ಬೆಂಗಳೂರು, ಡಿ.27- ನಗರದ ಬೀದಿ ನಾಯಿಗಳ ರಕ್ಷಣೆಗೆ ಮಾಜಿ ಸಂಸದೆ ಮನೇಕಾ ಗಾಂಧಿ ಮುಂದೆ ಬಂದಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ನಗರದ ಬೀದಿ ನಾಯಿಗಳನ್ನು ಸಮರ್ಪಕವಾಗಿ ಸಂರಕ್ಷಣೆ ಮಾಡುವಂತೆ ಅವರು ಜಿಬಿಎ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಬೀದಿ ನಾಯಿಗಳಿಗೆ ಸರಿಯಾದ ಶೆಲ್ಟರ್ ನೀಡದಿದ್ದರೆ ನಿಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಜಿಬಿಎ ನೌಕರರು ಕೆಲ ಬೀದಿ ನಾಯಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಸಂದರ್ಭದಲ್ಲೇ ಮನೇಕಾ ಗಾಂಧಿ ಈ ವಿಚಾರದಲ್ಲಿ ಎಂಟ್ರಿ ಪಡೆದಿರುವುದು ಗಮನ ಸೆಳೆದಿದೆ. ಸ್ವತಃ ಮನೇಕಾ ಗಾಂಧಿ ಅವರೇ ನಿನ್ನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಕರೆ ಮಾಡಿ ಈ ಎಚ್ಚರಿಕೆ ನೀಡಿದ್ದಾರೆ.
ಬೀದಿ ನಾಯಿಗಳನ್ನು ಜಿಬಿಎ ಅಧಿಕಾರಿಗಳು ನಡೆಸಿಕೊಳ್ಳುತ್ತಿರುವುದರ ಬಗ್ಗೆ ಕೆಲ ಪ್ರಾಣಿ ಪ್ರಿಯರು ಪೊಲೀಸ್ ಠಾಣೆಗೆ ದೂರು ನೀಡಿರುವ ಮಾಹಿತಿ ಮೇರೆಗೆ ಮನೇಕಾ ಗಾಂಧಿ ಅವರು ಸ್ವತಃ ಬೀದಿ ನಾಯಿಗಳ ರಕ್ಷಣೆಗೆ ಕಂಕಣ ತೊಟ್ಟಿದ್ದಾರೆ.ಮಹೇಶ್ವರ್ ರಾವ್ ಅವರೊಂದಿಗೆ ಮಾತನಾಡಿರುವ ಅವರು, ಬೀದಿನಾಯಿಗಳನ್ನು ಸೆರೆಹಿಡಿಯುವ ಕಾರ್ಯದ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ನಾಯಿಗಳಿಗೆ ನೀಡಿರುವ ಆಶ್ರಯ, ಆಹಾರದ ಕ್ವಾಲಿಟಿಯ ಮಾಹಿತಿಯನ್ನು ಅವರು ಕೇಳಿದ್ದಾರೆ. ಯಾವುದೇ ಬೀದಿ ನಾಯಿಗೆ ಅನ್ಯಾಯ ಅಗಬಾರದು. ಸುಪ್ರೀಂ ಕೋರ್ಟ್ ಸೂಚನೆಯಂತೆ ಊಟ, ವಸತಿ ಸೌಕರ್ಯ ಒದಗಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.
