Homeರಾಜ್ಯರೈತರ ಸಂಕಷ್ಟಕ್ಕೆ ನೀಡಲು ಹಣವಿಲ್ಲವೇ..? : ಹೆಚ್ಡಿಕೆ ಪ್ರಶ್ನೆ

ರೈತರ ಸಂಕಷ್ಟಕ್ಕೆ ನೀಡಲು ಹಣವಿಲ್ಲವೇ..? : ಹೆಚ್ಡಿಕೆ ಪ್ರಶ್ನೆ

ಬೆಂಗಳೂರು,ಅ.23- ಭಾರತ್‌ ಜೋಡೊ ಹೆಸರಿನಲ್ಲಿ ಪಂಚಾಯಿತಿಗೆ 10 ಲಕ್ಷ ರೂ.ಗಳಂತೆ 1 ಸಾವಿರ ಕೋಟಿ ರೂ. ಖರ್ಚು ಮಾಡಲು ಹಣವಿದೆ. ರೈತರ ಸಂಕಷ್ಟಕ್ಕೆ ನೀಡಲು ಹಣವಿಲ್ಲವೇ? ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಕೇಂದ್ರಕ್ಕೆ ನೆರವು ಕೋರಿ ಪತ್ರ ಬರೆದರೆ ಸಾಕೇ? ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಪರಿಸ್ಥಿತಿಯ ಮನವರಿಕೆ ಮಾಡಿಕೊಡಬೇಡವೇ? ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಒಟ್ಟು 20,164 ಕೋಟಿ ರೂ. ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರಂತೆ. ನೇರವಾಗಿ ಕೇಂದ್ರ ಸಚಿವರನ್ನು ಭೇಟಿಯಾಗಬೇಕಲ್ಲವೇ? ಬರಕ್ಕೆ ಸಂಬಂಧಿಸಿದಂತೆ ನಾಲ್ಕು ರೀತಿಯ ಆರ್ಥಿಕ ನೆರವು ಕೇಳಿದರೆ ರಾಜ್ಯ ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ ಎಂದು ಭಾವಿಸುವುದಿಲ್ಲವೇ? ಎಂದು ಹೇಳಿದರು.

ಪ್ರತೀ ರೈತರಿಗೆ 2500 ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ ರಾಜ್ಯಸರ್ಕಾರ ಇದುವರೆಗೂ ಯಾರಿಗೂ ಕೊಟ್ಟಿಲ್ಲ. ರಾಹಲ್‌ಗಾಂಧಿ ವಿದೇಶ ಪ್ರವಾಸ ಮುಗಿದ ಮೇಲೆ 500 ನಿರ್ದೇಶಕರನ್ನು ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡಲು ನಿರ್ಧರಿಸಿ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರಂತೆ. ಈ ರೀತಿ ದುಂದು ವೆಚ ಏಕೆ ಮಾಡಬೇಕು? ಎಂದು ಪ್ರಶ್ನಿಸಿದರು.

ಒಂದೆಡೆ ಬರದಿಂದಾಗಿ ರೈತರು ಗುಳೆ ಹೋಗುವ ಪರಿಸ್ಥಿತಿ ಉಂಟಾಗಿದ್ದರೆ ಪ್ರಜಾಸೇವೆ ಗ್ಯಾರಂಟಿ ಸಮಿತಿ ಅಧ್ಯಕ್ಷರ ನೇಮಕ ಮಾಡಿ ಹಣ ವ್ಯಯ ಮಾಡಲಾಗುತ್ತಿದೆ. ಈ ಬಾರಿಯ ಮೈಸೂರು ದಸರಾ ಅವ್ಯವಸ್ಥೆಯ ಆಗರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ಟೈಲ್‌ ಅನುಕರಣೆ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೊರಟಿದ್ದಾರೆ. ಅಧಿಕಾರಿಗಳಿಗೆ ಮಂತ್ರಿಗಳನ್ನು ಗುರುತಿಸಲಾಗದ ಸ್ಥಿತಿ ಇದೆ ಎಂದರೆ ಹೇಗೆ? ಎಂದು ವ್ಯಂಗ್ಯವಾಡಿದರು. ಈ ಬಾರಿ ಜಟ್ಟಿ ಕಾಳಗ ರದ್ದುಪಡಿಸಿದ್ದಾರೆ. ಜಟ್ಟಿ ಕಾಳಗದಲ್ಲಿ ರಕ್ತ ಬೀಳಲಿಲ್ಲ, ಮಗುವಿನ ತಲೆಯಲ್ಲಿ ರಕ್ತ ಹರಿಸಿದ್ದಾರೆ ಎಂದು ಟೀಕಿಸಿದರು.

RELATED ARTICLES
spot_img

Latest News