Thursday, April 16, 2026
Homeರಾಜ್ಯಸಂಪುಟ ಪುನಾರಚನೆ ಬಿಕ್ಕಟ್ಟು, ಸಿಎಂಗೆ ಸಂಕಷ್ಟ, ದೆಹಲಿಗೆ ಹೊರಟ ಶಾಸಕರ ನಿಯೋಗ

ಸಂಪುಟ ಪುನಾರಚನೆ ಬಿಕ್ಕಟ್ಟು, ಸಿಎಂಗೆ ಸಂಕಷ್ಟ, ದೆಹಲಿಗೆ ಹೊರಟ ಶಾಸಕರ ನಿಯೋಗ

Cabinet reshuffle crisis, CM in trouble, MLA delegation leaves for Delhi

ಬೆಂಗಳೂರು, ಏ.11- ನಾಯಕತ್ವ ಬದಲಾವಣೆಯ ತೂಗು ಕತ್ತಿಯಿಂದ ಪಾರಾಗ ಬೇಕಾದರೆ ಸಚಿವ ಸಂಪುಟ ಪುನರ್‌ರಚನೆ ಮಾಡಲೇ ಬೇಕಿದೆ. ಆದರೆ ಸಂಪುಟ ಪುನರ್‌ ರಚನೆಯಾದರೆ ತಮದೇ ಆಪ್ತರನ್ನು ಕೈಬಿಡಬೇಕಾದ ಇಕ್ಕಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಲುಕಿದ್ದಾರೆ. ಸಚಿವ ಸಂಪುಟ ಪುನರ್‌ ರಚನೆಯಾಗಬೇಕು, ನಮಗೆ ಅವಕಾಶ ಸಿಗಬೇಕು ಎಂದು ಹಿರಿಯ ಶಾಸಕರ ನಿಯೋಗ ನಾಳೆ ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುತ್ತಿದೆ.

ಮುಂದಿನ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳುತ್ತಿದ್ದು, ವಿವಿಧ ರಾಜ್ಯಗಳ ಚುನಾವಣೆಯ ಸ್ಥಿತಿಗತಿ, ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ, ಸಚಿವ ಸಂಪುಟ ಪುನರ್‌ರಚನೆ ಕುರಿತಂತೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಹಿರಿಯ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್‌ನ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನರ್‌ರಚನೆಗೆ ಒಲವು ವ್ಯಕ್ತಪಡಿಸಿದ್ದಾರೆ.

ನಾಯಕತ್ವದ ಬದಲಾವಣೆಯ ಕೂಗು ಶುರುವಾಗುವ ಮುನ್ನವೇ ಸಂಪುಟ ಪುನರ್‌ರಚನೆ ಮಾಡಿದರೆ, ಗೊಂದಲಗಳು ಬಗೆ ಹರಿಯುತ್ತವೆ. ಮುಖ್ಯಮಂತ್ರಿ ಸ್ಥಾನ ಅಬಾಧಿತವಾಗಿರಲಿದೆ ಎಂಬುವುದು ಸಿದ್ದರಾಮಯ್ಯ ಅವರ ಬಣದ ಲೆಕ್ಕಚಾರ. ಇದಕ್ಕಾಗಿ ಹಿರಿಯ ಶಾಸಕರು ದೆಹಲಿಗೆ ತೆರಳಿ ಸಂಪುಟ ಪುನರ್‌ರಚನೆಗೆ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ಒಂದು ವೇಳೆ ಹೈಕಮಾಂಡ್‌ ಸಂಪುಟ ಪುನರ್‌ರಚನೆಗೆ ಅವಕಾಶ ನೀಡಿದ್ದೇ ಆದರೆ ಆಗ ಮತ್ತೊಂದು ರೀತಿಯ ಸಂಕಷ್ಟ ಎದುರಾಗಲಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು, ಮೊಟ್ಟ ಮೊದಲ ಹಿಟ್‌ ವಿಕೆಟ್‌ ಆಗಲಿದ್ದಾರೆ. ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿದ ಆರೋಪ ಜಮೀರ್‌ ಮೇಲಿದೆ. ಕಾಂಗ್ರೆಸ್‌‍ನಲ್ಲಿ ಅಲ್ಪಸಂಖ್ಯಾತ ನಾಯಕರೇ ಪತ್ರಿಕಾಗೋಷ್ಠಿ ನಡೆಸಿ ಜಮೀರ್‌ ವಿರುದ್ಧ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌‍ಗೆ ಮೂಲ ಮತಬ್ಯಾಂಕ್‌ ಆಗಿದ್ದ ಅಲ್ಪಸಂಖ್ಯಾತರನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ ಹೆಸರಿನಲ್ಲಿ ಪ್ರಚೋಧಿಸಲಾಗಿತ್ತು. ಈ ಮೂಲಕ ಪಕ್ಷಕ್ಕೆ ಹಾನಿಮಾಡಲಾಗಿದೆ ಎಂಬುವುದು ಕಾಂಗ್ರೆಸ್‌‍ ನಾಯಕರ ಪರೋಕ್ಷ ಅಸಮಾಧಾನವಾಗಿದೆ. ಹೀಗಾಗಿ ಜಮೀರ್‌ ಅವರನ್ನು ಕೈ ಬಿಟ್ಟು ಅಲ್ಪಸಂಖ್ಯಾತ ಸಮುದಾಯದ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಬೇಕೆಂದು ಎಂಬ ಬೇಡಿಕೆ ಇದೆ. ಒಳ ಮೀಸಲಾತಿ ವಿಚಾರದಲ್ಲಿ ರಾಜೀನಾಮೆ ಬೆದರಿಕೆ ಹಾಕಿದ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಬದಲಾವಣೆ ಮಾಡಿ, ಅವರ ಪುತ್ರಿ ರೂಪಕಲಾ ಅವರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ.

ಪಶುಸಂಗೋಪಣಾ ಸಚಿವ ಕೆ.ವೆಂಕಟೇಶ್‌, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಣ್ಣಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ್‌, ಜವಳಿ ಸಚಿವ ಶಿವಾನಂದ ಪಾಟೀಲ್‌, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌, ಯೋಜನಾ ಸಚಿವ ಡಿ.ಸುಧಾಕರ್‌ ಸೇರಿದಂತೆ ಹಲವರನ್ನು ಕೈಬಿಡಬೇಕಾದ ಪರಿಸ್ಥಿತಿ ಇದೆೆ.

ಇವರ ಪೈಕಿ ಜಮೀರ್‌ ಅಹಮದ್‌ ಖಾನ್‌, ಮಹದೇವಪ್ಪ, ಡಿ.ಸುಧಾಕರ್‌ ಸೇರಿದಂತೆ ಕೆಲವರು ಸಿದ್ದರಾಮಯ್ಯ ಅವರ ಪರಮಾಪ್ತ ಬಣದಲ್ಲಿದ್ದಾರೆ. ಅವರನ್ನು ಕೈಬಿಡಬೇಕಾದರೆ ಸಿದ್ದರಾಮಯ್ಯ ಅವರಿಗೆ ವ್ಯಕ್ತಿಗತ ನಷ್ಟವಾಗಲಿದೆ. ತಮ ಪರವಾಗಿ ಧ್ವನಿ ಎತ್ತಲು ಸಂಪುಟದಲ್ಲಿ ಸಚಿವರ ಕೊರತೆ ಕಾಣಿಸಿಕೊಳ್ಳಲಿದೆ. ಒಂದೆಡೆ ನಾಯಕತ್ವ ಬದಲಾವಣೆಯಿಂದ ತಪ್ಪಿಸಿಕೊಳ್ಳಲು ಸಂಪುಟ ಪುನರ್‌ರಚನೆ ಮಾಡಬೇಕಾದ ಅನಿವಾರ್ಯತೆ ಇದ್ದರೆ, ಮತ್ತೊಂದೆಡೆ ಆಪ್ತರನ್ನು ಸಂಪುಟದಿಂದ ದೂರ ಇಡುವ ಇಕ್ಕಟ್ಟಿನ ಪರಿಸ್ಥಿತಿಗೆ ಸಿದ್ದರಾಮಯ್ಯ ಚಿಂತಿತರಾಗಿದ್ದಾರೆ.

ಅತ್ತ ದರಿ, ಇತ್ತ ಹುಲಿ ಎಂಬಂತಹ ಪರಿಸ್ಥಿತಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಒಂದೆಡೆ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಕೆಲವು ನಿರಂತರವಾದ ಲಾಬಿ ನಡೆಸುತ್ತಿದ್ದರೆ, ಮತ್ತೆ ಕೆಲವು ಸಚಿವರು ತಮ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.

ದೆಹಲಿ ಯಾತ್ರೆಗಳು, ಪ್ರತ್ಯೇಕ ಸಭೆಗಳು ಜೋರಾಗಿವೆ. ಹಿರಿಯರು, ಕಿರಿಯರು ಜೊತೆ-ಜೊತೆಯಲ್ಲಿಯೇ ಅವಕಾಶಗಳಿಗಾಗಿ ಪಟ್ಟುಹಿಡಿದಿದ್ದಾರೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಾಯಕತ್ವ ವಿವಾದ ಇತ್ಯರ್ಥಗೊಳ್ಳುವವರೆಗೂ ಸಂಪುಟ ಪುನರ್‌ ರಚನೆಯಾಗಬಾರದು ಎಂದು ಒತ್ತಡ ಹೇರುತ್ತಿದ್ದಾರೆ.

ಹೀಗಾಗಿ ಹೈಕಮಾಂಡ್‌ ಕೂಡ ಬಿಕ್ಕಟ್ಟಿಗೆ ಸಿಲುಕಿದೆ. ಶುಕ್ರವಾರದ ಸಭೆಯಲ್ಲಿ ಪಂಚರಾಜ್ಯಗಳ ಚುನಾವಣೆ ಆನಂತರದ ಫಲಿತಾಂಶ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಶುಕ್ರವಾರದ ಸಭೆ ಮೊದಲ ಹಂತದಲ್ಲಿ ಮಹತ್ವದ್ದಾಗಿದ್ದರೆ, ಪಂಚರಾಜ್ಯಗಳ ಚುನಾವಣೆ ಬಳಿಕ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಸಂಪುಟ ಪುನರ್‌ ರಚನೆ ಕುರಿತು ಸಮಾಲೋಚನೆ ನಡೆಸುವುದಾಗಿ ಮೂಲಗಳು ತಿಳಿಸಿವೆ.

RELATED ARTICLES

Latest News