ಬೆಂಗಳೂರು,ಜ.4- ಬಳ್ಳಾರಿಯಲ್ಲಿ ಕಳೆದ ಗುರುವಾರ ನಡೆದ ಘಟನೆ ನಂತರ ತಮಗೂ ಹಾಗೂ ತಮ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ತಕ್ಷಣವೇ ಜೆಡ್ ಶ್ರೇಣಿಯ ಭದ್ರತೆಯನ್ನು ಒದಗಿಸಬೇಕೆಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಕೇಂದ್ರ ಗೃಹ ಸಚಿವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಒಂದು ವೇಳೆ ತಮ ಜೀವಕ್ಕೆ ತೊಂದರೆಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ರೆಡ್ಡಿ ಪತ್ರದಲ್ಲಿ ಎಚ್ಚರಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಲೀಮ್ ಅವರಿಗೆ ಪ್ರತ್ಯೇಕವಾಗಿ ನಾಲ್ಕು ಪತ್ರಗಳನ್ನು ಬರೆದಿರುವ ಜನಾರ್ದನ ರೆಡ್ಡಿ ತಮಗೆ ಹಾಗೂ ಕುಟುಂಬಕ್ಕೆ (ಜೆಡ್ ಕ್ಯಾಟಗರಿ) ಇಲ್ಲವೇ ಉನ್ನತ ಶ್ರೇಣಿಯ ಭದ್ರತೆಯನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.
ಕಳೆದ ಜ.1 ರಂದು ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಆತನ ಗೂಂಡಾ ಸಹಚರರಿಂದ ಪೆಟ್ರೋಲ್ ಬಾಂಬ್ ಹಾಗೂ ಬಂದೂಕು ಬಳಸಿ ನನ್ನ ಹತ್ಯೆಗೆ ಯತ್ನಿಸಿದ ಕುರಿತು ಮತ್ತು ಕಾನೂನು ಸುವ್ಯವಸ್ಥೆಯ ವೈಫಲ್ಯದ ಬಗ್ಗೆ, ನನಗೆ ತುರ್ತು ಝಡ್ ಶ್ರೇಣಿಯ ಭದ್ರತೆಯನ್ನು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಬಳ್ಳಾರಿಯ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಕಾರಣರಾದ ಮತ್ತು ಪೆಟ್ರೋಲ್ ಬಾಂಬ್ ಬಳಸಿದ ಶಾಸಕ ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಸಹಚರರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಹಾಗೂ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ನನಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿ ಮುಂದಿನ ದಿನಗಳಲ್ಲಿ ನನ್ನ ಅಥವಾ ನನ್ನ ಕುಟುಂಬದ ಮೇಲೆ ಯಾವುದೇ ದಾಳಿ ನಡೆದರೆ ಅದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಬ್ಬ ಹಾಲಿ ಶಾಸಕನ ಮನೆಗೆ ಪೆಟ್ರೋಲ್ ಬಾಂಬ್ ಮತ್ತು ಬಂದೂಕುಗಳೊಂದಿಗೆ ಬಂದು, ಪೊಲೀಸರ ಎದುರೇ ಗಂಟೆಗಟ್ಟಲೆ ದಾಂಧಲೆ ನಡೆಸಿ, ಸಾವಿರಾರು ಜನರ ಎದುರುಗಡೆಯೇ ಗುಂಡು ಹಾರಿಸಿ ಹತ್ಯೆಗೆ ಯತ್ನಿಸುವುದು ರಾಜ್ಯದಲ್ಲಿ ಜಂಗಲ್ ರಾಜ್ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯ, ಎದ್ದು ಕಾಣುತ್ತಿದೆ. ನನ್ನ ಪ್ರಾಣಕ್ಕೆ, ಇರುವ ಅಪಾಯ ತುಂಬಾ ಗಂಭೀರವಾಗಿದೆ. ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ವಿರೋಧಿಗಳು ಎಂತಹ ಕೃತ್ಯಕ್ಕೂ ಹೇಸುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಹೊಸ ವರ್ಷದ ದಿನದಂದೇ ಬಳ್ಳಾರಿಯ ನನ್ನ ನಿವಾಸದ ಮೇಲೆ ನಡೆದ ಭೀಕರ ದಾಳಿಯು ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ, ಬದಲಾಗಿ, ಬಳ್ಳಾರಿ ಶಾಸಕ ನಾರಾ ಭರುತ್ ರೆಡ್ಡಿ ಮತ್ತು ಅವರ ಗೂಂಡಾ ಪಡೆಯು ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಡೆಸಿದ ಪೂರ್ವನಿಯೋಜಿತ ಹತ್ಯೆಯ ಸಂಚು ಇದಾಗಿದೆ ಎಂದು ಆತಂಕ ಹೊರಹಾಕಿದ್ದಾರೆ.
ಅಂದು ಮಧ್ಯಾಹ್ನ 2 ಗಂಟೆಗೆ ಶಾಸಕ ನಾರಾ ಭರತ್ ರೆಡ್ಡಿಯವರ ಗೂಂಡಾ ಬೆಂಬಲಿಗರು ನನ್ನ ಮನೆಯ ಫೆನ್ಸಿಂಗ್ ಆವರಣದಲ್ಲಿ ಅಕ್ರಮವಾಗಿ ಬ್ಯಾನರ್ ಹಾಕಲು ಯತ್ನಿಸಿದರು. ನಮ ನಿವಾಸದ ಸಿಬ್ಬಂದಿ ಮತ್ತು ಪೊಲೀಸರ ಮಧ್ಯಪ್ರವೇಶದಿಂದ ಅವರನ್ನು ವಾಪಸ್ ಕಳುಹಿಸಲಾಯಿತು. ಸಂಜೆ 5.30 ಕ್ಕೆ ನಾರಾ ಭರತ್ ರೆಡ್ಡಿಯವರ ಅಪ್ತ ಸತೀಶ್ ರೆಡ್ಡಿ, 40-50 ಗೂಂಡಾಗಳೊಂದಿಗೆ ಬೀರ್ ಬಾಟಲ್, ಕಲ್ಲು ಮತ್ತು ಮಾರಕಾಸ್ತ್ರಗಳನ್ನು ಹಿಡಿದು ನನ್ನ ಮನೆಯ ಆವರಣದೊಳಗೆ ಅಕ್ರಮವಾಗಿ ನುಗ್ಗಿ ಕುರ್ಚಿ ಹಾಕಿ ಕುಳಿತು ಯಾರು ಬರುತ್ತಾರೋ ನೋಡುತ್ತೇವೆ ಎಂದು ಸವಾಲು ಹಾಕಿದರು ಎಂದು ಆರೋಪಿಸಿದ್ದಾರೆ.
ಈ ಕುರಿತು ಪೊಲೀಸರಿಗೆ ತಿಳಿಸಿದರೂ ಅವರು ಮೂಕಪ್ರೇಕ್ಷಕರಾಗಿದ್ದರು. ನಮ ಕಾರ್ಯಕರ್ತರೊಬ್ಬರು ಪ್ರಶ್ನಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿ ಜನಾರ್ದನ ರೆಡ್ಡಿ ಮನೆಯಲ್ಲಿದ್ದರೆ ಹೊರಗೆ ಬರಲು ಹೇಳು, ಇಂದು ಅವನ ಕಥೆ ಮುಗಿಸುತ್ತೇನೆ ಎಂದು ಅಸಭ್ಯ ಭಾಷೆ ಬಳಸಿ ಬೆದರಿಕೆ ಹಾಕಿದರು. ರಾತ್ರಿ 7ಕ್ಕೆ ನಾನು ಗಂಗಾವತಿಯಿಂದ ಮನೆಗೆ ತಲುಪಿದ ತಕ್ಷಣ, ಶಾಸಕ ನಾರಾ ಭರತ್ ರೆಡ್ಡಿಯವರ ಸೂಚನೆ ಮೇರೆಗೆ ಸತೀಶ್ ರೆಡ್ಡಿ ಮತ್ತು ಅವರ ಗೂಂಡಾ ಪಡೆ ದಾಳಿ ಆರಂಭಿಸಿತು. ಈ ವೇಳೆ ಸತೀಶ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್‌ಗಳು ನೇರವಾಗಿ ನನ್ನನ್ನೇ ಗುರಿಯಾಗಿಸಿಕೊಂಡು ಹಾಗೂ ನನ್ನ ಮನೆಯ ಮೇಲೆ ಸುಮಾರು 8 ಸುತ್ತು ಗುಂಡು ಹಾರಿಸಿದರು.
ಆದರೆ ದೇವರ ದಯೆ ಹಾಗೂ ಅದೃಷ್ಟವಶಾತ್ ನಾನು ಪ್ರಾಣಾಪಾಯದಿಂದ ಪಾರಾಗಿರುತ್ತೇನೆ. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ವಿಫಲರಾದರು ಎಂದು ದೂರಿದ್ದಾರೆ.
ರಾತ್ರಿ 9ಕ್ಕೆ ಸ್ವತಃ ಶಾಸಕ ನಾರಾ ಭರತ್ ರೆಡ್ಡಿ, ಎಸ್.ಪಿ ಸರ್ಕಲ್ ಬಳಿ ನೂರಾರು ಗೂಂಡಾಗಳೊಂದಿಗೆ ದೊಡ್ಡ ಕಲ್ಲುಗಳಲ್ಲದೆ ಪೆಟ್ರೋಲ್ ಬಾಂಬ್‌ಗಳನ್ನು ಹಿಡಿದು ನನ್ನ ಮನೆಯ ಮೇಲೆ ದಾಳಿ ಮಾಡಲು ಬಂದರು. ಈ ದಾಳಿಯ ಸಂದರ್ಭದಲ್ಲಿ ಸತೀಶ್ ರೆಡ್ಡಿ, ಖಾಸಗಿ ಆಂಗರಕ್ಷಕರು ನನ್ನ ಮನೆ ಮತ್ತು ಕಚೇರಿಯ ಮೇಲೆ ಮನಬಂದಂತೆ ಗುಂಡು ಹಾರಿಸಿದರು.
ಅಮಾಯಕನ ಸಾವು:
ಇದರ ಪರಿಣಾಮ, ದುರದೃಷ್ಟವಶಾತ್ ಓರ್ವ ಅಮಾಯಕ ವ್ಯಕ್ತಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ನಂತರ ಪೊಲೀಸರು ಟಿಯರ್ ಗ್ಯಾಸ್ ಬಳಸಿ ಗಾಳಿಯಲ್ಲಿ ಗುಂಡು ಹಾರಿಸಿ ಮತ್ತು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂಬುದೂ ಸೇರಿದಂತೆ ಅಂದು ನಡೆದ ಪ್ರತಿಯೊಂದು ಘಟನೆಯನ್ನೂ ಜನಾರ್ಧನ ರೆಡ್ಡಿ ಪತ್ರದಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ.
