್ಯಕ್ರಮವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಾರಕ್ಕೆ ಎರಡು ಗಂಟೆಗಳ ಕಾಲ (40 ನಿಮಿಷಗಳ ಮೂರು ಅವಧಿಗಳೊಂದಿಗೆ) ಚರ್ಚೆಗಳು ಮತ್ತು ಸಂವಾದಗಳನ್ನು ಒಳಗೊಂಡಿರುತ್ತದೆ.
ಮೌಲ್ಯ ಶಿಕ್ಷಣದ ಒಂದು ಅವಧಿ ಮತ್ತು ಸಾಮಾಜಿಕವಾಗಿ ಉಪಯುಕ್ತ ಉತ್ಪಾದಕ ಕೆಲಸಗಳ ಎರಡು ಅವಧಿಗಳನ್ನು ಇದಕ್ಕೆ ಹೊಂದಿಸಲಾಗಿದೆ.

ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನ ನೀಡುವಂತೆ ಹಾಗೂ ಜಿಲ್ಲಾ ಮಟ್ಟದಲ್ಲಿ ನೋಡಲ್‌ ಅಧಿಕಾರಿಯನ್ನು ನೇಮಿಸಿ, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ (ಡಿಎಸ್‌‍ಇಆರ್‌ಟಿ) ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಕಾರ್ಯಕ್ರಮ ಅನುಷ್ಠಾನಕ್ಕೆ ವಿಶೇಷ ಅನುದಾನ ನೀಡುವುದಿಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಾರ್ಯಕ್ರಮದ ಅನುಷ್ಠಾನದ ಸ್ವರೂಪವನ್ನು ಬಿಡುಗಡೆ ಮಾಡಿದೆ. ಸಾಮರಸ್ಯದ ಪಾಠಗಳು ಸ್ವರೂಪದ ಪ್ರಕಾರ, ಸ್ಥಳೀಯ ಮತ್ತು ರಾಷ್ಟ್ರೀಯ ಹಬ್ಬಗಳು, ಜಾನಪದ ಆಟಗಳು, ಕ್ರೀಡೆಗಳು ಇತ್ಯಾದಿಗಳನ್ನು ಆಧರಿಸಿ ಸಾಮಾಜಿಕ ಸಾಮರಸ್ಯ ಮತ್ತು ಅದರ ಮಹತ್ವದ ಬಗ್ಗೆ ಚರ್ಚೆ ನಡೆಸಬೇಕು.

ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ, ಮೌಲ್ಯಯುತ ಶಿಕ್ಷಣ ಮತ್ತು ಸಹಬಾಳ್ವೆಯನ್ನು ಉತ್ತೇಜಿಸಲು ಸಂಪನೂಲ ವ್ಯಕ್ತಿಗಳು, ತಜ್ಞರನ್ನು ಆಹ್ವಾನಿಸಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ವಾರಕ್ಕೆ ಎರಡು ಗಂಟೆಗಳನ್ನು (ತಲಾ 40 ನಿಮಿಷಗಳ ಮೂರು ಕಾರ್ಯಕ್ರಮ) ಮೀಸಲಿಡಲು ಸೂಚಿಸಲಾಗಿದೆ. ದೇಶದ ಸಮಾಜ ಸುಧಾರಕರು, ಕ್ರಾಂತಿಗಳ ಮಾಹಿತಿ ಒದಗಿಸುವುದು, ಸಮೀಪದ ಐತಿಹಾಸಿಕ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು, ಸಮಾಜದಲ್ಲಿನ ಅಸಮಾನತೆ ನಿವಾರಣೆ ಕುರಿತು ಚರ್ಚೆಗಳನ್ನು ಆಯೋಜಿಸಲು ತಿಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣದ ಆಯುಕ್ತರಾದ ಬಿ.ಬಿ.ಕಾವೇರಿ, ಡಿಎಸ್‌‍ಇಆರ್‌ಟಿ ಈ ಕಾರ್ಯಕ್ರಮದ ಅನುಷ್ಠಾನ ಪ್ರಾಧಿಕಾರವಾಗಿದ್ದು, ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯವನ್ನು ಸುಧಾರಿಸಲು, ತರ್ಕಬದ್ಧತೆ ಮತ್ತು ಪ್ರತಿಯೊಂದು ಸಮಸ್ಯೆಯ ಸಾಧಕ-ಬಾಧಕಗಳನ್ನು ಅರ್ಥ ಮಾಡಿಕೊಳ್ಳುವಂತೆ ಮಾಡುವ ಗುರಿಯನ್ನು ಹೊಂದಿದೆ. ಇದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಶೀಘ್ರದಲ್ಲೇ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

RELATED ARTICLES

Latest News