ಬಳ್ಳಾರಿ, ಜ.24- ಹೊಸ ವರ್ಷದ ಮೊದಲ ದಿನವೇ ನಡೆದ ಬ್ಯಾನರ್ ಗಲಭೆಯ ಕಾವು ತಣ್ಣಗಾಗುವ ಮುನ್ನವೇ ಶಾಸಕ ಜನಾರ್ದನ ರೆಡ್ಡಿ ಅವರ ಕುಟುಂಬಕ್ಕೆ ಸೇರಿದ ಮಾದರಿ ಮನೆಗೆ ಬೆಂಕಿ ಬಿದ್ದಿರುವ ಪ್ರಕರಣ ರಾಜಕೀಯ ತಿರುಗು ಪಡೆದುಕೊಂಡಿದ್ದು, ಪೊಲೀಸರು ಆರೋಪವನ್ನು ಒಪ್ಪದೆ ಅಥವಾ ತಿರಸ್ಕರಿಸದೆ ಅಡ್ಡಗೋಡೆಯ ಮೇಲೆ ದೀಪವಿರಿಸಿದ್ದಾರೆ.
ಘಟನೆಗೆ ಸಂಬಂಧ ಪಟ್ಟಂತೆ ಈವರೆಗೂ ವಶಕ್ಕೆ ಪಡೆಯಲಾಗಿರುವ 8 ಮಂದಿ ಪೈಕಿ ಯಾರಿಗೂ ರಾಜಕೀಯ ಸಂಪರ್ಕವಾಗಲಿ ಅಥವಾ ಹಿನ್ನೆಲೆಯಾಗಲಿ ಇಲ್ಲ ಎಂದು ಬಳ್ಳಾರಿ ಎಸ್‌ಪಿ ಸುಮನ ಪನ್ನೇಕರ ತಿಳಿಸಿದ್ದು, ಆದರೆ ರಾಜಕೀಯ ಕಾರಣವನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಿಲ್ಲ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಜನವರಿ 1ರಂದು ನಡೆದಿದ್ದ ಬ್ಯಾನರ್ ಗಲಭೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ, ಬೆಂಕಿ ಹಚ್ಚುವುದಾಗಿ ಹೇಳಿದ್ದರು. ಆ ಹೇಳಿಕೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂಬ ಆಗ್ರಹ ದೂರಿನಲ್ಲಿ ಕೇಳಿ ಬಂದಿದೆ.
ಘಟನೆಯ ಬಗ್ಗೆ ಮಾತನಾಡಿರುವ ಬಳ್ಳಾರಿ ಎಸ್‌ಪಿ ಸುಮನ ಪನ್ನೇಕರ್, ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಗೆ ನಿನ್ನೆ ರಾತ್ರಿ 10.30ರ ಸುಮಾರಿಗೆ ದೂರು ಬಂದಿದೆ. ಅದರಲ್ಲಿ ಮನೆಗೆ ಅಪರಿಚಿತರು ಮನೆಗೆ ಬೆಂಕಿ ಹಾಕಿದ್ದಾರೆ ಎಂದು ತಿಳಿಸಲಾಗಿದೆ.
ರಾತ್ರಿಯೇ ಸೋಕೋ ತಂಡ ಸ್ಥಳಕ್ಕಾಗಮಿಸಿ ಪ್ರಾಥಮಿಕವಾಗಿ ಸ್ಥಳ ಪರಿಶೀಲನೆ ಮಾಡಿದೆ. ಇಂದು ಬೆಳಗ್ಗೆ ಆಳವಾದ ಅಧ್ಯಯನಕ್ಕಾಗಿ ಮತ್ತು ಸಾಕ್ಷಕ್ಕೆ ಅಗತ್ಯವಾಗಿರುವ ವಸ್ತುಗಳನ್ನು ಸಂಗ್ರಹಿಸಲು ಮತ್ತೆ ಭೇಟಿ ನೀಡಿದೆ ಎಂದು ಹೇಳಿದ್ದಾರೆ.
ಈ ಮನೆ ಜನಾರ್ದನ ರೆಡ್ಡಿ ಅವರ ಕುಟುಂಬಕ್ಕೆ ಸೇರಿದ್ದು, ಬಹಳ ವರ್ಷಗಳಿಂದ ಬಳಕೆಯಾಗದೆ ಪಾಳು ಬಿದ್ದಿದೆ. ಗಾಜುಗಳು ಪುಡಿಯಾಗಿ ಬಿದ್ದಿವೆ. ಮೊದಲ ಮತ್ತು ಎರಡನೇ ಮಹಡಿಯಲ್ಲಿ ಧೂಳು ತುಂಬಿರುವುದು ಗಮನಿಸಿದಾಗ ತುಂಬಾ ವರ್ಷದಿಂದ ಯಾರು ವಾಸ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈ ಸ್ಥಳದಲ್ಲಿ ಸಿಸಿಟಿವಿಯಾಗಲಿ ಅಥವಾ ಭದ್ರತಾ ಸಿಬ್ಬಂದಿಯಾಗಲಿ ಇಲ್ಲ. ಜಿ ಸ್ಕೈಯರ್ ಸಂಸ್ಥೆ ನಿರ್ಮಿಸಿದ ಗೆಟೆಡ್ ಆಸ್ತಿಯಾಗಿದೆ ಎಂದರು.
ಅನುಮಾನಕ್ಕೆ ಗುರಿಯಾಗಿರುವ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅವರಲ್ಲಿ ಇಬ್ಬರು ವಯಸ್ಕರಿದ್ದಾರೆ. ಉಳಿದ ಆರು ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತರು. ಎಲ್ಲರನ್ನೂ ವಿಚಾರಣೆ ನಡೆಸಲಾಗಿದೆ. ಅವರ ಬಳಿ ಇದ್ದ ಮೊಬೈಲ್ ಪರಿಶೀಲಿಸಿದಾಗ ಎಲ್ಲರೂ ಫೋಟೋ ಶೂಟ್ ಗಾಗಿ ಬಂದಿದ್ದರು ಎಂದು ತಿಳಿದು ಬಂದಿದೆ. ಬಹಳಷ್ಟು ಜನ ಇದೇ ರೀತಿ ಇಲ್ಲಿಗೆ ಬರುವ ವಾಡಿಕೆ ಇದೆ ಎಂಬುದು ನಮ ಗಮನಕ್ಕೆ ಬಂದಿದೆ ಎಂದಿದ್ದಾರೆ.
ಮೊದಲ ಮಹಡಿ ಹಾಗೂ ಮನೆ ಮೇಲಿನ ಭಾಗಕ್ಕೆ ಹೋಗಿ, ಸೂರ್ಯ ಮುಳುಗಡೆಯ ಫೋಟೋ ತೆಗೆದುಕೊಂಡಿದ್ದಾರೆ. ಸಿಗರೇಟ್ ತುಂಟುಗಳು ಮತ್ತು ಬೆಂಕಿ ಪಟ್ಟಣ ಅಲ್ಲಲ್ಲಿ ಬಿದ್ದಿರುವುದು ಕಾಣಸಿಗುತ್ತದೆ. ಒಬ್ಬ ಅಪ್ರಾಪ್ತ ಗೊತ್ತಿಲ್ಲದೆ ಅಲ್ಲಿರುವ ವಸ್ತುವಿಗೆ ಬೆಂಕಿ ತಾಗಿಸಿದ್ದಾನೆ. ಅದು ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ. ನಂತರ ನಿಯಂತ್ರಣಕ್ಕೆ ಬಾರದೆೆ ದೊಡ್ಡ ಪ್ರಮಾಣದ ಅವಘಡ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ವಶಕ್ಕೆ ಪಡೆದಿರುವವರಲ್ಲಿ ಕೆಲವರು ವಿದ್ಯಾರ್ಥಿಗಳಿದ್ದಾರೆ. ಶಾಲೆ ಬಿಟ್ಟವರಿದ್ದಾರೆ. ಕೂಲಿ ಕೆಲಸ, ಫ್ಯಾನ್ಸಿ ಅಂಗಡಿಯಲ್ಲಿ ಕೆಲಸ ಮಾಡುವವರು. ಆಟೋ ಚಾಲಕರು ಸೇರಿದ್ದಾರೆ. ಮುಂಬೈನಿಂದ ಇಬ್ಬರು ಬಳ್ಳಾರಿಯಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದರು. ಫೋಟೋ ತೆಗೆದುಕೊಳ್ಳಲು ಸ್ನೇಹಿತರ ಜೊತೆಗೆ ಈ ಮನೆಗೆ ಬಂದಿರುವುದು ಗೊತ್ತಾಗಿದೆ ಎಂದರು.
ಎಲ್ಲರ ಕೌಟುಂಬಿಕ ಹಿನ್ನೆಲೆಗಳನ್ನು ವಿಶ್ಲೇಷಿಸಲಾಗಿದೆ. ಯಾರಿಗೂ ರಾಜಕೀಯ ಸಂಪರ್ಕ ಇರುವುದು ಕಂಡು ಬಂದಿಲ್ಲ. ಮೇಲ್ನೋಟಕ್ಕೆ ಇದು ಉದ್ದೇಶಪೂರ್ವಕ ಕೃತ್ಯ ಎನಿಸುತ್ತಿಲ್ಲ ಎಂದರು.
ದೂರಿನಲ್ಲಿ ಹಲವಾರು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಬ್ಯಾನರ್ ಗಲಭೆ ಸಂದರ್ಭದಲ್ಲಿ ಶಾಸಕ ಭರತ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರ ವಿರುದ್ಧ ಆಡಿರುವ ಮಾತುಗಳ ಹಿನ್ನೆಲೆಯಲ್ಲಿಯೂ ತನಿಖೆ ನಡೆಸಬೇಕು ಎಂದು ಸಲಹೆ ನೀಡಲಾಗಿದೆ. ಸದ್ಯಕ್ಕೆ ರಾಜಕೀಯ ಉದ್ದೇಶಗಳು ಇರುವಂತೆ ಕಂಡುಬರುತ್ತಿಲ್ಲ. ಆದರೂ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸಲಿದ್ದಾರೆ ಎಂದು ಹೇಳಿದರು.
ಮನೆಯಲ್ಲಿ ವಸ್ತುಗಳು ಸುಟ್ಟು ಹೋಗಿರುವ ಮಾಹಿತಿ ಇಲ್ಲ. ಅಲ್ಲಿ ಅಂತಹ ಯಾವ ಮಹತ್ವದ ವಸ್ತುಗಳು ಇರಲಿಲ್ಲ ಎಂದರು.ಬಳ್ಳಾರಿಯ ಹೊರಭಾಗದಲ್ಲಿ ಹಲವಾರು ಲೇಔಟ್‌ಗಳಿದ್ದು ಅಲ್ಲಿ ಅಕ್ರಮ ಚಟುವಟಿಕೆಗಳ ನಡೆಯುತ್ತಿವೆ ಎಂಬ ಮಾಹಿತಿ ಇದೆ. ಇನ್ನು ಮುಂದೆ ಗಸ್ತನ್ನು ಹೆಚ್ಚಿಸಿ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬಡಾವಣೆ ನಿರ್ಮಾಣ ಮಾಡುವ ವೇಳೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಿರುವುದು ಲೇಔಟ್ ನಿರ್ಮಾಣ ಮಾಡಿದವರ ಜವಾಬ್ದಾರಿ. ಅದರಲ್ಲಿ ವೈಫಲ್ಯವಾಗಿದೆ. ಸ್ಥಳದಲ್ಲಿ ಸಿಸಿಟಿವಿ ಇಲ್ಲದೆ ಇದ್ದರೂ ಪೊಲೀಸರು ಚುರುಕಿನಿಂದ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.
ಬ್ಯಾನರ್ ಗಲಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಈ ಬೆಂಕಿ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ಎಂಬುದು ಆಧಾರ ರಹಿತ. ಆದರೂ ನಾವು ತಾಂತ್ರಿಕ ಮಾಹಿತಿಗಳನ್ನು ಆಧರಿಸಿ ತನಿಖೆ ಮುಂದುವರೆಸುವುದಾಗಿ ಹೇಳಿದರು.
