ಹೊಸಪೇಟೆ,ಮೇ 28- ರಾಜ್ಯದ ಜನರ ಪಾಲಿಕೆ ಕಾಂಗ್ರೆಸ್ ಸರ್ಕಾರ ಶಾಪವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರ ನಂತರ ಯಾರೇ ಮುಖ್ಯಮಂತ್ರಿಗಳಾದರೂ ರಾಜ್ಯದ ಸ್ಥಿತಿ ಸುಧಾರಣೆಯಾಗುವ ವಿಶ್ವಾಸ ಇಲ್ಲ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನಂತರ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಕಾಂಗ್ರೆಸ್ ಪಕ್ಷದ ಮೂರು ವರ್ಷಗಳ ಆಡಳಿತದಲ್ಲಿ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಸರ್ಕಾರ ಜನರಿಗೆ ಉತ್ತಮ ಆಡಳಿತ ನೀಡುವ ಪ್ರಯತ್ನ ಮಾಡಲೇ ಇಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಈ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುವಲ್ಲಿ ತೊಡಗಿತ್ತೇ ಹೊರತು ರೈತರ, ಬಡವರ, ಯುವಕರ ಸಮಸ್ಯೆಗಳನ್ನು ಆಲಿಸಲಿಲ್ಲ. ಮುಖ್ಯಮಂತ್ರಿ ಕುರ್ಚಿಯ ಕಚ್ಚಾಟವೇ ದೊಡ್ಡದಾಗಿದೆ. ಅಧಿಕಾರಕ್ಕಾಗಿ ನಡೆಯುತ್ತಿರುವ ಆಂತರಿಕ ಕಚ್ಚಾಟ ಆಡಳಿತದ ಮೇಲೆ ಪರಿಣಾಮ ಬೀರಿದೆ. ಈ ಸರ್ಕಾರದ ಮೇಲೆ ಯುವಕರು ಅಸಮಾಧಾನಗೊಂಡಿದ್ದಾರೆ.
ರಾಜ್ಯ ಡ್ರಗ್ಸ್ ರಾಜಧಾನಿಯಾಗುವತ್ತ ಸಾಗಿದೆ ಎಂದು ದೂರಿದರು.
ಸಿದ್ದರಾಮಯ್ಯರು ರಾಜೀನಾಮೆ ನೀಡಿದ ನಂತರ ಸಿಎಂ ಆಗಿ ಡಾ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅಧಿಕಾರಕ್ಕೆ ಬರಬೇಕು ಎಂಬ ಕಚ್ಚಾಟ ಆರಂಭವಾಗಿದೆ. ಯಾರೇ ಸಿಎಂ ಆದರೂ ರಾಜ್ಯಕ್ಕೆ ಲಾಭ ಇಲ್ಲ. ಇಲ್ಲಿನ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯವಾಗದಷ್ಟು ದಿವಾಳಿಯಾಗಿದೆ. ಸಿಎಂ ಸ್ಥಾನದ ಗುದ್ದಾಟಕ್ಕೆ ಅಷ್ಟು ಬೇಗ ಉತ್ತರ ಕಂಡುಕೊಳ್ಳುವ ಶಕ್ತಿ ಕಾಂಗ್ರೆಸ್ ಹೈಕಮಾಂಡ್ಗೆ ಇಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಒಂದು ರೀತಿ ಅರಾಜಕತೆ ಸೃಷ್ಟಿಯಾಗುತ್ತಿದೆ. ಭ್ರಷಾಚಾರದಿಂದ ಸಾಮಾನ್ಯ ಜನ ಬೇಸತ್ತಿದ್ದಾರೆ. ರಸಗೊಬ್ಬರ ಕೃತಕ ಅಭಾವ ಸೃಷ್ಟಿಸುವ ಷಡ್ಯಂತ್ರ ನಡೆದಿದೆ. ಉಸ್ತುವಾರಿ ಸಚಿವರು ಹಾಗೂ ಶಾಸಕರು ರೈತರ ಸಮಸ್ಯೆ ಕೇಳುತ್ತಿಲ್ಲ. ಅವರೆಲ್ಲ ಅಧಿಕಾರಕ್ಕಾಗಿ ದೆಹಲಿಯಲ್ಲಿ ಬೀಡು ಬಿಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಪೂರ್ಣ ಬಹುಮತ ಇದೆ. ನಾವು ಇದರಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ವಿರೋಧ ಪಕ್ಷವಾಗಿ ಕೆಲಸವನ್ನು ಸಮರ್ಥವಾಗಿ ಮಾಡಿದ್ದೇವೆ. ಸರ್ಕಾರದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುವುದಿಲ್ಲ. ಮೂಗು ತೂರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
