Thursday, April 16, 2026
Homeರಾಜಕೀಯಕರ್ನಾಟಕದ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮುಂದುವರಿಕೆ ಬಹುತೇಕ ಫಿಕ್ಸ್..?

ಕರ್ನಾಟಕದ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮುಂದುವರಿಕೆ ಬಹುತೇಕ ಫಿಕ್ಸ್..?

B.Y. Vijayendra's continuation as Karnataka BJP president almost fixed..?

ಬೆಳಗಾವಿ,ಡಿ.15- ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ಉತ್ತರ ಪ್ರದೇಶದ ರಾಜ್ಯಧ್ಯಕ್ಷ ಸ್ಥಾನಕ್ಕೆ ಹೆಸರುಗಳನ್ನು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿರುವ ಬಿಜೆಪಿ, ಕರ್ನಾಟಕ ಘಟಕದ ಅಧ್ಯಕ್ಷರ ನೇಮಕ ಅಂತಿಮಗೊಳಿಸಲು ಮುಂದಾಗಿದೆ.

ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಈ ತಿಂಗಳ ಅಂತ್ಯದೊಳಗೆ ನೂತನ ಅಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಯಾವಾಗಲೂ ಚುನಾವಣೆಯಿಲ್ಲದೆ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತದೆ. ಇದರಂತೆ ಪಕ್ಷವು ಅರ್ಹತಾ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಿದ್ದು, ವಿವಿಧ ಜಿಲ್ಲೆಗಳಿಗೆ ಪದಾಧಿಕಾರಿಗಳ ನೇಮಕಯನ್ನೂ ಅಂತಿಮಗೊಳಿಸಿದೆ.

ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಅವರೇ ಅಂತಿಮ ಎಂಬ ಮಾತುಗಳು ಕೇಳಿಬಂದಿವೆ. ಕಳೆದ ಲೋಕಸಭಾ ಚುನಾವಣೆ ಎದುರಿಸಿ ಉತ್ತಮ ಫಲಿತಾಂಶ ತಂದುಕೊಟ್ಟಿದ್ದ ವಿಜಯೇಂದ್ರಗೆ ಮುಂದೆಯೂ ಸಾರಥ್ಯ ಇರಲಿ ಎಂದು ಜಿಲ್ಲಾ ಘಟಕಗಳ ಅಧ್ಯಕ್ಷರು ಹೇಳಿದ್ದಾರೆ ಎನ್ನಲಾಗಿದೆ.

ಆದರೆ, ಹೈಕಮಾಂಡ್‌ ಘೋಷಣೆ ಬಳಿಕವಷ್ಟೇ ಖಚಿತವಾಗಲಿದೆ. ಇನ್ನು ವಿಜಯೇಂದ್ರ ಅವನ್ನು ಬಿಟ್ಟರೆ ಶಾಸಕ ಸುನೀಲ್‌ ಕುಮಾರ್‌, ಮುರುಗೇಶ ನಿರಾಣಿ, ಕೇಂದ್ರ ಸಚಿವ ಸಚಿವ ವಿ.ಸೋಮಣ್ಣ ಹೆಸರುಗಳು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹಿಂದೇಟು ಹಾಕುತ್ತಿರುವುದರಿಂದ ಬಿ.ವೈ.ವಿಜಯೇಂದ್ರ ಅವರ ಹೆಸರು ಮತ್ತೊಮೆ ಮುನ್ನೆಲೆಗೆ ಬಂದಿದೆ. ತಾವು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಶೋಭಾ ಇತ್ತೀಚೆಗೆ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರನ್ನು ನೇಮಿಸುವ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಒಲವು ಹೊಂದಿದ್ದಾರೆ. ಆದರೆ ಇದಕ್ಕೆ ಪ್ರಧಾನಿ ಮೋದಿ ಅವರ ಒಪ್ಪಿಗೆಯ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ. ಜನಪ್ರಿಯತೆ, ಹಣ ಖರ್ಚು ಮಾಡುವ ಹಾಗೂ ಪಕ್ಷವನ್ನು ಸಂಘಟಿಸುವ ಸಾಮಥ್ರ್ಯ ವಿಜಯೇಂದ್ರ ಅವರಿಗಿದೆ. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷವನ್ನು ಕಟ್ಟಬಲ್ಲರು. ಯಡಿಯೂರಪ್ಪ ಅವರೂ ಪೂರ್ಣ ಮನಸ್ಸಿನಿಂದ ಕೆಲಸ ಮಾಡಬಲ್ಲರು ಎಂಬ ಚರ್ಚೆಯೂ ಪಕ್ಷದಲ್ಲಿ ನಡೆದಿದೆ.

ಬಿಜೆಪಿಯಲ್ಲಿ ವಿಜಯೇಂದ್ರ ಅವರನ್ನು ಪೂರ್ಣ ಪ್ರಮಾಣದ ಅವಧಿಗೆ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಮೂರು ಗುಂಪುಗಳಾಗಿವೆ. ವಿಜಯೇಂದ್ರ ನೇಮಕದ ಪರವಾಗಿರುವ ಮಾಜಿ ಸಿಎಂ ಯಡಿಯೂರಪ್ಪ ಬಣ, ಪಕ್ಷವನ್ನು ಬಿಎಸ್‌‍ವೈ ಹಿಡಿತದಿಂದ ಹೊರತರಬೇಕೆಂದು ಆಗ್ರಹಿಸುತ್ತಿರುವ ಬಿಜೆಪಿ ಅಸಮಾಧಾನಿತರ ಗುಂಪು. ಈ ಗುಂಪಿನಲ್ಲಿ ಪ್ರಮುಖವಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್‌, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ, ರಮೇಶ್‌ ಜಾರಕಿಹೊಳಿ, ಶಾಸಕ ಬಿ.ಪಿ.ಹರೀಶ, ಮಾಜಿ ಸಂಸದ ಪ್ರತಾಪ ಸಿಂಹ ಮತ್ತು ಇತರ ನಾಯಕರಿದ್ದಾರೆ. ತಟಸ್ಥ ಗುಂಪಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಸಚಿವ ಸುನೀಲ್‌ ಕುಮಾರ್‌, ಸಿ.ಟಿ.ರವಿ ಸೇರಿದಂತೆ ಬಹುತೇಕ ಸಂಸದರಿದ್ದಾರೆ.

ರಾಜ್ಯ ಬಿಜೆಪಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡುವುದಕ್ಕೆ ಅಪಸ್ವರವೆತ್ತಿರುವ ಪಕ್ಷದ ತಟಸ್ಥ ಬಣ ಮತ್ತು ಅಸಮಾಧಾನಿತ ಬಣದವರನ್ನು ವಿಶ್ವಾಸಕ್ಕೆ ತಗೆದುಕೊಂಡೇ ಹೊಸ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಬೇಕೆನ್ನುವ ಧೋರಣೆಯನ್ನು ಪಕ್ಷದ ಹೈಕಮಾಂಡ್‌ ಹೊಂದಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ವಿಜಯೇಂದ್ರ ನೇಮಕವನ್ನು ಪ್ರಬಲವಾಗಿ ವಿರೋಧಿಸಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಬಿಜೆಪಿಯ ಹಿರಿಯ ಮುಖಂಡರಾಗಿದ್ದ ಮಾಜಿ ಕೇಂದ್ರ ಸಚಿವ ಬಸನಗೌಡ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಪ್ರತ್ಯೇಕ ಸಭೆಗಳನ್ನು ನಡೆಸಿ ಮುಜುಗರ ಮಾಡುತ್ತಿದ್ದ ಹಾಗೂ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಅತೃಪ್ತ ಬಣದ ಶಾಸಕ ಬಿ.ಪಿ. ಹರೀಶ್‌ ಅವರಿಗೆ ಶಿಸ್ತು ಕ್ರಮದ ನೋಟಿಸ್‌‍ ನೀಡಿ ಬಿಜೆಪಿ ಹೈಕಮಾಂಡ್‌ ಬಿಸಿ ಮುಟ್ಟಿಸಿತ್ತು.

ಹೈಕಮಾಂಡ್‌ನ ಈ ಹೆಜ್ಜೆಗಳೆಲ್ಲಾ ವಿಜಯೇಂದ್ರ ಆಯ್ಕೆಗೆ ದಾರಿ ಸುಗಮಗೊಳಿಸುವುದಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ನೀಡುವುದಾದರೆ ಕೇಂದ್ರ ಸಚಿವ ಸ್ಥಾನವನ್ನು ಸಹ ಬಿಟ್ಟು ಬರಲು ಸಿದ್ಧವೆನ್ನುವ ಸಂದೇಶವನ್ನು ಸಹ ಸಚಿವ ಸೋಮಣ್ಣ ಹೈಕಮಾಂಡ್‌ಗೆ ರವಾನಿಸಿದ್ದಾರೆ.
ಪಕ್ಷದ ಹಿರಿಯ ಮುಖಂಡರಾದ ಸಿ.ಟಿ.ರವಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಅರವಿಂದ ಲಿಂಬಾವಳಿ, ಮಾಜಿ ಸಚಿವ ಸುನೀಲ್‌ ಕುಮಾರ್‌, ಮಾಜಿ ಸಿಎಂ ಬಸವರಾಜ ಬೊಮಾಯಿ, ಅವರು ಪಕ್ಷ ಅವಕಾಶ ನೀಡಿದರೆ ರಾಜ್ಯ ಬಿಜೆಪಿ ಅಧ್ಯಕ್ಷ ಗಾದಿಗೇರಲು ಒಲವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್‌ ಈ ಎಲ್ಲಾ ಹೆಸರುಗಳನ್ನು ಪರಿಶೀಲಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮತ್ತು ಮಾಜಿ ಸಿಎಂ ಯಡಿಯೂರಪ್ಪನವರ ಆಶೀರ್ವಾದ ಇರುವ ವಿಜಯೇಂದ್ರ ಆಯ್ಕೆಯೇ ಸಮಯೋಚಿತ ಎನ್ನುವ ನಿಲುವನ್ನು ದೆಹಲಿ ವರಿಷ್ಠರು ಹೊಂದಿದ್ದಾರೆ ಎನ್ನಲಾಗಿದೆ. ವಿಜಯೇಂದ್ರ ಅಧ್ಯಕ್ಷರಾಗಿ ನೇಮಕಗೊಂಡರೆ ಅತೃಪ್ತರ ಬಣಕ್ಕೆ ಮತ್ತು ತಟಸ್ಥ ಬಣದವರಿಗೆ ಪಕ್ಷದಲ್ಲಿ ಬೇರೆ ಗುರುತರ ಜವಾಬ್ದಾರಿ ನೀಡುವ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್‌ ಮನವೊಲಿಕೆಯ ನಡುವೆಯೂ ಅಸಮಾಧಾನಿತ ಮುಖಂಡರ ಗುಂಪು ವಿಜಯೇಂದ್ರ ಬದಲಾವಣೆಗೆ ತನ್ನ ಪಟ್ಟನ್ನು ಮುಂದುವರಿಸಿದೆ.
ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ವಿರುದ್ಧ ಬಿಜೆಪಿ ಸಂಘಟನೆಯನ್ನು ಪ್ರಬಲವಾಗಿ ಕಟ್ಟಿ, ಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ವಿಜಯೇಂದ್ರ ಅವರಿಗೆ ಇಲ್ಲ. ಬಿಜೆಪಿಯನ್ನು ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಹೊರತರುವ ಉದ್ದೇಶದಿಂದ ವಿಜಯೇಂದ್ರ ಹೊರತುಪಡಿಸಿ ಬೇರೆ ಯಾರನ್ನಾದರೂ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಅವಶ್ಯಕತೆ ಇದೆಯೆನ್ನುವ ತಮ ಸ್ಪಷ್ಟ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News