Monday, December 8, 2025
Homeರಾಜ್ಯಒಂದೇ ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚೋಲ್ಲ ; ಮಧು ಬಂಗಾರಪ್ಪ

ಒಂದೇ ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚೋಲ್ಲ ; ಮಧು ಬಂಗಾರಪ್ಪ

Government schools will not be closed even if there is only one child; Madhu Bangarappa

ಬೆಂಗಳೂರು,ಡಿ.8- ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಪರಿಷತ್‌ನಲ್ಲಿ ಸ್ಪಷ್ಟಪಡಿಸಿದರು.

ಸದಸ್ಯ ಚಿದಾನಂದ ಎಂ.ಗೌಡ ಹಾಗೂ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಡಿಮೆ ವಿದ್ಯಾರ್ಥಿಗಳ ಸಂಖ್ಯೆಯಿರುವ ಶಾಲೆಗಳನ್ನು ಸರ್ಕಾರ ಪಕ್ಕದ ಶಾಲೆಗಳಿಗೆ ವಿಲೀನಗೊಳಿಸುತ್ತದೆ ಇಲ್ಲವೇ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತದೆ. ಇದಕ್ಕೆ ಮಾಧ್ಯಮಗಳು ಕೂಡ ಪುಷ್ಟಿ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಸರ್ಕಾರಿ ಶಾಲೆಗಳನ್ನು ಎಲ್ಲಿಯೂ ಮುಚ್ಚುತ್ತೇವೆ ಎಂದು ಇಲ್ಲವೇ ವಿಲೀನ ಮಾಡುತ್ತೇವೆ ಎಂದು ಹೇಳಿಲ್ಲ. ಅಗತ್ಯಬಿದ್ದರೆ ಸರ್ಕಾರಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತೇವೆ. ಈ ಬಗ್ಗೆ ಎದ್ದಿರುವ ಗೊಂದಲಗಳು ಕೇವಲ ಊಹಾಪೋಹ ಎಂದು ಸ್ಪಷ್ಟಪಡಿಸಿದರು.

ಕೆಲವು ಕಡೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಆದರೂ ಆ ಶಾಲೆಗಳಿಗೆ ನಾವು ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ ಕೊಡುತ್ತಿದ್ದೇವೆ. ಇದನ್ನು ಎಲ್ಲಿಯಾದರೂ ನಿಲ್ಲಿಸಿದೆಯೇ? ಎಂದು ವಿರೋಧಪಕ್ಷದ ಸದಸ್ಯರನ್ನು ಪ್ರಶ್ನೆ ಮಾಡಿದರು.

ನಮ ರಕ್ತದ ಕಣಕಣದಲ್ಲೂ ಕನ್ನಡ ಇದೆ. ಕನ್ನಡದ ಬಗ್ಗೆ ನಮಗೆ ಬದ್ಧತೆ ಇದೆ. ಕಾಳಜಿಯೂ ಇದೆ. ಹಿಂದಿನ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಯಾವ ದುಸ್ಥಿತಿಗೆ ತಂದಿದ್ದವು ಎಂದು ಹೇಳಲು ಹೋದರೆ ಬೇರೆ ಕತೆಯಾಗುತ್ತದೆ. ಅನುದಾನಿತ ಶಾಲೆಗಳಲ್ಲಿ ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಕ ಮಾಡಿದ ಮೊಟ್ಟ ಮೊದಲ ಸರ್ಕಾರ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಎಂದಾಗ ಆಡಳಿತ ಪಕ್ಷದ ಸದಸ್ಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಎಷ್ಟು ಮುಚ್ಚಿದೆ ಎಂದು ನಾನು ಸದನಕ್ಕೆ ಹೇಳಬೇಕಿದೆ. ಇಡೀ ದೇಶದಲ್ಲೇ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳು, ಗುಣಮಟ್ಟದ ಶಿಕ್ಷಣ, ಸೈಕಲ್‌ ವಿತರಣೆ ಸೇರಿದಂತೆ ಹಲವಾರು ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಶಾಲೆಯನ್ನು ಎಲ್ಲಾದರೂ ಮುಚ್ಚಿದ್ದರೆ ದಾಖಲೆ ಸಮೇತ ಕೊಡಿ ಎಂದು ಮಧು ಬಂಗಾರಪ್ಪ ಸವಾಲು ಹಾಕಿದರು.

ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದಕ್ಕಾಗಿಯೇ ರಾಜ್ಯದ ಪ್ರತಿಯೊಂದು ತಾಲ್ಲೂಕಿನ ಹೋಬಳಿಯಲ್ಲಿ ಕೆಪಿಎಸ್‌‍ ತೆರೆಯಲಾಗಿದೆ. ನಾನು ಹೇಳದೇ ಇರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಘೋಷಣೆ ಮಾಡಿದ್ದು 500 ಶಾಲೆ. ಈಗ 900 ಶಾಲೆಗಳನ್ನು ಪ್ರಾರಂಭಿಸಿದ್ದೇವೆ. ಇದು ನಮ ಸರ್ಕಾರದ ಬದ್ಧತೆ ಅಲ್ಲವೇ? ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ನಿಮ ಸರ್ಕಾರದ ಬಗ್ಗೆ ಮಾತನಾಡಿರುವುದನ್ನು ಹೇಳಬೇಕೇ ಎಂದಾಗ ಮಧ್ಯಪ್ರವೇಶ ಮಾಡಿದ ಜೆಡಿಎಸ್‌‍ನ ಬೋಜೇಗೌಡ ಅವರು, ಮಕ್ಕಳ ಸಂಖ್ಯೆ ಏಕೆ ಕಡಿಮೆಯಾಯಿತು ಎಂದು ಪ್ರಶ್ನೆ ಮಾಡಿದರು. ಆಗ ಕಾಂಗ್ರೆಸ್‌‍ನ ಪುಟ್ಟಣ್ಣ ಮಕ್ಕಳು ಕೂಡ ಹುಟ್ಟುತ್ತಿಲ್ಲ ಎಂದು ಹಾಸ್ಯಚಟಾಕಿ ಹಾರಿಸಿದರು.

RELATED ARTICLES

Latest News