Friday, April 17, 2026
Homeರಾಜ್ಯವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಸ್ವಾಗತಿಸಿ 18 ಬೇಡಿಕೆಗಳ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಸ್ವಾಗತಿಸಿ 18 ಬೇಡಿಕೆಗಳ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah welcomes PM at airport and submits 18 demands

ಬೆಂಗಳೂರು,ಏ.15- ಕರ್ನಾಟಕಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಾತಿಯ ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಿಸಬೇಕು ಎಂಬುದು ಸೇರಿದಂತೆ ಒಟ್ಟು 18 ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಎಸ್‌‍ಸಿ-ಎಸ್‌‍ಟಿ, ಓಬಿಸಿ ಪಟ್ಟಿಯಲ್ಲಿರುವ ಜಾತಿಗಳ ಮೀಸಲಾತಿಯ ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಿಸಿರುವ ರಾಜ್ಯಸರ್ಕಾರದ ನಿರ್ಣಯವನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು. ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕೆಂದು ಮನವಿ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ 371ಜೆ ಅಡಿಯಲ್ಲಿ ಕೇಂದ್ರ ಸರ್ಕಾರ ವಾರ್ಷಿಕ 5 ಸಾವಿರ ಕೋಟಿ ರೂ. ಅನುದಾನವನ್ನು ನೀಡಬೇಕು. ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ಸಾರ್ವಜನಿಕ ವಲಯದ ಉದ್ಯಮವನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕವು ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದು, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಕೃಷಿ ಹಾಗೂ ಸೇವಾ ವಲಯದಲ್ಲಿ ಮುಂಚೂಣಿಯಲ್ಲಿದೆ.

ಸಹಕಾರ ಒಕ್ಕೂಟದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕ ಅತೀ ಹೆಚ್ಚು ಭಾಗಿದಾರಿಕೆ ಹೊಂದಿದೆ. ರಾಷ್ಟ್ರೀಯ ಖಜಾನೆಗೆ ಹೆಚ್ಚಿನ ತೆರಿಗೆ ನೀಡುತ್ತಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ತುರ್ತು ಗಮನ ನೀಡಬೇಕು. ಕರ್ನಾಟಕದ ಪ್ರಗತಿಯಲ್ಲಿ ವೇಗಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಕೋಲಾರದಲ್ಲಿ ರೈಲ್ವೆ ಕೋಚ್‌ ಫ್ಯಾಕ್ಟರಿಯನ್ನು ಈ ಮೊದಲು ರೈಲ್ವೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದಕ್ಕಾಗಿ ಕೋಲಾರದಲ್ಲಿ 1,123 ಎಕರೆ ಜಮೀನನ್ನು ಒದಗಿಸಲಾಗಿದೆ. ಆದರೆ ಈವರೆಗೂ ಅಲ್ಲಿ ಕಾರ್ಖಾನೆ ಆರಂಭವಾಗಿಲ್ಲ. ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮತ್ತು ಉತ್ತಮ ಸಂಪರ್ಕಕ್ಕಾಗಿ ಪ್ರಸ್ತಾಪಿತ ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆಯಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗವನ್ನು ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ಉಪನಗರ ರೈಲು ಮಾರ್ಗಕ್ಕೆ ಹಣ ಬಿಡುಗಡೆ ಮಾಡಬೇಕು. ಬೆಂಗಳೂರು-ಮುಂಬೈ ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆಯನ್ನು ಶೀಘ್ರವೇ ಉದ್ಘಾಟಿಸಬೇಕೆಂದು ಮನವಿ ಮಾಡಿದ್ದಾರೆ.

ಸುರಕ್ಷಿತ ಕುಡಿಯುವ ನೀರಿನ ಯೋಜನೆ ಜಲಜೀವನ್‌ ಮಿಷನ್‌ ಅಡಿ ಕೇಂದ್ರದ ಪಾಲು 17,554 ಕೋಟಿ ರೂಪಾಯಿಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ನವೀಕರಣ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕು. ನೀತಿ ನಿಯಮಗಳ ಸಮಸ್ಯೆಗಳನ್ನು ಬಗೆ ಹರಿಸಬೇಕು.

ಕಳೆದ 12 ವರ್ಷಗಳಿಂದಲೂ ರಾಜ್ಯದ ಹೊಸ ಹೆದ್ದಾರಿ ಯೋಜನೆಗಳನ್ನು ಕೇಂದ್ರ ಸ್ವೀಕರಿಸಿಲ್ಲ, ಈ ಬಗ್ಗೆ ಗಮನ ಹರಿಸಬೇಕು. ಬೆಂಗಳೂರಿಗೆ ಮೂಲ ಸೌಕರ್ಯ ಬಲಪಡಿಸಲು 6 ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಬೆಂಗಳೂರಿನ ಕುಡಿಯುವ ನೀರಿಗಾಗಿ 67 ಟಿಎಂಸಿ ಸಾಮರ್ಥ್ಯದ 400 ಮೆಗಾವ್ಯಾಟ್‌ ಜಲವಿದ್ಯುತ್‌ ಉತ್ಪಾದನೆಯ ಮೇಕೆದಾಟು ಯೋಜನೆಗೆ ಅನುಮೋದಿಸಲು ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಜಲ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪಿಎಂಕೆಎಸ್‌‍ವೈ-ಎಐಬಿಪಿ ಯೋಜನೆಯಡಿ ಭದ್ರಾಮೇಲ್ದಂಡೆ ಯೋಜನೆಗೆ 2023ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಮತ್ತು ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡಬೇಕು. ಕೃಷ್ಣಾಜಲ ವಿವಾದ ನ್ಯಾಯಮಂಡಳಿ ಎರಡರ ತೀರ್ಪನ್ನು ಅಧಿಸೂಚನೆ ಹೊರಡಿಸಬೇಕು. ಕರ್ನಾಟಕ ತನ್ನ ಪಾಲಿನ 173 ಟಿಎಂಸಿ ನೀರನ್ನು ಬಳಸಿಕೊಳ್ಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಮಹಾದಾಯಿ ನದಿಗೆ ಅಡ್ಡಲಾಗಿ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಮಂಡಳಿಯಿಂದ ಅನುಮತಿ ಕೊಡಿಸಬೇಕು. ನದಿಗಳ ಜೋಡಣೆಯಲ್ಲಿ ಗೋದಾವರಿ-ಕಾವೇರಿ, ಬೇಡ್ತಿ-ವರದಾ ಜೋಡಣೆಯ ಯೋಜನೆಯಲ್ಲಿ ಕರ್ನಾಟಕಕ್ಕೆ ಕನಿಷ್ಠ 40 ರಿಂದ 45 ಟಿಎಂಸಿ ನೀರು ಹಂಚಿಕೆಯಾಗುವಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಯಚೂರಿನಲ್ಲಿ ಏಮ್ಸೌ ಸ್ಥಾಪನೆಗೆ ಅನುಮೋದನೆ ನೀಡಬೇಕು. 2 ಸಾವಿರ ಮೆಗಾವ್ಯಾಟ್‌ ಸಾಮರ್ಥ್ಯದ ಶರಾವತಿ ಪಂಪ್‌ ಸ್ಟೋರೇಜ್‌ ಯೋಜನೆಗೆ ಅರಣ್ಯ ಪರಿಷ್ಕರ ಮತ್ತು ವನ್ಯಜೀವಿಗಳ ಪರಿಷತ್ತಿನಿಂದ ಅನುಮೋದನೆ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES

Latest News