Sunday, January 25, 2026
Homeರಾಜ್ಯವಿಪಕ್ಷಗಳಿಗೆ ಮತ್ತೊಂದು ಅಸ್ತ್ರವಾದ ಅಬಕಾರಿ ಇಲಾಖೆಯ ಲಂಚಾವತಾರ

ವಿಪಕ್ಷಗಳಿಗೆ ಮತ್ತೊಂದು ಅಸ್ತ್ರವಾದ ಅಬಕಾರಿ ಇಲಾಖೆಯ ಲಂಚಾವತಾರ

Another weapon for the opposition: Excise Department's bribery

ಬೆಂಗಳೂರು,ಜ.25-ರಾಜ್ಯಪಾಲರ ಭಾಷಣ, ವಿಬಿ -ಜಿ.ರಾಮ್‌ ಜಿ ವಿವಾದದ ನಡುವೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆನೋವು ಕಾದಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಇದೀಗ ಅಬ್ಕಾರಿ ಸಚಿವ ಆರ್‌.ಬಿ.ತಿಮಾಪುರ ಅವರಿಗೆ ಸುತ್ತಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ಇದು ವಿರೋಧ ಪಕ್ಷಗಳಿಗೆ ಸಿಕ್ಕಿರುವ ಬಹುದೊಡ್ಡ ಅಸ್ತ್ರವಾಗಿದೆ. ಈಗಾಗಲೇ ಸದನದಲ್ಲೂ ಈ ಕುರಿತಾದ ಚರ್ಚೆ ಶುರುವಾಗಿದ್ದು, ಸಚಿವರ ರಾಜೀನಾಮೆಗೆ ಪಟ್ಟು ಹಿಡಿಯಲಾಗಿದೆ.

ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂ.ಹಗರಣ ನಡೆದಿದೆ ಎಂದು ಪೆನ್‌ಡ್ರೈವ್‌ ಪ್ರದರ್ಶಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ಕೂಡಾ ವೈರಲ್‌ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌.ಬಿ.ತಿಮಾಪುರ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಪರವಾನಗಿಗಳನ್ನು ಹರಾಜು ಹಾಕಲಾಗುತ್ತಿದೆ. ಇದೇ ಸಂದರ್ಭದಲ್ಲಿ ಅಬಕಾರಿ ಉಪ ಆಯುಕ್ತ ಜಗದೀಶ್‌ ನಾಯಕ್‌ ಎಂಬವರು 25 ಲಕ್ಷ ರೂ.ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ರಾಜೀನಾಮೆ ನೀಡದೆ ಇದ್ದರೆ, ಸಿಎಂ ಸಿದ್ದರಾಮಯ್ಯ ಅವರನ್ನೇ ಹೊಣೆಗಾರರನ್ನಾಗಿ ಪರಿಗಣಿಸಬೇಕಾಗುತ್ತದೆ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಅಶೋಕ್‌ ಈ ವಿಚಾರ ಪ್ರಸ್ತಾಪಿಸಿ ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದರು. ಅಲ್ಲದೆ, ಬಿಜೆಪಿ, ಜೆಡಿಎಸ್‌‍ ಸದಸ್ಯರು ಎದ್ದು ನಿಂತು ಧ್ವನಿಗೂಡಿಸಿದ್ದರು. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ತಿಮಾಪುರ ಹೆಸರು ತಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಸಿಕ್ಕಿರುವ ಬಹುದೊಡ್ಡ ಅಸ್ತ್ರ. ಈ ಹಿಂದೆ ಮಾಡಲಾಗಿದ್ದ ಶೇ.40 ರಷ್ಟು ಆರೋಪಕ್ಕೆ ತಿರುಗೇಟು ಕೊಡಲು ಬಿಜೆಪಿ ಸಜ್ಜಾಗಿದೆ.

ಅಬಕಾರಿ ಇಲಾಖೆಯಿಂದ ಲೂಟಿ ಮಾಡಿದ ಹಣವನ್ನು ಕಾಂಗ್ರೆಸ್‌‍ ಸರ್ಕಾರ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಅಸ್ಸಾಂ, ಕೇರಳ ಮತ್ತು ತಮಿಳುನಾಡಿಗೆ ರವಾನಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಅಬಕಾರಿ ಸಚಿವ ತಿಮಾಪುರ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು.

ಅಬಕಾರಿ ಇಲಾಖೆಯ ಹಗರಣದ ಹಣ ಚುನಾವಣೆಗೆ ಹೋಗುತ್ತಿರುವುದು ನಿಜ ಮತ್ತು ನಾವು ಅದನ್ನು ಬಹಿರಂಗಪಡಿಸುತ್ತೇವೆ ಎಂದು ಅಶೋಕ್‌ ಹೇಳಿದ್ದರು. ತಿಮಾಪುರ ಮತ್ತು ಅವರ ಪುತ್ರ ಭಾಗಿಯಾಗಿದ್ದಾರೆ ಎನ್ನಲಾದ ಮದ್ಯ ಹಗರಣದ ಕುರಿತು ಚರ್ಚೆಗೆ ಸ್ಪೀಕರ್‌ ಯು.ಟಿ. ಖಾದರ್‌ ಅವಕಾಶ ನೀಡಿದ್ದು, ಮಂಗಳವಾರದ ಸದನದ ಕಾರ್ಯಕಲಾಪಗಳ ಪಟ್ಟಿಯಲ್ಲಿದೆ.

ಸದನದಲ್ಲಿ ಶುಕ್ರವಾರ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದ ಅಶೋಕ್‌, ಲೋಕಾಯುಕ್ತದಲ್ಲಿ ಸಚಿವರ ವಿರುದ್ಧ ದೂರು ದಾಖಲಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌‍. ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆ.ಎಸ್‌‍.ಈಶ್ವರಪ್ಪ ಅವರು ಇದೇ ರೀತಿಯ ಆರೋಪಗಳನ್ನು ಎದುರಿಸಿದ ನಂತರ ತನಿಖೆಗೆ ಮುನ್ನ ರಾಜೀನಾಮೆ ನೀಡಿದ್ದರು ಎಂದು ಹೇಳಿದ್ದರು.

ತಿಮಾಪುರ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿರುವ ವಿಪಕ್ಷಗಳು ಸದನದ ಒಳಗೆ, ಹೊರಗೆ ಹೋರಾಟ ರೂಪಿಸಲು ನಿರ್ಧಾರ ಮಾಡಿದೆ. ಉಭಯ ಸದನಗಳಲ್ಲಿ ನಿಲುವಳಿ ಮಂಡಿಸುವ ಮೂಲಕ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಪ್ಲ್ಯಾನ್‌ ಮಾಡಿಕೊಂಡಿವೆ. ಈ ಮೂಲಕ ಆಡಳಿತ ಪಕ್ಷಕ್ಕೆ ಮತ್ತೊಂದು ಮಾಸ್ಟರ್‌ ಸ್ಟ್ರೋಕ್‌ ಕೊಡುವಲ್ಲಿ ಯಶಸ್ವಿಯಾಗ್ತಾರಾ ಬಿಜೆಪಿ ನಾಯಕರು ಎಂಬ ಕುತೂಹಲ ಕೆರಳಿಸಿದೆ.

ಮನ್‌ರೇಗಾ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆದ ರಾಜ್ಯ ಸರ್ಕಾರಕ್ಕೆ ಅಬಕಾರಿ ಹಗರಣ ತಲೆ ನೋವಾವಾಗಿ ಮಾರ್ಪಟ್ಟಿದೆ. ಮಂಗಳವಾರದ ಕಲಾಪದಲ್ಲಿ ತಿಮಾಪುರ ವಿರುದ್ಧದ ಆರೋಪ ಮುಂದಿಟ್ಟುಕೊಂಡು ರಾಜೀನಾಮೆಗೆ ವಿಪಕ್ಷಗಳ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ವಿಪಕ್ಷಗಳ ಟೀಕೆ, ಆರೋಪಗಳಿಗೆ ಪ್ರತ್ಯುತ್ತರ ಕೊಡಲು ಸರ್ಕಾರದ ಪ್ಲ್ಯಾನ್‌ ಏನು ಎಂಬುವುದು ಕುತೂಹಲ ಕೆರಳಿಸಿದೆ.

ಜನವರಿ 28 ರಂದು ನಡೆಯುವ ಸಿಎಲ್‌‍ಪಿಯಲ್ಲೂ ಅಬಕಾರಿ ಹಗರಣ ಪ್ರತಿಧ್ವನಿಸುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ತಮ ವಿರುದ್ಧದ ಆರೋಪವನ್ನು ತಿಮಾಪುರ ನಿರಾಕರಣೆ ಮಾಡಿದ್ದಾರೆ.

RELATED ARTICLES

Latest News