Thursday, April 16, 2026
Homeರಾಜ್ಯಯತೀಂದ್ರ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಜಾರ್ಜ್‌..?!

ಯತೀಂದ್ರ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಜಾರ್ಜ್‌..?!

Minister KJ George was about to resign.

ಬೆಂಗಳೂರು,ಜ.29- ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಆಡಳಿತದಲ್ಲಿ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಹಾಗೂ ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಅವರ ಹಸ್ತಕ್ಷೇಪದಿಂದ ಬೇಸತ್ತು ಜಾರ್ಜ್‌ ಅವರು ಸಿಎಂ ಅವರಿಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಕೊನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್‌‍.ಪೊನ್ನಣ್ಣ ಅವರ ಮಧ್ಯಪ್ರವೇಶದಿಂದಾಗಿ ಜಾರ್ಜ್‌ ತಮ ನಿರ್ಧಾರದಿಂದ ಹಿಂದೆ ಸರಿದರು ಎಂದು ತಿಳಿದುಬಂದಿದೆ.

ಇಂಧನ ಇಲಾಖೆಯಲ್ಲಿರುವ ಕೆಲವು ಮಹತ್ವದ ಹಾಗೂ ಹಿರಿಯ ಅಧಿಕಾರಿಗಳ ವರ್ಗಾವಣೆಯಲ್ಲಿ ಡಾ. ಯತೀಂದ್ರ ಸಚಿವ ಜಾರ್ಜ್‌ ಗಮನಕ್ಕೆ ತರದೆ ತಮ ತಂದೆಯ ಪ್ರಭಾವ ಬಳಸಿಕೊಂಡಿದ್ದೇ ರಾಜೀನಾಮೆ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಇಂಧನ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪದಿಂದ ನಡೆದ ಕೆಲ ಅಧಿಕಾರಿಗಳ ವರ್ಗಾವಣೆ ಹಾಗೂ ಅಮಾನತು ವಿಚಾರ ಸರ್ಕಾರದೊಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯಿಂದ ಇಂಧನ ಸಚಿವ ಜಾರ್ಜ್‌ ಬೇಸತ್ತಿದ್ದರು.. ಇಂಧನ ಇಲಾಖೆಯ ಕಾರ್ಯವೈಖರಿಯಲ್ಲಿ ಯತೀಂದ್ರ ಹಸ್ತಕ್ಷೇಪವಿದೆ ಎಂಬ ಆರೋಪಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಇಂಧನ ಇಲಾಖೆಯ ಕೆಲ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸಿಎಂ ಕಚೇರಿಯಿಂದ ಆದೇಶ ಹೊರಡಿಸಲಾಗಿತ್ತು. ಇದೇ ವೇಳೆ, ಕೆಲವು ಅಧಿಕಾರಿಗಳನ್ನು ಅಮಾನತುಗೊಳಿಸುವ ಬಗ್ಗೆ ಕ್ರಮವನ್ನೂ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಕೆ.ಜೆ.ಜಾರ್ಜ್‌, ಮಂತ್ರಿಯಾಗಿ ನನ್ನ ಮಾತಿಗೆ ಬೆಲೆ ಇಲ್ಲದಿದ್ದರೆ ನಾನು ಏಕೆ ಈ ಸರ್ಕಾರದಲ್ಲಿ ಇರಬೇಕು ಎಂದು ಪ್ರಶ್ನಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ್ದರು ಎನ್ನಲಾಗಿದೆ.

ಜಾರ್ಜ್‌ ಅವರು ನಾನು ನಿಮ ಜತೆಗೆ ಇರುತ್ತೇನೆ. ಆದರೆ ಸರ್ಕಾರದಲ್ಲಿ ಇರುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಘಟನೆಯಿಂದ ಮನನೊಂದು ಸಂಪುಟ ಸಭೆಗೆ ಸಹ ಗೈರಾಗಿದ್ದರು ಎಂಬುದು ತಿಳಿದುಬಂದಿದೆ. ಈ ಬೆಳವಣಿಗೆಗಳು ಸರ್ಕಾರದೊಳಗಿನ ಅಸಮಾಧಾನ ಬಹಿರಂಗವಾಗುವಂತೆ ಮಾಡಿದ್ದವು.

ವಾರದ ಹಿಂದೆ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದ ಜಾರ್ಜ್‌ ಅವರು ಹಿರಿಯ ಐಎಎಸ್‌‍ ಅಧಿಕಾರಿ ಪಂಕಜ್‌ ಕುಮಾರ್‌ ಪಾಂಡೆ ವಿರುದ್ದ ಶಿಸ್ತು ಕ್ರಮಕ್ಕೆ ಸೂಚಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಪಂಕಜ್‌ ಕುಮಾರ್‌ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಜಾರ್ಜ್‌ ಅವರು ರಾಜೀನಾಮೆ ಮಾತನ್ನು ಆಡುತ್ತಿದ್ದಂತೆ ಸಿಎಂ ಸಮಾಧಾನ ಮಾಡಿ ಅವರನ್ನು ಕಳಹಿಸಿದ್ದರು.

ಕೆಪಿಟಿಸಿಎಲ್‌ ಎಂಡಿ ಮತ್ತು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಇ-ಆಡಳಿತ) ಹುದ್ದೆಯನ್ನು ಹೊಂದಿರುವ ಪಂಕಜ್‌ ಕುಮಾರ್‌ ಪಾಂಡೆ ವಿರುದ್ಧ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಪಡೆಯಲು ಮುಖ್ಯಮಂತ್ರಿಗಳ ಕಚೇರಿಯಿಂದ ಭೇಟಿಗೆ ಆಹ್ವಾನ ನೀಡಲಾಗಿತ್ತು. ಆದರೆ ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ ತಲುಪಿದ್ದರೂ ಸಹ ಪಂಕಜ್‌ ಕುಮಾರ್‌ ಪಾಂಡೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದರು.

ಹಿರಿಯ ಅಧಿಕಾರಿಯ ಈ ನಡೆಯನ್ನು ಸಿಎಂ ಕಚೇರಿ ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪಂಕಜ್‌ ಕುಮಾರ್‌ ಪಾಂಡೆ ಅವರಿಗೆ ಶೋಕಾಸ್‌‍ ನೋಟೀಸ್‌‍ ನೀಡಿದ್ದರು. ನೋಟೀಸ್‌‍ ನೀಡಿದ ದಿನವೇ ಲಿಖಿತ ವಿವರಣೆ ನೀಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿತ್ತು. ಸರ್ಕಾರದ ಈ ನೋಟಿಸ್‌‍ಗೆ ಜಾರ್ಜ್‌ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ.

ಮಧ್ಯ ಪ್ರವೇಶಿಸಿದ್ದ ಸಿದ್ದರಾಮಯ್ಯ ಆಪ್ತರು :
ಘಟನೆಯ ಗಂಭೀರತೆ ಅರಿತ ಸಿಎಂ ಸಿದ್ದರಾಮಯ್ಯ ಆಪ್ತರು ತಕ್ಷಣ ಮಧ್ಯಪ್ರವೇಶಿಸಿದ್ದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್‌‍.ಪೊನ್ನಣ್ಣ ಮೂಲಕ ಕೆ.ಜೆ.ಜಾರ್ಜ್‌ ಅವರೊಂದಿಗೆ ಸಂಧಾನ ನಡೆಸಲಾಗಿತ್ತು. ಜಾರ್ಜ್‌ ಅವರ ಅಸಮಾಧಾನವನ್ನು ಆಲಿಸಿದ ಪೊನ್ನಣ್ಣ ಮಾತುಕತೆ ಮೂಲಕ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.

ಜಾರ್ಜ್‌ ಜತೆ ಪೊನ್ನಣ್ಣ ಸಂಧಾನದ ಬಳಿಕ, ಇಂಧನ ಇಲಾಖೆಯ ಕೆಲ ಅಧಿಕಾರಿಗಳ ಅಮಾನತು ಆದೇಶವನ್ನು ಮುಖ್ಯಮಂತ್ರಿ ಹಿಂಪಡೆದಿದ್ದರು. ಇದರಿಂದಾಗಿ ಸರ್ಕಾರದೊಳಗಿನ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡಿತ್ತು ಎಂದು ಹೇಳಲಾಗುತ್ತಿದೆ.ಆದರೆ, ಇಂಧನ ಇಲಾಖೆಯಲ್ಲಿ ನಡೆದ ಈ ಘಟನೆ ಸರ್ಕಾರದ ಒಳಜಗಳ ಮತ್ತು ಅಧಿಕಾರ ಹಂಚಿಕೆಯ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುವಂತೆ ಮಾಡಿವೆ. ಮುಂದಿನ ದಿನಗಳಲ್ಲಿ ಈ ವಿಷಯ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

RELATED ARTICLES

Latest News