Tuesday, January 6, 2026
Homeರಾಜ್ಯನಾಯಕತ್ವ ಬದಲಾವಣೆ ಅಸಾಧ್ಯ : ಸಚಿವ ಕೃಷ್ಣಬೈರೇಗೌಡ

ನಾಯಕತ್ವ ಬದಲಾವಣೆ ಅಸಾಧ್ಯ : ಸಚಿವ ಕೃಷ್ಣಬೈರೇಗೌಡ

Leadership change impossible: Minister Krishna Byre Gowda

ಬೆಂಗಳೂರು,ಜ.5- ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆ ಕಷ್ಟಸಾಧ್ಯ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ. ಒಂದು ಕಡೆ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಗುಸುಗುಸು ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಕೃಷ್ಣಬೈರೇಗೌಡರ ಈ ಹೇಳಿಕೆ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ.

ನನಗಿರುವ ಮಾಹಿತಿ ಪ್ರಕಾರ, ಸಿದ್ದರಾಮಯ್ಯನವರ ಪರ್ಯಾಯ ವ್ಯವಸ್ಥೆ ಕಷ್ಟಸಾಧ್ಯ. ಹಾಗೆಂದು ಬೇರೆಯವರಿಗೆ ಈ ಸಾಮರ್ಥ್ಯ ಇಲ್ಲ ಎಂದು ನಾನು ಹೇಳುವುದಿಲ್ಲ. ಅವರ ನಾಯಕತ್ವವೇ ಬೇರೆ, ಬೇರೆಯವರ ಸಾಮರ್ಥ್ಯವೇ ಬೇರೆ ಎಂದು ವಿಶ್ಲೇಷಿಸಿದರು.
ಉಪಮುಖ್ಯಮಂತ್ರಿಯಾಗಿರುವ ಡಿಕೆಶಿಯವರು ಪಕ್ಷ ಸಂಘಟನೆಯಲ್ಲಿ ಮುಂದಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ ಅವರು ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ರಾಜಕಾರಣದಲ್ಲಿ ಇಂತಹ ಕಾಂಬಿನೇಷನ್‌ ತುಂಬಾ ಅಪರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರಂತಹ ನಾಯಕತ್ವ ಇನ್ನೆಲ್ಲೂ ಇಲ್ಲ. ನಮಗೆಲ್ಲಾ ಅವರಿಂದ ಗೌರವ ಹೆಚ್ಚಿದೆ. ನಾಯಕತ್ವ ಬದಲಾವಣೆ ಕುರಿತಂತೆ ನಾನು ಹೆಚ್ಚು ಮಾತನಾಡುವುದಿಲ್ಲ. ಅದರ ಬಗ್ಗೆ ಹೇಳಲು ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ರಾಮಕೃಷ್ಣ ಹೆಗಡೆಯವರಂತಹ ದಿಗ್ಗಜರ ಸಾಲಿನಲ್ಲಿ ಸಿದ್ದರಾಮಯ್ಯನವರು ನಿಲ್ಲುತ್ತಾರೆ. ಹೀಗಾಗಿ ನಾಯಕತ್ವದ ಬದಲಾವಣೆ ಕಷ್ಟಸಾಧ್ಯ ಎಂದು ಪುನರುಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲೇ ಅತಿ ಹೆಚ್ಚು ದಿನಗಳ ಕಾಲ ಆಡಳಿತ ನಡೆಸಿದ ದಾಖಲೆಗೆ ಪಾತ್ರರಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಇತಿಹಾಸದಲ್ಲಿ ಇದೊಂದು ದಾಖಲೆಯೇ ಸರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿ, ಕೆಂಗಲ್‌ ಹನುಮಂತಯ್ಯ, ಎಸ್‌‍.ಎಂ.ಕೃಷ್ಣ, ದೇವರಾಜ ಅರಸು ಅವರಂತಹ ಅನುಭವಿಗಳು ಮತ್ತು ಸಂಸದೀಯ ಪಟುಗಳು ತಮ ಆಡಳಿತ ವೈಖರಿಯಿಂದ ಮನೆ ಮಾತಾಗಿದ್ದರು. ಅವರು ರಾಜ್ಯದಲ್ಲಿ ಹೊಸದಿಕ್ಕು, ಹೊಸದಿಸೆ ಹೊಸ ಭರವಸೆ, ಆತವಿಶ್ವಾಸವನ್ನು ಜನರಲ್ಲಿ ಮೂಡಿಸಿದ್ದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದೇ ರೀತಿ ಜನಪರವಾದ ಆಡಳಿತ ನಡೆಸುವ ಮೂಲಕ ರಾಜಕಾರಣದ ಬಗ್ಗೆ ಜನರಿಗಿದ್ದ ನಕಾರಾತಕ ಧೋರಣೆಯನ್ನು ಕಡಿಮೆ ಮಾಡಿ ಸಕಾರಾತಕವಾಗಿ ನೋಡುವಂತೆ ಮಾಡಿದ್ದಾರೆ. ಒಬ್ಬ ಅಪಾರ ಅನುಭವವಿರುವ ಜನನಾಯಕರು. ಜನಮನ್ನಣೆ, ಜನಮಾನಸ ಇರುವ ಸಿಎಂ ಕೂಡ ಹೌದು. ಆಡಳಿತದ ಮೇಲೆ ಸಮಗ್ರವಾದ ಹಿಡಿತ ಹೊಂದಿದ್ದಾರೆ. ಅವರಿಂದ ನಾವು ಬಹಳಷ್ಟು ಕಲಿಯುವುದಿದೆ ಎಂದು ಹೇಳಿದರು.

22 ವರ್ಷಗಳಿಂದ ನಾನು ಅವರ ಕೆಲಸ ನೋಡಿದ್ದೇನೆ. ಯಾವಾಗಲೂ ಅವರು ತಾಯಿ ಹೃದಯದಿಂದ ಕೆಲಸ ನಿರ್ವಹಿಸುತ್ತಾರೆ. ಅವರ ನಡವಳಿಕೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಅವರು ಪ್ರಶಂಸಿಸಿದರು.

RELATED ARTICLES

Latest News