Tuesday, December 23, 2025
Homeರಾಜ್ಯಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಶಾಕ್, ರಾಜ್ಯದ ಹಲವೆಡೆ ಮನೆ-ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ

ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಶಾಕ್, ರಾಜ್ಯದ ಹಲವೆಡೆ ಮನೆ-ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ

Lokayukta shocks government officials , simultaneous raids on homes and offices in many parts

ಬೆಂಗಳೂರು,ಡಿ.23- ಚುಮು ಚುಮು ಚಳಿಯಲ್ಲಿ ಬೆಚ್ಚನೆ ಹೊದ್ದು ಮಲಗಿದ್ದ ನಾಲ್ವರು ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಚಳಿಯಲ್ಲೂ ನಡುಕ ಹುಟ್ಟಿಸಿದ್ದಾರೆ. ಇಂದು ಬೆಳಿಗ್ಗೆ ಏಕಕಾಲಕ್ಕೆ ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಹಾಗೂ ರಾಯಚೂರಿನ ಕೆಲ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಗ್ರಹಿಸಿದ್ದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ದೊರೆತ ಸ್ಥಿರ ಹಾಗೂ ಚರಾಸ್ತಿಗಳ ಮೂಲ ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಬಾಗಲಕೋಟೆಯ ಜಿಲ್ಲಾ ಪಂಚಾಯತ್‌ನ ಸಹಾಯಕ ಕಾರ್ಯದರ್ಶಿ ಶ್ಯಾಮಸುಂದರ್‌ ಕಾಂಬ್ಳೆ, ಬಾಗೇವಾಡಿಯ ವಿಜಯಪುರದ ಸಹಾಯಕ ಕೃಷಿ ನಿರ್ದೇಶಕ ಮಾಳಪ್ಪ, ಕಾರವಾರದ ಸಿದ್ದಾಪುರ ಕೋಲಾ ಸಿರ್ಸಿ ಗ್ರೂಪ್‌ ಗ್ರಾಮ ಸೇವಾ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರುತಿ ಯಶವಂತ್‌ ಮಾಲ್ವಿ ಮತ್ತು ರಾಯಚೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಜಯಲಕ್ಷ್ಮಿ ಲೋಕಾ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.

ಭ್ರಷ್ಟ ಅಧಿಕಾರಿಗಳ ಬಂಗಲೆಗಳು, ಮನೆಗಳು ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆ ಜಿ.ಪಂ. ಯೋಜನಾ ನಿರ್ದೇಶಕರು ಹಾಗೂ ಅಧಿಕಾರಿ ಆಗಿರುವ ಶ್ಯಾಂ ಸುಂದರ್‌ ಕಾಂಬಳೆ ಅವರ ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ನರಗುಂದದ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.

ಇದೇ ಜಿಲ್ಲೆಯ ಬಾಗೇವಾಡಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ ಅವರ ಮನೆಯ ಮೇಲೆಯೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮುಖ್ಯಾಕಾರ್ಯನಿರ್ವಹಣಾ ಅಧಿಕಾರಿ ಮಾರುತಿ ಯಶವಂತ ಮಾಳವಿ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು.

ರಾಯಚೂರು ಜಿಲ್ಲೆಯಲ್ಲಿ ನಿವೃತ್ತ ಸಹಾಯಕ ಇಂಜಿನಿಯರ್‌ ವಿಜಯಲಕ್ಷ್ಮೀ ಅವರ ಶ್ರೀ ರೇಣುಕಾ ನಿಲಯದ ಮನೆಯಲ್ಲಿ ಪರಿಶೀಲನೆ ನಡೆದಿದೆ. ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು ಕಳ್ಳ ಮಾರ್ಗದಲ್ಲಿ ಸಂಪಾದಿಸಿದ್ದ ಆಕ್ರಮ ಆಸ್ತಿಯನ್ನು ಪತ್ತೆ ಹಚ್ಚಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

RELATED ARTICLES

Latest News