ಚಿಕ್ಕಮಗಳೂರು, ಅ.18- ಆಶಾ ಕಾರ್ಯಕರ್ತೆಯರ ಮಾಸಿಕ ಕನಿಷ್ಠ ಗೌರವಧನವನ್ನು 10 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸಬೇಕು. ಅವರ ಸೇವೆಗೆ ತಕ್ಕ ಗೌರವ, ಆರ್ಥಿಕ ಭದ್ರತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ವಿಧಾನಮಂಡಲದಲ್ಲಿ ಧ್ವನಿ ಎತ್ತಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನದಿನದ ಅಂಗವಾಗಿ ಸೇವಾ ಸಂಕಲ್ಪ ಕಾರ್ಯಕ್ರಮದಡಿ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರ ಸನಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದರು.
ಚುನಾವಣೆಯ ಸಂದರ್ಭದಲ್ಲಿ ಮಾಸಿಕ 10 ಸಾವಿರ ನಿಶ್ಚಿತ ಗೌರವಧನ ನೀಡುವ ಭರವಸೆ ನೀಡಲಾಗಿದ್ದರೂ, ಮೂರೂವರೆ ವರ್ಷ ಕಳೆದರೂ ಅದು ಜಾರಿಯಾಗಿಲ್ಲ ಎಂದು ಆರೋಪಿಸಿದರು. ಗೌರವಧನ ಮತ್ತು ಪ್ರೋತ್ಸಾಹಧನ ಪಾವತಿಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರತಿ ತಿಂಗಳ 10ರೊಳಗೆ ಹಣ ಪಾವತಿಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಯಕರ್ತೆಯರಿಗೆ ಕನಿಷ್ಠ 15 ಸಾವಿರ ಗೌರವಧನ, ನಿವೃತ್ತಿ ಭದ್ರತೆ, ಆರೋಗ್ಯ ಕಾರ್ಡ್, ಮೊಬೈಲ್ ಸೌಲಭ್ಯ ಹಾಗೂ ತಾಂತ್ರಿಕ ತರಬೇತಿ ಒದಗಿಸಬೇಕು. ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಮರಳಲು ಸಾರಿಗೆ ವ್ಯವಸ್ಥೆ ಮತ್ತು ಸುರಕ್ಷಿತ ವಿಶ್ರಾಂತಿ ಕೊಠಡಿಗಳನ್ನು ಕಲ್ಪಿಸುವ ಅಗತ್ಯವಿದೆ ಎಂದರು. ಡಿಸಿಸಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸುವ ಸಾಧ್ಯತೆಗಳನ್ನೂ ಪರಿಶೀಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಶ್ಲಾಘಿಸಿ, ಹಿರಿಯ ನಿವೃತ್ತ ಕಾರ್ಯಕರ್ತೆಯರನ್ನು ಸನಾನಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್, ಕನಕರಾಜ ಅರಸ್, ಸೀತಾರಾಮ್ ಭರಣ್ಯ, ಜಿ.ಎನ್. ವಿಜಯ್ ಕುಮಾರ್, ಎಚ್.ಪಿ. ರಾಜೀವ್, ಪ್ರಕಾಶ್ ಬಿ.ಎಲ್., ಲೀಲಾ ಪರಮೇಶ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
