ಬೆಂಗಳೂರು,ಜ.5-ಜೆಜೆ ನಗರದಲ್ಲಿ ರಾತ್ರಿ ನಡೆದಿರುವ ರೀತಿಯಲ್ಲೇ ಈ ಹಿಂದೆಯೂ ಮೂರ್ನಾಲ್ಕು ಭಾರಿ ಧಾರ್ಮಿಕ ಆಚರಣೆ ವೇಳೆ ಕಲ್ಲು ತೂರಿರುವ ಘಟನೆಗಳು ನಡೆದಿವೆ ಎಂದು ಓಂ ಶಕ್ತಿ ಭಕ್ತಾಧಿಗಳು ಹೇಳಿದ್ದಾರೆ.ಇತ್ತೀಚೆಗೆ ಅಯ್ಯಪ್ಪ ಮಾಲಾಧಾರಿಗಳು ಭಜನೆ ಮಾಡುವ ವೇಳೆ ನೀರಿನ ಬಾಟಲ್‌ಗಳನ್ನು ತೂರಿದ್ದರು. ಅಲ್ಲದೇ ಮಾರಮ್ಮ ದೇವಾಲಯದ ಬಳಿ ಕಲ್ಲು ತೂರಾಟ ನಡೆದಿತ್ತು ಎಂದು ಹೇಳಲಾಗಿದೆ.
ಜೆಜೆ ನಗರದ ವಿಎಸ್ ಗಾರ್ಡನ್‌ನಲ್ಲಿ ಹೆಚ್ಚು ಹಿಂದೂಗಳು ವಾಸವಾಗಿದ್ದು, ಹಿಂದೂ ಭಾವನೆಗಳಿಗೆ ಧಕ್ಕೆಯಾಗುವಂತೆ ಅನ್ಯಕೋಮಿನವರು ವರ್ತಿಸುತ್ತಿದ್ದಾರೆ.ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಾತ್ರಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆಸಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಗಾಯಗೊಂಡಿರುವ ಯುವತಿಯ ತಂದೆ ವರದರಾಜು ರವರು ಒತ್ತಾಯಿಸಿದ್ದಾರೆ.
ಈ ಹಿಂದೆ ಇದೇ ರೀತಿ ಎರಡು ಮೂರು ಬಾರಿ ಧಾರ್ಮಿಕ ಆಚರಣೆ ವೇಳೆ ದುಷ್ಕರ್ಮಿಗಳು ಬೆಂಕಿ ಹಾಕಿರುತ್ತಾರೆ. ಈ ಪ್ರದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಜೆಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಶಶಿಕುಮಾರ್ ಎಂಬುವವರು ದೂರಿನಲ್ಲಿ ಆರೋಪಿಸಿದ್ದಾರೆ. ದೂರಿನನ್ವಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
