ಬ್ಯಾಂಕಾಕ್, ಜ.19- ಒಂದು ಮಗುವಿನ ನೀತಿ ಮುಕ್ತಾಯಗೊಂಡು ದಶಕ ಕಳೆದರೂ ಚೀನಾದಲ್ಲಿ ಜನಸಂಖ್ಯೆ ಏರಿಕೆ ಕಾಣುವ ಬದಲಿಗೆ ಇಳಿಕೆಯಾಗುತ್ತಿದೆ. ಜನನ ಪ್ರಮಾಣ ಶೇ.17ಕ್ಕೆ ಕುಸಿದಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀನಾ, ತನ್ನ ಆತಂರಿಕ ಸುಧಾರಣೆ ಕಾರಣಕ್ಕೆ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಿತ್ತು. ಒಂದು ಕುಟುಂಬಕ್ಕೆ ಒಂದು ಮಗು ಎಂಬ ನೀತಿಯನ್ನು ಜಾರಿಗೆ ತಂದಿತ್ತು. ಜನಸಂಖ್ಯೆ ಸುಧಾರಣೆಯಾದ ಬಳಿಕ ಮತ್ತೆ ಜನಸಂಖ್ಯೆ ಹೆಚ್ಚಿಸಲು ಅಲ್ಲಿನ ಸರ್ಕಾರ ನಾನಾ ರೀತಿಯ ಸರ್ಕಸ್ ನಡೆಸುತ್ತಿದೆ. ಹೆಚ್ಚಿನ ಮಕ್ಕಳನ್ನು ಹೊಂದುವುದಕ್ಕೆ ನಗದು ಸಬ್ಸಿಡಿ ನೀಡಲಾಗುತ್ತಿದೆ. ಕಾಂಡೋಮ್ ಬಳಕೆಗೆ ಅವುಗಳ ಮೇಲೆ ತೆರಿಗೆ ವಿಧಿಸಲಾಗಿದೆ. ಹಲವು ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ.
ಸೋಮವಾರ ಬಿಡುಗಡೆಯಾದ ಜನಸಂಖ್ಯಾ ಅಂಕಿಅಂಶಗಳು ಈಗ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಕ್ಕೆ ಚೀನವನ್ನು ಸೀಮಿತಗೊಳಿಸಿವೆ. 140 ಕೋಟಿಯಷ್ಟಿದ್ದ ಚೀಣಾ ಜನಸಂಖ್ಯೆ ಕುಗ್ಗುತ್ತಲೇ ಇದೆ. ಸತತ ನಾಲ್ಕನೇ ವರ್ಷಗಳಿಂದ ಜನಸಂಖ್ಯೆ ಇಳಿಮುಖವಾಗಿಯೇ ಇದೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸುತ್ತವೆ. 2025 ರಲ್ಲಿ ಒಟ್ಟು ಜನಸಂಖ್ಯೆಯು 140 ಕೋಟಿ 40 ಲಕ್ಷದಷ್ಟಿತ್ತು. ಹಿಂದಿನ ವರ್ಷಕ್ಕಿಂತಲೂ ಇದು 30 ಲಕ್ಷ ಕಡಿಮೆಯಾಗಿತ್ತು.
2025 ರಲ್ಲಿ ಜನಿಸಿದ ಶಿಶುಗಳ ಸಂಖ್ಯೆ ಕೇವಲ 7.92 ಮಿಲಿಯನ್.ಇದು 1.62 ಮಿಲಿಯನ್ ಅಥವಾ ಶೇ.17 ರಷ್ಟು ಕುಸಿತವಾಗಿದೆ. 2024ರಲ್ಲಿ ಸ್ವಲ್ಪ ಏರಿಕೆ ಕಂಡಿದ್ದರೂ ಅದು ಖಾಯಂ ಎನ್ನಿಸಿಲ್ಲ. 2023 ರವರೆಗೆ ಸತತ ಏಳು ವರ್ಷಗಳ ಕಾಲ ಜನನ ಪ್ರಮಾಣ ಕಡಿಮೆಯಾಗಿವೆ.
ಸ್ಪರ್ಧಾತಕ ಸಮಾಜದಲ್ಲಿ ಮಗುವನ್ನು ಬೆಳೆಸುವ ವೆಚ್ಚಗಳು ಮತ್ತು ಒತ್ತಡಗಳ ನಿರ್ವಹಣೆ ಕಷ್ಟವೆಂಬ ಕಾರಣಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬಹಳಷ್ಟು ಕುಟುಂಬಗಳು ವಿಶ್ಲೇಷಿಸಿವೆ. ಆರ್ಥಿಕ ಹಿಂಜರಿತ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಏಷ್ಯಾದ ಇತರ ಹಲವು ದೇಶಗಳಂತೆ, ಚೀನಾದಲ್ಲೂ ಫಲವತ್ತತೆ ದರ ಕುಸಿಯುತ್ತಿದೆ. ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೊಂದುವ ಸರಾಸರಿ ಶಿಶುಗಳ ಸಂಖ್ಯೆ ಒಂದಕ್ಕೆ ಸೀಮಿತವಾಗಿದೆ. ಸರ್ಕಾರವು ನಿಯಮಿತವಾಗಿ ಫಲವತ್ತತೆ ದರವನ್ನು ಪ್ರಕಟಿಸದಿದ್ದರೂ, 2020 ರಲ್ಲಿ ಅದು 1.3 ಎಂದು ಅಲಿಖಿತವಾಗಿ ಜಾರಿಯಲ್ಲಿತ್ತು. ಈಗ ಮತ್ತೆ ಅದು 1 ರ ಆಸುಪಾಸಿನಲ್ಲಿದೆ ಎಂದು ಅಂದಾಜಿಸಲಾಗಿದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ 2025 ರಲ್ಲಿ ಜನನ ಪ್ರಮಾಣವು ದಾಖಲೆಯ ಅತ್ಯಂತ ಕಡಿಮೆಯಾಗಿದೆ. ಪ್ರತಿ 1 ಸಾವಿರ ಜನರಿಗೆ ಜನನ ದರ ಶೇ.5.63ರಷ್ಟಿದೆ. ಜನರು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದನ್ನು ನಿಷೇಧಿಸುವ ದಶಕಗಳ ನೀತಿಯನ್ನು ರದ್ದು ಮಾಡಿ, 2015 ರಲ್ಲಿ ಎರಡು ಮಕ್ಕಳಿಗೆ ಹೆಚ್ಚಿಸಿತು. ಜನಸಂಖ್ಯಾ ಕುಸಿತವನ್ನು ಗಮನಿಸಿ, 2021 ರಲ್ಲಿ ಮಿತಿಯನ್ನು ಮೂರು ಮಕ್ಕಳಿಗೆ ಬದಲಾವಣೆ ಮಾಡಿತ್ತು.
ಹೆಚ್ಚಿನ ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸಲು ನೀತಿ ಬದಲಾವಣೆ ಮಾಡಿ, ಜುಲೈನಿಂದ ಪ್ರತಿ ಮಗುವಿಗೆ 3,600 ಯುವಾನ್ (500) ನಗದು ಸಬ್ಸಿಡಿಗಳನ್ನು ಘೋಷಿಸಿದೆ. ಕಾಂಡೋಮ್‌ಗಳಿಗೆ ತೆರಿಗೆ ವಿಧಿಸಲು ಪ್ರಾರಂಭಿಸಿದೆ. 2025 ರಲ್ಲಿ ಚೀನಾ ಕಾಂಡೋಮ್‌ಗಳು ಸೇರಿದಂತೆ ಗರ್ಭನಿರೋಧಕಗಳನ್ನು ಮೌಲ್ಯವರ್ಧಿತ ತೆರಿಗೆ ವಿನಾಯಿತಿ ಪಟ್ಟಿಯಿಂದ ತೆಗೆದುಹಾಕಿತು. ಅಂದರೆ ಕಾಂಡೋಮ್‌ಗಳ ಮೇಲೆ ಜನವರಿ 1 ರಿಂದ ಜಾರಿಗೆ ಬರುವಂತೆ ಶೇ.13ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಮಕ್ಕಳ ಪಾಲನೆಯನ್ನು ಮತ್ತಷ್ಟು ಉತ್ತೇಜಿಸಲು, ಶಿಶುವಿಹಾರಗಳು ಮತ್ತು ಡೇಕೇರ್‌ಗಳ ಸೇವೆಗಳನ್ನು ತೆರಿಗೆ ವಿನಾಯಿತಿ ಪಟ್ಟಿಗೆ ಸೇರಿಸಲಾಗಿದೆ. 2023 ರವರೆಗೆ ಚೀನಾವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿತ್ತು, ಈಗ ಭಾರತ ವಿಶ್ವದ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.
