Thursday, April 16, 2026
Homeರಾಜ್ಯಎಚ್‌.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಇಂದಿಗೆ 20 ವರ್ಷ

ಎಚ್‌.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಇಂದಿಗೆ 20 ವರ್ಷ

H.D. Kumaraswamy

ಬೆಂಗಳೂರು,ಫೆ.3- ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಇಂದಿಗೆ 20 ವರ್ಷ ಪೂರ್ಣಗೊಂಡಿದೆ.

ಕಳೆದ 2006ರ ಫೆ.4 ರಂದು ಕುಮಾರಸ್ವಾಮಿಯವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಿಜೆಪಿ ಹಾಗೂ ಜೆಡಿಎಸ್‌‍ ಮೈತ್ರಿ ಸರ್ಕಾರದಲ್ಲಿ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.

ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ 2007 ರ ಅ.9 ರಂದು ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದರು. ಈ ಅವಧಿಯಲ್ಲಿ ಜನತಾದರ್ಶನ, ಗ್ರಾಮವಾಸ್ತವ್ಯ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನಪ್ರಿಯ ಮುಖ್ಯಮಂತ್ರಿ ಹಾಗೂ ಉತ್ತಮ ಆಡಳಿತಗಾರ ಎನಿಸಿಕೊಂಡಿದ್ದರು.

2ನೇ ಬಾರಿಗೆ 2018ರ ಮೇ 23 ರಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. 2018ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದ ಕಾರಣ ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ ಮೈತ್ರಿಸರ್ಕಾರ ಅಸ್ತಿತ್ವಕ್ಕೆ ಬಂದಿತು. 14 ತಿಂಗಳ ಕಾಲ 2ನೇ ಬಾರಿ ಮುಖ್ಯಮಂತ್ರಿಯಾಗಿ ರೈತರ ಸಾಲಮನ್ನಾ ಸೇರಿದಂತೆ ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದರು. ಆಪರೇಷನ್‌ ಕಮಲದ ಪರಿಣಾಮದಿಂದ ಆಡಳಿತ ಪಕ್ಷಗಳ ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರ್ಕಾರ ಪತನವಾಗಬೇಕಾಯಿತು. 2019ರ ಜು.23 ರಂದು ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಅವರು ಚುನಾಯಿತರಾಗಿದ್ದರು. 2024 ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಚುನಾಯಿತರಾಗಿ 2ನೇ ಬಾರಿಗೆ ಸಂಸದರಾದರು. ಇದಕ್ಕೂ ಮೊದಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹಾಗೂ ಕನಕಪುರ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಜೆಡಿಎಸ್‌‍ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಕುಮಾರಸ್ವಾಮಿಯವರನ್ನು ಅಭಿನಂದಿಸುತ್ತಿದ್ದಾರೆ.

ಕುಮಾರಸ್ವಾಮಿ ಪ್ರತಿಕ್ರಿಯೆ :
ನಾನು ಆಕಸಿಕವಾಗಿ ಸಿಎಂ ಆದವನು. ನನಗೆ ಎರಡು ಬಾರಿಯೂ ಪೂರ್ಣ ಪ್ರಮಾಣದ ಸರ್ಕಾರ ಮಾಡಲು ಜನ ಬೆಂಬಲ ಸಿಗಲಿಲ್ಲ. ಆದರೆ ಜನರ ಅಭಿಮಾನ, ಹಾರೈಕೆ ಇತ್ತು. ಅಲ್ಲದೆ, ಭಗವಂತನ ಕೃಪೆಯಿಂದ ಇದೆಲ್ಲಾ ಸಾಧ್ಯವಾಯಿತು ಎಂದು ಭಾವಿಸಿದ್ದೇನೆ. ಸಿಕ್ಕಿದ ಸಣ್ಣ ಅವಕಾಶದಲ್ಲಿಯೇ ನಾನು ಜನಸೇವೆ ಮಾಡಲು ಶ್ರಮಿಸಿದ್ದೇನೆ.

ಗ್ರಾಮ ವಾಸ್ತವ್ಯ, ಜನತಾ ದರ್ಶನ, ಶಾಲೆ ಕಾಲೇಜುಗಳ ನಿರ್ಮಾಣ, ಇಂಧನ ಇಲಾಖೆಯಲ್ಲಿ ಸುಧಾರಣೆ, ಬೆಂಗಳೂರು ಅಭಿವೃದ್ಧಿಗೆ ಕ್ರಮ ವಹಿಸಿ ಮೊದಲ ಹಂತದ ಮೆಟ್ರೋ ಯೋಜನೆಗೆ ಚಾಲನೆ, ಮೊದಲ ಅವಧಿಯಲ್ಲಿಯೂ ಸುಮಾರು 2500 ಕೋಟಿ ರೂಪಾಯಿ ರೈತ ಸಾಲ ಮನ್ನಾ ಸೇರಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

RELATED ARTICLES

Latest News