Tuesday, December 9, 2025
Homeರಾಜ್ಯತಡವಾಗಿ ಆರಂಭವಾದ ವಿಧಾನ ಸಭೆ ಕಲಾಪ, ಪ್ರತಿಪಕ್ಷಗಳ ಆಕ್ರೋಶ

ತಡವಾಗಿ ಆರಂಭವಾದ ವಿಧಾನ ಸಭೆ ಕಲಾಪ, ಪ್ರತಿಪಕ್ಷಗಳ ಆಕ್ರೋಶ

Opposition parties express outrage over late start to Assembly session

ಬೆಳಗಾವಿ ಡಿ.9- ವಿಧಾನ ಸಭೆಯ ಕಲಾಪ ತಡವಾಗಿ ಆರಂಭವಾಗಿದ್ದಕ್ಕೆ ವಿರೋಧ ಪಕ್ಷಗಳ ನಾಯಕರು ಮತ್ತು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆರಂಭವಾಗುತ್ತಿದ್ದಂತೆ ಬಿಜೆಪಿಯ ಸದಸ್ಯ ಎಸ್‌‍.ಸುರೇಶ್‌ ಕುಮಾರ್‌, ಯುಟಿ ಖಾದರ್‌ ಅವರು ಸಭಾಧ್ಯಕ್ಷರಾದ ಬಳಿಕ ಹೊಸ ಸಂಪ್ರದಾಯಗಳು ಜಾರಿಗೆ ಬಂದಿವೆ.

ಕಲಾಪ ಯಾವ ಸಮಯಕ್ಕೆ ಶುರುವಾಗಲಿದೆ, ಎಷ್ಟು ಹೊತ್ತಿಗೆ ಸದನಕ್ಕೆ ಬರಬೇಕು ಎಂಬ ಸಂದೇಶ ಎಲ್ಲಾ ಸದಸ್ಯರಿಗೂ ಬರುತ್ತಿದೆ. ಅದರಂತೆ ಇಂದು ಬೆಳಗ್ಗೆ 9.45 ಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ 11.10 ಗಂಟೆಯಾದರೂ ಕಲಾಪ ಇನ್ನೂ ಶುರುವಾಗಿಲ್ಲ. ಹಾಗಿದ್ದ ಮೇಲೆ ನಾವು ಏಕೆ ಮುಂಚಿತವಾಗಿ ಬರಬೇಕು? ಸಭಾಧ್ಯಕ್ಷರ ಮಾತಿಗೆ ಬೆಲೆ ಇಲ್ಲವೇ ? ಕೆಲ ಸಚಿವರನ್ನು ಹೊರತುಪಡಿಸಿದರೆ ಬಹುತೇಕ ಮಂದಿ ಗೈರು ಹಾಜರಾಗಿದ್ದಾರೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಧ್ವನಿಗೂಡಿಸಿದರು. ನೀವು ಪ್ರತಿಭಟನೆಗೆ ಹೋಗುವುದಾಗಿ ಹೇಳಿದ್ದಿರಲ್ಲವೇ ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು. ನೀವು ನಮನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೀರಾ ಅಂತ ಪ್ರತಿಭಟನೆಗೆ ಹೋಗಲು ಬಿಡುತ್ತಿಲ್ಲ, ಇಲ್ಲಿ ನಿಲುವಳಿ ಸೂಚನೆ ಮಂಡಿಸಲು ಸಮಯ ಸಿಗುತ್ತಿಲ್ಲ ಎಂದು ಅಶೋಕ್‌ ಅಸಹನೆ ವ್ಯಕ್ತ ಪಡಿಸಿದರು.

ಪ್ರಶ್ನೋತ್ತರದ ಬಳಿಕ ನಿಲುವಳಿ ಸೂಚನೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಬಹುತೇಕ ಎಲ್ಲಾ ಸಚಿವರು ಹಾಜರಿದ್ದಾರೆ. ಕಲಾಪ ಆರಂಭವಾಗುವುದು ತಡವಾದ ಕಾರಣಕ್ಕೆ ಮೊಗಸಾಲೆಯಲ್ಲಿರಬಹುದು. ಈ ಹಿಂದೆ ಯಾವ ರೀತಿ ಅಧಿವೇಶನ ನಡೆದಿದೆ ಎಂಬುದನ್ನು ನಾವೆಲ್ಲ ನೋಡಿದ್ದೇವೆ ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಸುರೇಶ್‌ ಕುಮಾರ್‌ ಅವರು ದೃಷ್ಟಾಂತವೊಂದನ್ನು ಉಲ್ಲೇಖಿಸಿದರು. ಪ್ರತಿ ದಿನ ತಡವಾಗಿ ಬರುತ್ತಿದ್ದ ರೈಲೊಂದು ಒಂದು ದಿನ ಸರಿ ಸಮಯಕ್ಕೆ ಸರಿಯಾಗಿ ಬಂದಿತ್ತು. ಊರಿನವರು ಖುಷಿಯಾಗಿ ರೈಲಿಗೆ ಹಾರ ಹಾಕಿ ಪೂಜೆ ಮಾಡಿದರು. ಆದರೆ ತಡವಾಗಿ ಗೊತ್ತಾಗಿದ್ದು ಏನು ಎಂದರೆ ಅದು ನಿನ್ನೆಯ ದಿನ ಬರಬೇಕಾಗಿದ್ದ ರೈಲು ಎಂದು ಹೇಳಿದರು .

ಸಭಾಧ್ಯಕ್ಷ ಯು.ಟಿ.ಖಾದರ್‌, ಸುವರ್ಣಸೌಧದ ಭವ್ಯ ಮೆಟ್ಟಿಲುಗಳ ಮೇಲೆ ದೇಶದಲ್ಲೇ ದೊಡ್ಡದಾದ ರಾಷ್ಟ್ರಧ್ವಜವನ್ನು ಅನಾವರಣಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಲು ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲರಿಗೂ ಆಹ್ವಾನ ನೀಡಲಾಗಿತ್ತು. ವಿರೋಧ ಪಕ್ಷದವರು ಬಂದಿರಲ್ಲಿಲ್ಲ. ಅದನ್ನು ಮುಗಿಸಿಕೊಂಡು ಬರುವುದು ತಡವಾಗಿದೆ. ಮುಂದೆ ನಿಗದಿತ ಸಮಯಕ್ಕೆ ಕಲಾಪ ಆರಂಭವಾಗಲಿದೆ ಎಂದು ಹೇಳಿ, ಚರ್ಚೆಗೆ ತೆರೆ ಎಳೆದರು.

RELATED ARTICLES

Latest News