Homeರಾಜ್ಯಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ನಿಗೂಢ ಸ್ಫೋಟ, ಇಬ್ಬರು ಕಾರ್ಮಿಕರಿಗೆ ಗಾಯ

ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ನಿಗೂಢ ಸ್ಫೋಟ, ಇಬ್ಬರು ಕಾರ್ಮಿಕರಿಗೆ ಗಾಯ

ಬೆಂಗಳೂರು,ಅ.21- ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ಪುಲಕೇಶಿನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಘಟನೆಯಲ್ಲಿ ಕಟ್ಟಡದಲ್ಲಿದ್ದ ಕಾರ್ಮಿಕರಾದ ಸೂರಜ್‌ ಹಾಗೂ ಅಲ್ಲಾವುದ್ದೀನ್‌ ಎಂಬುವವರು ಗಂಭೀರ ಗಾಯಗೊಂಡಿದ್ದು, ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಿರ್ಮಾಣ ಹಂತದ ಕಟ್ಟಡದಲ್ಲಿ ನಿನ್ನೆ ಮಧ್ಯಾಹ್ನ ಅನಿರೀಕ್ಷಿತವಾಗಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಪುಲಕೇಶಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.ಘಟನಾ ಸ್ಥಳಕ್ಕೆ ಎಫ್‌ಎಸ್‌‍ಎಲ್‌ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಸ್ಥಳದಲ್ಲಿ ದೊರೆತ ಸ್ಫೋಟಕದ ಅವಶೇಷಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದಾರೆ.
ಈ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಯಾರು ಬ್ಯಾಗ್‌ನಲ್ಲಿ ಬ್ಯಾಟರಿ ಮಾದರಿಯ ವಸ್ತುವನ್ನು ತಂದಿಟ್ಟಿದ್ದಾರೆ? ಅದು ಸ್ಫೋಟಗೊಂಡಿದ್ದಾರೂ ಹೇಗೆ? ಎಂಬುದು ಯಕ್ಷಪ್ರಶ್ನೆಯಾಗಿದೆ.

ಬ್ಯಾಗ್‌ನಲ್ಲಿ ಯಾವ ಉದ್ದೇಶಕ್ಕಾಗಿ ಈ ಸ್ಫೋಟಕ ವಸ್ತುವನ್ನು ತಂದಿಟ್ಟಿದ್ದರು? ಇದರ ಹಿಂದೆ ಯಾವುದಾದರೂ ದುರುದ್ದೇಶವಿದೆಯೇ? ಎಂಬುದರ ಬಗ್ಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಘಟನೆ ಸಂಬಂಧ ಕಟ್ಟಡದ ಮಾಲೀಕರು ಹಾಗೂ ಗುತ್ತಿಗೆದಾರನ ವಿರುದ್ಧ ಪುಲಕೇಶಿನಗರ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಸ್ಥಳದಲ್ಲಿ ಐಇಡಿ ಸ್ಫೋಟಕಕ್ಕೆ ಸಂಬಂಧಿಸಿದ ಕೆಲವು ವಸ್ತುಗಳು ಪತ್ತೆಯಾಗಿರುವುದು ಭಾರೀ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಎರಡು ದಿನಗಳ ಹಿಂದೆಯೇ ಐಇಡಿ ಮಾದರಿಯ ಸ್ಫೋಟಕ ವಸ್ತುಗಳನ್ನು ಈ ಜಾಗದಲ್ಲಿ ಇಡಲಾಗಿತ್ತು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಏಕಾಏಕಿ ದೊಡ್ಡಮಟ್ಟದಲ್ಲಿ ಶಬ್ಧ ಕೇಳಿಬಂದಿತು. ತಕ್ಷಣ ಕಟ್ಟಡದ ಮೇಲ್ಭಾಗಕ್ಕೆ ಹೋಗಿ ನೋಡಿದಾಗ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸ್ಫೋಟದ ರಭಸಕ್ಕೆ ಒಬ್ಬರ ಕೈ ತುಂಡಾಗಿದೆ, ಮತ್ತೊಬ್ಬರ ಕಣ್ಣುಗುಡ್ಡೆ ಹೊರಬಂದಿತ್ತು ಎಂದು ಈ ಭೀಕರ ದೃಶ್ಯವನ್ನು ಕಂಡ ಮನ್ಸೂರ್‌ ಎಂಬುವವರು ಮಾಧ್ಯಮಗಳಿಗೆ ಘಟನೆಯನ್ನು ವಿವರಿಸಿದ್ದಾರೆ.

RELATED ARTICLES
spot_img

Latest News