ಬೆಂಗಳೂರು. ಅ.23- ಪೋಲೆಂಡ್ ಮತ್ತು ಕರ್ನಾಟಕದ ನಡುವೆ ಹೂಡಿಕೆ, ವ್ಯಾಪಾರ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಚರ್ಚೆ ನಡೆಸಿದರು.
ಮುಖ್ಯಮಂತ್ರಿಯವರು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಭಾರತಪೋಲೆಂಡ್ ಉದ್ಯಮ ವೇದಿಕೆಯಲ್ಲಿ ಪೋಲೆಂಡ್ ಪ್ರಧಾನಿಯವರನ್ನು ಭೇಟಿ ಮಾಡಿದ್ದರು. ಈ ಸಭೆಯಲ್ಲಿ, ಕರ್ನಾಟಕವನ್ನು ಭಾರತ ಮತ್ತು ಪೋಲೆಂಡ್ ನಡುವಿನ ಹೂಡಿಕೆಗಳಿಗೆ ಪ್ರಮುಖ ಪ್ರವೇಶ ದ್ವಾರವನ್ನಾಗಿ ರೂಪಿಸುವ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು.
ಕರ್ನಾಟಕದಲ್ಲಿ ವೈಮಾನಿಕ, ರಕ್ಷಣಾ ಮತ್ತು ಉನ್ನತ ತಂತ್ರಜ್ಞಾನ ಆಧಾರಿತ ಉತ್ಪಾದನಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಪೋಲೆಂಡ್ ಆಸಕ್ತಿ ಹೊಂದಿದೆ ಎಂದು ಪ್ರಧಾನಿ ಡೊನಾಲ್‌್ಡ ಟಸ್ಕ್ ತಿಳಿಸಿದರು. ಕರ್ನಾಟಕ ಮತ್ತು ಪೋಲೆಂಡ್‌ನಲ್ಲಿ ತುಲನಾತಕವಾಗಿ ಯುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಎರಡೂ ಕಡೆಯ ಸಹಕಾರ ಪರಸ್ಪರ ಲಾಭದಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ತಂತ್ರಜ್ಞಾನ ಪರಿಸರ ವ್ಯವಸ್ಥೆ ಮತ್ತು ಪೋಲೆಂಡ್‌ನ ಉನ್ನತ ತಂತ್ರಜ್ಞಾನ ಉತ್ಪಾದನೆ, ಕೃತಕ ಬುದ್ಧಿಮತ್ತೆ ಹಾಗೂ ಹಸಿರು ಇಂಧನ ಕ್ಷೇತ್ರಗಳ ಪರಿಣತಿಯನ್ನು ಒಗ್ಗೂಡಿಸುವ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕರ್ನಾಟಕದಲ್ಲಿ ಪೋಲೆಂಡ್ ಮೂಲದ ಟಿಜೆಡ್ ಸಂಸ್ಥೆ ಹೂಡಿಕೆ ಮಾಡಲು ಮುಂದಾಗಿರುವುದನ್ನು ಅವರು ಸ್ವಾಗತಿಸಿದರು. ಸಂಸ್ಥೆಯ ಸುಮಾರು 80 ಕೋಟಿ ರೂ. ಹೂಡಿಕೆ ಯೋಜನೆಗಾಗಿ ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಈಗಾಗಲೇ ಐದು ಎಕರೆ ಜಮೀನು ಹಂಚಿಕೆ ಮಾಡಿದೆ. ಈ ಯೋಜನೆಯಿಂದ ಸುಮಾರು ಒಂದು ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪೋಲೆಂಡ್‌ನಲ್ಲಿ ಇನ್ಫೋಸಿಸ್ ಸಂಸ್ಥೆಯು ಸುಮಾರು ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್, ಇದು ಭಾರತ ಮತ್ತು ಪೋಲೆಂಡ್ ನಡುವಿನ ತಂತ್ರಜ್ಞಾನ ಸಹಕಾರದ ಬೆಳವಣಿಗೆಗೆ ಉತ್ತಮ ಉದಾಹರಣೆಯಾಗಿದೆ ಎಂದರು.
ಪೋಲೆಂಡ್ ಕಂಪನಿಗಳಿಗೆ ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹೂಡಿಕೆ ಮಾಡಲು ಅನುಕೂಲ ಕಲ್ಪಿಸುವುದರ ಜೊತೆಗೆ, ಕರ್ನಾಟಕದ ಉದ್ಯಮಗಳು ಪೋಲೆಂಡ್ನಲ್ಲಿ ವ್ಯಾಪಾರ ವಿಸ್ತರಿಸಲು ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕದ ನೂತನ ವೈಮಾನಿಕ ಮತ್ತು ರಕ್ಷಣಾ ಕೈಗಾರಿಕಾ ನೀತಿಯ ಕುರಿತು ಪೋಲೆಂಡ್ ಪ್ರಧಾನಿಗೆ ಮಾಹಿತಿ ನೀಡಿದ ಅವರು, ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಹೂಡಿಕೆ ಮಾಡಲು ಪೋಲೆಂಡ್ ಕಂಪನಿಗಳಿಗೆ ಆಹ್ವಾನ ನೀಡಿದರು. 2027ರಲ್ಲಿ ನಡೆಯಲಿರುವ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪೋಲೆಂಡ್ ದೇಶದ ಪಾಲುದಾರ ರಾಷ್ಟ್ರವಾಗಿ ಭಾಗವಹಿಸಬೇಕು ಎಂದು ಡಿ.ಕೆ. ಶಿವಕುಮಾರ್ ಆಹ್ವಾನಿಸಿದರು.
ಈ ಮೂಲಕ ಉಭಯ ದೇಶಗಳ ನಡುವಿನ ವ್‌ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ವೇದಿಕೆ ಸಿದ್ಧವಾಗಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಪೋಲೆಂಡ್‌ನಲ್ಲಿನ ಭಾರತದ ರಾಯಭಾರಿ ನೀತಾ ಭೂಷಣ್, ಪೋಲೆಂಡ್ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ವಕ್ತಾರ ಆಡಮ್ ಸ್ವ್ಲಾಪ್ಕಾ, ವಿದೇಶಾಂಗ ವ್ಯವಹಾರಗಳ ಇಲಾಖೆಯ ನಿರ್ದೇಶಕಿ ಮಲ್ಗೊರ್ಜಾಟಾ ಲಾಟ್ಕಿವಿಚ್-ಪಾವ್‌ಲಾಕ್ ಸೇರಿದಂತೆ ಪೋಲೆಂಡ್ ನಿಯೋಗದ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಹಾಗೂ ಜಾಗತಿಕ ಹೂಡಿಕೆ ಮತ್ತು ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಎಸ್.ಎಸ್. ನಕುಲ್ ಉಪಸ್ಥಿತರಿದ್ದರು.
