ಮೈಸೂರು,ಅ.21- ವಿಜಯದಶಮಿ ಜಂಬೂಸವಾರಿ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗಿನ ರಾಜಬೀದಿಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.
ಹಿರಿಯ ಅಧಿಕಾರಿಗಳು, ಡಿವೈಎಸ್ಪಿ, ಎಸಿಪಿ, ಇನ್ಸ್ ಪೆಕ್ಟರ್ಗಳು ಸೇರಿದಂತೆ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೋಂ ಗಾರ್ಡ್ಸ್ , ಕೆಎಸ್ಆರ್ಪಿ, ಸಿಎಆರ್ ತುಕಡಿ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗೂ ಭದ್ರತೆಯ ಹೊಣೆ ನೀಡಲಾಗಿತ್ತು.
ಜಂಬೂಸವಾರಿ ಸಾಗುವ ಮಾರ್ಗದ ಉದ್ದಕ್ಕೂ 150 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗಿತ್ತು. ಅರಮನೆಯ ಎಲ್ಲಾ ಪ್ರವೇಶ ದ್ವಾರಗಳಲ್ಲೂ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿತ್ತು.
