Homeರಾಜ್ಯವೈವಾಹಿಕ ಸಮಸ್ಯೆ ಪರಿಹಾರ ನೆಪದಲ್ಲಿ ಹಣ-ಚಿನ್ನ ದೋಚಿ ಪರಾರಿಯಾದ ನಕಲಿ ಸ್ವಾಮೀಜಿ

ವೈವಾಹಿಕ ಸಮಸ್ಯೆ ಪರಿಹಾರ ನೆಪದಲ್ಲಿ ಹಣ-ಚಿನ್ನ ದೋಚಿ ಪರಾರಿಯಾದ ನಕಲಿ ಸ್ವಾಮೀಜಿ

Fake Swamiji absconds after stealing money and gold

ಬೆಂಗಳೂರು,ಜು.18- ಮಗಳ ವೈವಾಹಿಕ ಸಮಸ್ಯೆ ಪರಿಹರಿಸುತ್ತೇನೆಂದು ಮಹಿಳೆಯನ್ನು ನಂಬಿಸಿ ಪೂಜೆ ನೆಪದಲ್ಲಿ 1 ಲಕ್ಷ ನಗದು ಹಾಗೂ 43 ಗ್ರಾಂ ಚಿನ್ನಾಭರಣಗಳನ್ನು ದೋಚಿಕೊಂಡು ನಕಲಿ ಸ್ವಾಮೀಜಿ ಪರಾರಿಯಾಗಿರುವ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಗಲಗುಂಟೆಯ ನಿವಾಸಿ ಗೀತಾ ಎಂಬುವವರ ಕಿರಿಯ ಮಗಳಿಗೆ ಮದುವೆಯಾಗಿರಲಿಲ್ಲ. ಹಾಗಾಗಿ ಮಗಳ ವೈವಾಹಿಕ ಸಮಸ್ಯೆಯನ್ನು ನೆರೆ ಮನೆಯವರ ಬಳಿ ಹೇಳಿಕೊಂಡಿದ್ದರು. ಆ ಸಂದರ್ಭದಲ್ಲಿ ಸ್ವಾಮೀಜಿ ಶಿವಕಾಲಿ ಅಲಿಯಾಸ್‌ ನಿತಿನ್‌ ಎಂಬಾತನನ್ನು ಗೀತಾ ಅವರಿಗೆ ಪರಿಚಯಿಸಿಕೊಟ್ಟಿದ್ದಾರೆ. ಆ ಸ್ವಾಮೀಜಿ ಬಳಿ ಹೋಗಿ ಕೌಟುಂಬಿಕ ಸಮಸ್ಯೆಯನ್ನು ಹೇಳಿಕೊಂಡಾಗ ನಿಮ್ಮ ಮಗಳಿಗೆ ಮಾಟಮಂತ್ರ ಮಾಡಿಸಲಾಗಿದೆ ಎಂದು ಹೆದರಿಸಿದ್ದಾನೆ.

ಮಗಳ ದೋಷ ನಿವಾರಣೆಗಾಗಿ ನಿಮ್ಮ ಮನೆಗೆ ಬಂದು ಪೂಜೆ ಮಾಡುವುದಾಗಿ ತಿಳಿಸಿದ್ದಲ್ಲದೇ ಪೂಜೆ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಬಾರದು ಎಂದು ಸೂಚಿಸಿದ್ದರೂ ಮಹಿಳೆ ಎಚ್ಚೆತ್ತುಕೊಂಡಿಲ್ಲ.ಜೂ.26 ರಂದು ಸಂಜೆ 4 ಗಂಟೆ ಸುಮಾರಿಗೆ ಇವರ ಮನೆಗೆ ಬಂದ ಸ್ವಾಮೀಜಿ ನಿಂಬೆಹಣ್ಣು, ಬೂದಿ, ಅರಿಶಿಣ ಹಾಗೂ ಮೆಂತ್ಯೆ ಕಾಳುಗಳನ್ನು ಬಳಸಿ ಪಠಿಸುತ್ತಾ ಮಹಿಳೆಯ ನಂಬಿಕೆ ಗಳಿಸಿದ್ದಾನೆ.

ಪೂಜೆ ಮಧ್ಯದಲ್ಲಿ ಮಗಳ ದೋಷ ನಿವಾರಣೆಗಾಗಿ ಮನೆಯಲ್ಲಿರುವ ಹಣ, ಆಭರಣಗಳನ್ನು ತಂದಿಡಬೇಕೆಂದು ಹೇಳಿದ್ದಾನೆ. ಸ್ವಾಮೀಜಿ ಮಾತನ್ನು ನಂಬಿದ ಮಹಿಳೆ ಮನೆಯ ನವೀಕರಣಕ್ಕಾಗಿ ಇಟ್ಟಿದ್ದ 1.3 ಲಕ್ಷ ರೂ. ಹಣ ಹಾಗೂ 43 ಗ್ರಾಂ ಚಿನ್ನದ ಸರ, ಬಳೆ ಮತ್ತು ಉಂಗುರಗಳನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ತಂದು ಕೊಟ್ಟಿದ್ದಾರೆ.

ಅದನ್ನು ನೋಡಿ ತನ್ನ ಸಂಚು ಲಿಸಿತು ಎಂದು ತಿಳಿದು ತನ್ನ ಬ್ಯಾಗ್‌ನಲ್ಲಿ ತಂದಿದ್ದ ಬೂದಿಯನ್ನು ಗೀತಾ ಅವರ ಮುಖಕ್ಕೆ ಎರಚಿ ಬೆನ್ನಿನ ಮೇಲೆ ಜೋರಾಗಿ ಗುದ್ದಿದ್ದಾನೆ. ಆ ವೇಳೆ ಗೀತಾ ಪ್ರಜ್ಞೆ ತಪ್ಪಿದ್ದಾರೆ.ತಕ್ಷಣ ಹಣ, ಆಭರಣವಿದ್ದ ಗಂಟನ್ನು ತೆಗೆದುಕೊಂಡು ತಾನು ತಂದಿದ್ದ ಹುಣಸೇಹಣ್ಣಿನ ಗಂಟನ್ನು ಇಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಅರ್ಧಗಂಟೆ ಬಳಿಕ ಗೀತಾ ಅವರಿಗೆ ಪ್ರಜ್ಞೆ ಬಂದು ನೋಡಿದಾಗ ಸ್ವಾಮೀಜಿ ಹಾಗೂ ಹಣ , ಆಭರಣವಿದ್ದ ಗಂಟು ಸಹ ಇರಲಿಲ್ಲ.ಅಂದು ಸಂಜೆ ಗೀತಾ ಅವರು ಹೊರಗೆ ಹೋದಾಗ ಸ್ವಾಮೀಜಿ ಕಾಣಿಸಿಕೊಂಡಾಗ ಹಣ, ಆಭರಣದ ಬಗ್ಗೆ ವಿಚಾರಿಸಿದಾಗ ನಿಮ್ಮ ಮನೆಯಲ್ಲಿರುವ ಬಟ್ಟೆಯ ಗಂಟಿನಲ್ಲಿ ಕಟ್ಟಿ ಇಡಲಾಗಿದೆ. ಎರಡು ದಿನಗಳ ಕಾಲ ಯಾರೂ ಮುಟ್ಟಬಾರದು, ಒಂದು ವೇಳೆ ಮುಂಚಿತವಾಗಿ ಬಿಚ್ಚಿದರೆ ರಕ್ತ ವಾಂತಿ ಮಾಡಿಕೊಂಡು ಸಾಯುತ್ತೀರ ಎಂದು ಹೇಳಿದ್ದಾನೆ. ಹಾಗಾಗಿ ಎರಡು ದಿನ ಗಂಟು ಬಿಚ್ಚಿರಲಿಲ್ಲ. ಮೂರನೇ ದಿನ ಗಂಟು ಬಿಚ್ಚಿ ನೋಡಿದಾಗ ಅದರಲ್ಲಿ ಹುಣಸೇಹಣ್ಣು ಇರುವುದು ಕಂಡು ಆತಂಕಗೊಂಡು ತಕ್ಷಣ ಸ್ವಾಮೀಜಿಗೆ ಕರೆ ಮಾಡಿದಾಗ ಅವರ ಮೊಬೈಲ್‌ ಸ್ವಿಚ್‌ ಆ್‌‍ ಆಗಿತ್ತು.

ಮನೆಯಲ್ಲಿದ್ದ ಹಣ, ಆಭರಣವೆಲ್ಲಾ ನಕಲಿ ಸ್ವಾಮೀಜಿಯ ಪಾಲಾಯಿತಲ್ಲ ಎಂದು ಕಣ್ಣೀರು ಹಾಕಿರುವ ಗೀತಾ ಅವರು ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿರುವ ನಕಲಿ ಸ್ವಾಮೀಜಿ ಶಿವಕಾಲಿ ಎಂಬಾತನ ಪತ್ತೆಗಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಶೋಧ ಮುಂದುವರೆಸಿದ್ದಾರೆ.

RELATED ARTICLES

Latest News