ಬೆಂಗಳೂರು,ಏ.23- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ನೀತಿ ವೈಫಲ್ಯದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ 22ರವರೆಗೆ ಬಹುತೇಕ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಂಬಳವನ್ನೇ ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ನೀತಿಗಳ ವೈಫಲ್ಯ ಹಾಗೂ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ಪರಿಣಾಮ ರಾಜ್ಯದ ಸುಮಾರು 5 ಲಕ್ಷ ಸರ್ಕಾರಿ ನೌಕರರ ಪೈಕಿ ಬಹುತೇಕ ನೌಕರರಿಗೆ ಏಪ್ರಿಲ್ ತಿಂಗಳ 22ರವರೆಗೆ ಸರ್ಕಾರ ಸಂಬಳವನ್ನೇ ನೀಡಿಲ್ಲ ಎಂದು ದೂರಿದ್ದಾರೆ.
ಕಳೆದ ವರ್ಷ ಎರಡು ತಿಂಗಳ ಅವಧಿಗೆ ಗೃಹಲಕ್ಷಿ ಹಣವನ್ನೇ ನುಂಗಿ ಹಾಕಿದ ಸರ್ಕಾರ, ಈ ವರ್ಷ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಕಾರಣಕ್ಕಾಗಿ ಮಾರ್ಚ್ ಅಂತ್ಯಕ್ಕೆ ಖಜಾನೆಯಲ್ಲಿದ್ದ ಹಣವನ್ನು ಗೃಹಲಕ್ಷಿ ಫಲಾನುಭವಿಗಳಿಗೆ ಹಂಚಿದೆ. ಪರಿಣಾಮ ತಿಂಗಳು ಕಳೆಯುತ್ತಾ ಬಂದರೂ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳ ಬದಲಾವಣೆ, ಸಂಪುಟ ಪುನಾರಚನೆ, ಮುಸ್ಲಿಮರ ತುಷ್ಟೀಕರಣ ಹೀಗೆ ಹಲವು ಆಂತರಿಕ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೈಯಕ್ತಿಕ ಪ್ರತಿಷ್ಠೆಯಲ್ಲಿ ಮುಳುಗಿ ಹೋಗಿದ್ದಾರೆ. ರಾಜ್ಯದ ಇದರ ನೇರ ಪರಿಣಾಮ ಜನರ ಮೇಲೆಬೀರಿದೆ ಎಂದು ಟೀಕಿಸಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಳವನ್ನೇ ಕೊಡಲು ಸಾಧ್ಯವಾಗದ ಈ ಸರ್ಕಾರ, ಈ ವರ್ಷ ಬಿರು ಬೇಸಿಗೆ ಹಾಗೂ ಬರದ ಛಾಯೆಯಲ್ಲಿ ಈಗಾಗಲೇ ಬಸವಳಿದು ಹೋಗಿರುವ ರಾಜ್ಯದ ಜನರನ್ನು ದೇವರೇ ಕಾಪಾಡಬೇಕು. ಪ್ರತಿಪಕ್ಷವಾಗಿ ಬಿಜೆಪಿ ಸರ್ಕಾರವನ್ನು ಬಡಿದೆಬ್ಬಿಸಿ ಕುಡಿಯುವ ನೀರಿಗೂ ಪರಿತಪಿಸುತ್ತಿರುವ ಜನ, ಜಾನುವಾರು ನೆರವಿಗೆ ಮುಂದಾಗುವಂತೆ ಹೋರಾಟ ನಡೆಸಲು ಬದ್ಧವಾಗಿದೆ ಎಂದಿದ್ದಾರೆ.
