ಬೆಂಗಳೂರು,ಏ.12- ಮಂಥ್ಲಿ ಮನಿ, ಹಫ್ತಾ ವಸೂಲಿ, ಕಾಸಿಗಾಗಿ ಪೋಸ್ಟಿಂಗ್ ದಂಧೆ, ಕಿಕ್‌ಬ್ಯಾಕ್, ಹೋಟೆಲ್ ಮತ್ತು ವಸತಿಗೃಹ (ಸಿಎಲ್-7) ಮಂಜೂರಾತಿಗೆ ಕೋಟ್ಯಂತರ ರೂಪಾಯಿ ಲಂಚ ವಸೂಲಿ ಮತ್ತು ಮಧ್ಯವರ್ತಿಗಳ ಹಾವಳಿ ಸೇರಿ ಒಂದಿಲ್ಲೊಂದು ಅಕ್ರಮ ನಡೆಯುತ್ತಿರುವ ಅಬಕಾರಿ ಇಲಾಖೆಯಲ್ಲಿ ನಿಯಮಬಾಹಿರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಲ ಅಧಿಕಾರಿಗಳು ನೂರಾರು ಸಿಎಲ್-7 ಪರವಾನಗಿ ಮಂಜೂರಾತಿ ಮಾಡಿರುವುದು ಲೋಕಾಯುಕ್ತ ವರದಿಯಲ್ಲಿ ಬಹಿರಂಗವಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ವಲಯ ಬಿಯುಡಿ- 2 ವ್ಯಾಪ್ತಿಯಡಿ ಬರುವ ಕೆ.ಆರ್.ಪುರದ ಮೇದಹಳ್ಳಿ, ಕೌದೇನಹಳ್ಳಿ, ಬೀದರಹಳ್ಳಿ, ರಾಮಪುರ ಸೇರಿ ಇತರ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ನೂರಾರು ಸಿಎಲ್-7 ಲೈಸೆನ್ಸ್ ಮಂಜೂರಾತಿ ಮಾಡಲಾಗಿದೆ.
ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ (ಸಿಎಲ್-9) ಮದ್ಯ ಸೇವನೆಗೆ ಇರುವ ಕಂಪಾರ್ಟ್‌ಮೆಂಟ್‌ಗಳನ್ನೇ ಸಿಎಲ್-7 ಕೊಠಡಿಗಳೆಂದು ನೀಲನಕಾಶೆ ತಯಾರಿಸಿರುವುದು, ಬೇರೆ ಕಟ್ಟಡದ ಕಿಚನ್, ರೂಂಗಳು, ಡೈನಿಂಗ್ ಹಾಲ್, ರೆಸ್ಟೋರೆಂಟ್ ಛಾಯಚಿತ್ರ ನೀಡಿರುವುದು, ಪಾರ್ಕಿಂಗ್ ವ್ಯವಸ್ಥೆಗೆ ಕೆರೆ ಜಾಗ ತೋರಿಸಿರುವುದು, ಸುಳ್ಳು ಟ್ರೇಡ್ ಲೈಸೆನ್ಸ್ ಕೊಟ್ಟಿರುವುದು, ಅಸ್ತಿತ್ವದಲ್ಲಿರುವ ಸಿಎಲ್-9 ಕಟ್ಟಡ ಮತ್ತು ಅದರ ವಿಳಾಸವನ್ನು ನಕಲಿ ದಾಖಲೆ ಸೃಷ್ಟಿಸಿ ನೂರಾರು ಸಿಎಲ್-7 ಲೈಸೆನ್ಸ್ ಮಂಜೂರಾತಿ ಮಾಡಲಾಗಿದೆ.
ಮೂವರು ಅಧಿಕಾರಿಗಳ ಕರಾಮತ್ತು :
ಕೆಲವೊಮೆ ಕಟ್ಟಡಗಳು ಇಲ್ಲದಿದ್ದರೂ ಬೋಗಸ್ ದಾಖಲೆ ಸೃಷ್ಟಿಸಿ ಸಿಎಲ್-7 ಲೈಸೆನ್‌್ಸ ನೀಡಲಾಗಿದೆ. ಅಬಕಾರಿ ಉಪ ಆಯುಕ್ತ ಅಜಿತ್‌ಕುಮಾರ್, ಉಪ ಅಧೀಕ್ಷಕ ತುಕಾರಂ ನಾಯಕ್ ಮತ್ತು ನಿರೀಕ್ಷಕ ಭರತ್ ಎಂಬುವರು ಕಾನೂನುಬಾಹಿರವಾಗಿ ಸಿಎಲ್-7 ಲೈಸೆನ್ಸ್ ನೀಡಿರುವುದು ವರದಿಯಲ್ಲಿ ತಿಳಿದುಬಂದಿದೆ.
ಕೆಲವೆಡೆ ಸಿಎಲ್-7 ಸನ್ನದು ಮಂಜೂರಾಗಿರುವ ಕಟ್ಟಡದಲ್ಲಿರುವ ಸಿಎಲ್-9 ಸನ್ನದುಗಳನ್ನು, ಸಿಎಲ್-7 ಸನ್ನದುಗಳು ಮಂಜೂರಾದ ನಂತರ ಬೇರೆ ಕಡೆಗೆ ಸ್ಥಳಾಂತರ ಮಾಡಿ ಆ ಕಟ್ಟಡವನ್ನು ಸಿಎಲ್-7 ಕಟ್ಟಡ ಎಂಬುದಾಗಿ ತೋರಿಸಲಾಗಿದೆ. ಸಿಎಲ್-9 ಕಟ್ಟಡ ಹಾಗೂ ಅದೇ ವಿಳಾಸಕ್ಕೆ ನಕಲಿ ದಾಖಲೆ ಸೃಷ್ಟಿಸಿ ಕರಾಮತ್ತು ತೋರಿರುವ ಈ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವರದಿ ಕೊಟ್ಟು ಯಾಮಾರಿಸಿದ್ದಾರೆ. ಮಧ್ಯವರ್ತಿಗಳ ಮೂಲಕ ಪ್ರತಿ ಲೈಸೆನ್‌್ಸ ಕೋಟ್ಯಂತರ ರೂಪಾಯಿ ಲಂಚ ವಸೂಲಿ ಮಾಡಿರುವ ಗುರುತರ ಆರೋಪಗಳಿವೆ.
ಈ ಕುರಿತು ವಕೀಲ ಡಾ.ಹರಿಪ್ರಸಾದ್ ಎಂಬುವರು ಕೊಟ್ಟಿರುವ ದೂರಿನನ್ವಯ ಲೋಕಾಯುಕ್ತರು ನಡೆಸಿದ್ದ ತನಿಖೆಯಲ್ಲಿ ಅಧಿಕಾರಿಗಳು ಹೇಗೆಲ್ಲಾ ಅಕ್ರಮ ಎಸೆಗಿರುವುದು ಸಾಬೀತಾಗಿದೆ.
ಬೆಂಗಳೂರಲ್ಲೇ ಬಿಡುಬಿಟ್ಟಿರುವ ಉಪ ಆಯುಕ್ತರು:
ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತ ಜಿಲ್ಲೆಗಳಲ್ಲೇ ಕೆಲ ಉಪ ಆಯುಕ್ತರು 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ಮತ್ತು ಅದರ ಸುತ್ತಮುತ್ತ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಬಕಾರಿ ಉಪ ಆಯುಕ್ತರನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಬೇಕೆಂಬ ನಿಯಮ ಇದೆ.
ಆದರೆ, ಸಾರ್ವತ್ರಿಕ ವರ್ಗಾವಣೆ ಸೇರಿ ಇತರ ಸಂದರ್ಭದಲ್ಲಿ ಕೆಲ ಉಪ ಆಯುಕ್ತರು ಸಿಂಡಿಕೇಟ್ ಮಾಡಿಕೊಂಡು ಆಯಕಟ್ಟಿನ ಜಾಗಕ್ಕೆ ಕೂರಲು ಕೋಟ್ಯಂತರ ರೂ.ಲಂಚ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಪ ಆಯುಕ್ತರು ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, ಬೆಂಗಳೂರು ನಗರ ವ್ಯಾಪ್ತಿಯ ಅಬಕಾರಿ ವಲಯದಲ್ಲೇ ಉಳಿದುಕೊಳ್ಳಲು ಕೆಲ ಭ್ರಷ್ಟ ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
