ಬೆಳಗಾವಿ,ಡಿ.15- ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯ, ಶಿಕ್ಷಣ, ಉದ್ಯಮ ಮತ್ತು ಸಮಾಜಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶಾಮನೂರು ಶಿವಶಂಕರಪ್ಪ ಅವರು, ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಉದ್ಯಮಗಳನ್ನು ಕಟ್ಟಿದ್ದಾರೆ. ಕೇವಲ ರಾಜಕಾರಣಿಯಾಗಿರದೆ, ಹಲವು ಯಶಸ್ವೀ ಉದ್ಯಮಗಳನ್ನು ನಡೆಸಿ ಇತರರಿಗೂ ಮಾದರಿಯಾಗಿದ್ದರು.
ದಾವಣಗೆರೆಯಲ್ಲಿ ತಮ್ಮ ಶಾಲಾ-ಕಾಲೇಜು ಶಿಕ್ಷಣ ಪೂರೈಸಿದ ನಂತರ, ಅವರು ಉದ್ಯಮ ಮತ್ತು ಸಾರ್ವಜನಿಕ ಜೀವನದಲ್ಲಿ ತಮನ್ನು ತೊಡಗಿಸಿಕೊಂಡರು. ಉದ್ಯಮಿಯಾಗಿ, ಶಿವಶಂಕರಪ್ಪನವರು ಬಾಪೂಜಿ ಎಜುಕೇಷನಲ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದರು. ಈ ಸಂಸ್ಥೆಯ ಅಡಿಯಲ್ಲಿ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿ ಮುಂತಾದ ಅನೇಕ ಶೈಕ್ಷಣಿಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.
ಅಲ್ಲದೇ, ಅವರು ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳನ್ನು ಒಳಗೊಂಡಿರುವ ಶಾಮನೂರು ಗ್ರೂಪ್‌ನ ಮುಖ್ಯಸ್ಥರಾಗಿದ್ದಾರೆ. ಶಾಮನೂರು ಜನಾನುರಾಗಿ ರಾಜಕಾರಣಿಯಾಗಿ, ಸಾಮಾಜಿಕ ಬದುಕಿನ ಮಹತ್ತರ ವ್ಯಕ್ತಿಯಾಗಿ, ಸಂಘ ಸಂಸ್ಥೆಗಳು ಮತ್ತು ನಿರ್ಗತಿಕರ ಬದುಕಿಗೆ ನೆರವಾದ ಕೊಡುಗೈ ದಾನಿಯಾಗಿ, ನೂರಾರು ಕುಟುಂಬಗಳ ಬದುಕಿಗೆ ಆಪತ್ ಬಂಧುವಾಗಿ, ಇವೆಲ್ಲಕ್ಕೂ ಮಿಗಿಲಾಗಿ ದಾವಣಗೆರೆಯ ಶೈಕ್ಷಣಿಕ ಬದುಕಿನ ವಿದ್ಯಾಕಾಶಿಯನ್ನು ಸಮೃದ್ಧಗೊಳಿಸಿದವರು ಶೃಂಗಶಿಲ್ಪಿ ಶಾಮನೂರು ಶಿವಶಂಕರಪ್ಪ.
ಬಾಪೂಜಿ ವಿದ್ಯಾಸಂಸ್ಥೆಯಿಂದ ಪ್ರತಿವರ್ಷವೂ ಇಪ್ಪತ್ತು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಭಾಜನರಾಗಿದ್ದಾರೆ. ಅದರಲ್ಲಿ ವೈದ್ಯರು, ಎಂಜಿನಿಯರು, ಇತರೆ ಎಲ್ಲ ಕ್ಷೇತ್ರದ ಪದವಿ, ಸ್ನಾತಕೋತ್ತರ ಪದವಿಧರರು ಸೇರಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯೇ ಒಂದು ಸ್ವತಂತ್ರ ವಿಶ್ವವಿದ್ಯಾಲಯ ಆಗಿರುವ ಎಲ್ಲಾ ಅರ್ಹತೆಗಳಿವೆ.
ಆದರೆ ಅದನ್ನು ಡೀಮ್ಡೌ ಯುನಿವರ್ಸಿಟಿ ಎಂದು ಪರಿವರ್ತಿಸುವಲ್ಲಿ ಪ್ರಾಯಶಃ ಅವರು ಮನಸು ಮಾಡಲಿಲ್ಲ. ಅದಕ್ಕೆ ಅವರದೇ ಕಾರಣಗಳಿದ್ದವು. ಶಾಮನೂರು ಅವರನ್ನು ಜನ ಪ್ರೀತಿಯಿಂದ ನೆನೆಯುವುದು ಅವರು ಕಟ್ಟಿದ ಶಿಕ್ಷಣ ಸಂಸ್ಥೆಗಳಿಗಾಗಿ. 1958ರಲ್ಲಿ ಧರ್ಮರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ ಸ್ಥಾಪಿಸಿದ್ದ ಬಾಪೂಜಿ ಎಜುಕೇಷನಲ್ ಅಸೋಸಿಯೇಷನ್ ನೇತೃತ್ವವನ್ನು 1972ರಲ್ಲಿ ಶಾಮನೂರು ಶಿವಶಂಕರಪ್ಪ ವಹಿಸಿಕೊಂಡರು.
ಅಂದು ಕೇವಲ 5 ಕಾಲೇಜುಗಳಿದ್ದ ಈ ಸಂಸ್ಥೆಯನ್ನು, ಇಂದು 50ಕ್ಕೂ ಹೆಚ್ಚು ಸಂಸ್ಥೆಗಳ ಹೆಮರವಾಗಿ ಬೆಳೆಸಿದ್ದಾರೆ. ಬಾಪೂಜಿ ಇಸ್ಟೀ ಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಜೆಜೆಎಂ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು, ಫಾರ್ಮಸಿ, ನರ್ಸಿಂಗ್ ಹೀಗೆ ಹತ್ತು ಹಲವು ವೃತ್ತಿಪರ ಕೋರ್ಸ್‌ಗಳನ್ನು ದಾವಣಗೆರೆಗೆ ತಂದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಎವಿಕೆ ಮಹಿಳಾ ಕಾಲೇಜನ್ನು ಬಲಪಡಿಸಿದರು, ಅಲ್ಲಿ ಈಗ ವರ್ಷಕ್ಕೆ 3,400ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪದವಿ ಪಡೆಯುತ್ತಿದ್ದಾರೆ. ಕುನಿಬೆಳಕೆರೆ, ಹರಿಹರ, ತೊಲಹುಣಸೆ ಮತ್ತು ಚನ್ನಗಿರಿಯಂತಹ ಗ್ರಾಮೀಣ ಭಾಗಗಳಲ್ಲೂ ಕಾಲೇಜುಗಳನ್ನು ತೆರೆದು ಬಡವರ ಮನೆಬಾಗಿಲಿಗೆ ಶಿಕ್ಷಣ ತಲುಪಿಸಿದ್ದು ಇದೇ ಶಾಮನೂರು ಶಿವಶಂಕರಪ್ಪ.
ಶಾಮನೂರು ಶಿವಶಂಕರಪ್ಪ ಕೇವಲ ಹಣ ಗಳಿಸಲಿಲ್ಲ, ಅದನ್ನು ಸಮಾಜಕ್ಕೆ ಮರಳಿಸುವುದರಲ್ಲೂ ಎತ್ತಿದ ಕೈ. ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲು 5 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದರು. ಇದರಲ್ಲಿ ವಿಶೇಷವೆಂದರೆ, ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ 1 ಕೋಟಿ ರೂಪಾಯಿ ಮೀಸಲಿಟ್ಟಿದ್ದರು. ಜಾತಿ-ಮತ ನೋಡದೆ ಬಡ ಪ್ರತಿಭಾವಂತರಿಗೆ ನೆರವು ನೀಡುತ್ತಿದ್ದರು. ಕೋವಿಡ್ ಎರಡನೇ ಅಲೆಯ ಸಂಕಷ್ಟದ ಸಮಯದಲ್ಲಿ, ಬಡವರಿಗೆ ಉಚಿತವಾಗಿ ನೀಡಲು ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ 60,000 ಲಸಿಕೆಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ನೀಡಿದ್ದರು.
ದಾವಣಗೆರೆಯಲ್ಲಿ ಬಡವರಿಗಾಗಿ ಶಿವ ಪಾರ್ವತಿ ಕಲ್ಯಾಣ ಮಂಟಪ ನಿರ್ಮಿಸಿದರು. ನಗರದಲ್ಲಿ ಕಾಂಕ್ರೀಟ್ ರಸ್ತೆಗಳು, 50ಕ್ಕೂ ಹೆಚ್ಚು ಪಾರ್ಕ್‌ಗಳ ಅಭಿವೃದ್ಧಿ, 24/7 ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದರು. ದಾವಣಗೆರೆಗೆ ಸಾರ್ಟ್ ಸಿಟಿ ಪಟ್ಟ ಸಿಗುವಲ್ಲಿ ಇವರ ಶ್ರಮ ಅಪಾರವಾಗಿತ್ತು.
ದೇವಸ್ಥಾನಗಳಿಗೆ ಅನ್ನದಾಸೋಹದ ಹಾಲ್‌ಗಳನ್ನು ನಿರ್ಮಿಸಿಕೊಡುವುದರಲ್ಲೂ ಇವರು ಮುಂಚೂಣಿಯಲ್ಲಿದ್ದರು. ಶಾಮನೂರು ಶಿವಶಂಕರಪ್ಪ ಅವರ ಲೈಫ್‌ಸ್ಟೈಲ್ ಕೂಡ ಅಷ್ಟೇ ರೋಚಕವಾಗಿತ್ತು. ದಾವಣಗೆರೆ ಕ್ರಿಕೆಟ್ ಮತ್ತು ಸ್ಪೋಟ್‌್ರ್ಸ ಕ್ಲಬ್ ಅಧ್ಯಕ್ಷರಾಗಿದ್ದ ಇವರು ಕ್ರೀಡಾ ಪ್ರೇಮಿ. ಶಾಮನೂರು ದಾವಣಗೆರೆ ಡೈಮಂಡ್ಸ್ ಕ್ರಿಕೆಟ್ ತಂಡದ ಒಡೆಯ. ಓಡಾಡಲು ಹೆಲಿಕಾಪ್ಟರ್ ಬಳಸುತ್ತಿದ್ದ ಇವರು, ಚುನಾವಣಾ ಪ್ರಚಾರದ ಸಮಯದಲ್ಲಿ ಮಾತ್ರ ಜನಸಾಮಾನ್ಯರ ಜೊತೆ ಬೆರೆಯುತ್ತಿದ್ದರು.
ಗಾಲ್‌್ಫ ಕಾರಿನಂತಿರುವ ಬಗ್ಗಿಯಲ್ಲಿ ಕುಳಿತು ಗಲ್ಲಿ ಗಲ್ಲಿ ಸುತ್ತುತ್ತಾ, ಜನರಿಗೆ ಕೈಮುಗಿಯುತ್ತಾ ಮತ ಕೇಳುವ ಇವರ ಪರಿ ವಿಶಿಷ್ಟವಾಗಿತ್ತು. ತಮ್ಮ ಹಾಸ್ಯಪ್ರಜ್ಞೆ ಮತ್ತು ನೇರ ಮಾತುಗಳಿಂದಲೇ ಜನರನ್ನು ಸೆಳೆಯುತ್ತಿದ್ದರು. ಎಷ್ಟೇ ಶ್ರೀಮಂತರಾಗಿದ್ದರೂ, ದಾವಣಗೆರೆಯ ಜನರಿಗೆ ಇವರು ಪ್ರೀತಿಯ ಅಪ್ಪಾಜಿ ಆಗಿದ್ದರು. ಅವರ ಮಗ ಎಸ್‌ಎಸ್ ಮಲ್ಲಿಕಾರ್ಜುನ್ ಪ್ರಸ್ತುತ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದು, ಸೊಸೆ ಪ್ರಭಾ ಮಲ್ಲಿಕಾರ್ಜುನ್ ಕೂಡ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕುಟುಂಬ ರಾಜಕಾರಣದರಾಚೆಗೆ ಶಾಮನೂರು ಶಿವಶಂಕರಪ್ಪ ಜನಪ್ರೀತಿಯನ್ನು ಗಳಿಸಿದ್ದರು. ಭದ್ರಾ ಕಾಲುವೆ ಯೋಜನೆಯ ಲಾಭ ಪಡೆದು, ಕೃಷಿ ಆಧಾರಿತ ಉದ್ಯಮಗಳಿಗೆ ಕೈಹಾಕಿದರು.
ಕುಕ್ಕುವಾಡದಲ್ಲಿ ನಷ್ಟದಲ್ಲಿದ್ದ ದಾವಣಗೆರೆ ಶುಗರ್ ಮಿಲ್‌್ಸ ಅನ್ನು ಟೇಕ್ ಓವರ್ ಮಾಡಿ, ಅದನ್ನು ಲಾಭದಾಯಕವಾಗಿ ಬದಲಾಯಿಸಿದರು. ನಂತರ 1995ರಲ್ಲಿ ಶಾಮನೂರು ಶುಗರ್ಸ್ ಲಿಮಿಟೆಡ್ ಸ್ಥಾಪಿಸಿ, 1999ರಲ್ಲಿ ಉತ್ಪಾದನೆ ಆರಂಭಿಸಿದರು. ಕೇವಲ ಸಕ್ಕರೆ ಮಾತ್ರವಲ್ಲ, ಡಿಸ್ಟಿಲರಿ ಮತ್ತು ವಿದ್ಯುತ್ ಉತ್ಪಾದನೆಯನ್ನೂ ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿದರು.
ಮೂರು ದಶಕಗಳ ಕಾಲ ಕೆಪಿಸಿಸಿ ಖಜಾಂಚಿಯಾಗಿದ್ದ ಇವರು, ಪಕ್ಷದ ಕಷ್ಟಕಾಲದಲ್ಲೂ ಆರ್ಥಿಕ ಬೆನ್ನೆಲುಬಾಗಿ ನಿಂತಿದ್ದರು. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದ ಇವರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿಯೂ ಸಮಾಜವನ್ನು ಸಂಘಟಿಸಿದ್ದರು.
