Homeರಾಜ್ಯನಮ್ಮ ಮೆಟ್ರೋದ ಪಿಂಕ್‌ಲೈನ್‌ ಮೆಟ್ರೋ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ನಮ್ಮ ಮೆಟ್ರೋದ ಪಿಂಕ್‌ಲೈನ್‌ ಮೆಟ್ರೋ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು,ನ.13- ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿ, ನಮ್ಮ ಮೆಟ್ರೋದ ಪಿಂಕ್‌ ಲೈನ್‌ನ ಕಾಳೇನಅಗ್ರಹಾರ-ತಾವರೆಕೆರೆ ನಡುವಿನ 7.5 ಕಿಲೋಮೀಟರ್‌ ಉದ್ದದ ಎಲಿವೇಟೆಡ್‌ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳಿಸಿದರು.

ಈ ಮೂಲಕ ಬೆಂಗಳೂರಿನ ನಮ ಮೆಟ್ರೋ ರೈಲು ರಾಷ್ಟ್ರ ರಾಜಧಾನಿ ನವದೆಹಲಿಯ ನಂತರ 2ನೇ ಅತಿ ಉದ್ದದ ಮೆಟ್ರೋ ಜಾಲ ಹೊಂದಿದ 2ನೇ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜಧಾನಿ ಬೆಂಗಳೂರಿನ ಹೆಮೆಯ ನಮ ಮೆಟ್ರೋ ರೈಲು ಇದೀಗ ಮೊದಲ ಬಾರಿಗೆ 100 ಕಿಲೋಮೀಟರ್‌ ಗಡಿ ದಾಟಿ ಸುಮಾರು 103.6 ಕಿಲೋಮೀಟರ್‌ಗೆ ವಿಸ್ತರಣೆಯಾಗಿದೆ.

ನಗರದ ತಾವರೆಕೆರೆ ಮೆಟ್ರೋ ನಿಲ್ದಾಣದ ಬಳಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ನರೇಂದ್ರಮೋದಿ ಅವರು ಪಿಂಕ್‌ ಲೈನ್‌ ಮಾರ್ಗಕ್ಕೆ ಹಸಿರುನಿಶಾನೆ ತೋರಿದರು.ರಾಜ್ಯಪಾಲರಾದ ಡಾ.ಸುಧಾ ಯಾದವ್‌, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ಕೃಷ್ಣ ಬೈರೇಗೌಡ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು. ನಂತರ ಮೋದಿ ಸೇರಿದಂತೆ ಹಲವು ಗಣ್ಯರು ತಾವರೆಕೆರೆಯಿಂದ ಐಐಎಂಬಿ ಮೆಟ್ರೋ ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣಿಸಿದರು.

ಈ ಹೊಸ ಮಾರ್ಗವು ವಿಶೇಷವಾಗಿ ಬನ್ನೇರುಘಟ್ಟ ರಸ್ತೆ ಹಾಗೂ ದಕ್ಷಿಣ ಬೆಂಗಳೂರಿನ ಭಾಗಗಳಲ್ಲಿ ಸಂಚಾರ ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆಯಿದೆ. ಪ್ರತಿದಿನದ ವಾಹನ ಸಂಚಾರದಟ್ಟಣೆ, ಪ್ರಯಾಣದ ಸಮಯ ಮತ್ತು ರಸ್ತೆ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈ ಮಾರ್ಗ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.

ಕಾಳೇನಅಗ್ರಹಾರ-ತಾವರೆಕೆರೆ ಎಲಿವೇಟೆಡ್‌ ಭಾಗವನ್ನು ಸುಮಾರು 3,470 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣಿಕರಿಗೆ ನಾಳೆಯಿಂದ ಸೇವೆ ಆರಂಭವಾಗಲಿದೆ.ಪಿಂಕ್‌ ಲೈನ್‌ ಸಂಪರ್ಕಿಸುವ ಪ್ರದೇಶಗಳು ಪ್ರಸ್ತುತ ಉದ್ಘಾಟನೆಯಾಗಿರುವ 7.5 ಕಿ.ಮೀ. ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳಿದ್ದು, ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ ಬಿಳೇಕಹಳ್ಳಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ, ತಾವರೆಕೆರೆಯನ್ನು ಒಳಗೊಂಡಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಯೆಲ್ಲೋ ಲೈನ್‌ಗೆ ಸಂಪರ್ಕ ದೊರೆಯುವುದರಿಂದ ಎಲೆಕ್ಟ್ರಾನಿಕ್‌ ಸಿಟಿ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಎಲ್ಲೆಲ್ಲಿಗೆ ಸಂಪರ್ಕ?
ಸಂಪೂರ್ಣ 21.26 ಕಿ.ಮೀ. ಪಿಂಕ್‌ ಲೈನ್‌ ದಕ್ಷಿಣ ಬೆಂಗಳೂರಿನ ಕಾಳೇನಅಗ್ರಹಾರದಿಂದ ಉತ್ತರ ಬೆಂಗಳೂರಿನ ನಾಗವಾರದವರೆಗೆ ಸಂಪರ್ಕ ಕಲ್ಪಿಸಲಿದೆ. ಒಟ್ಟು 18 ನಿಲ್ದಾಣಗಳನ್ನು ಹೊಂದಲಿರುವ ಈ ಮಾರ್ಗದಲ್ಲಿ ತಾವರೆಕೆರೆ-ನಾಗವಾರ ಭಾಗವು ಭೂಗತ ಮಾರ್ಗವಾಗಿರಲಿದೆ.

ಮುಂದಿನ ಹಂತದಲ್ಲಿ ಈ ಮಾರ್ಗವು ಡೇರಿ ಸರ್ಕಲ್‌, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್‌ ಟೌನ್‌, ನ್ಯಾಷನಲ್‌ ಮಿಲಿಟರಿ ಸ್ಕೂಲ್‌, ಎಂಜಿ ರಸ್ತೆ, ಶಿವಾಜಿನಗರ, ಕಂಟೋನೆಂಟ್‌, ಪಾಟರಿ ಟೌನ್‌, ಟ್ಯಾನರಿ ರಸ್ತೆ, ವೆಂಕಟೇಶಪುರ, ಕಡುಗೊಂಡನಹಳ್ಳಿ ಮತ್ತು ನಾಗವಾರ ಭಾಗಗಳಿಗೆ ಸಂಪರ್ಕ ಕಲ್ಪಿಸಲಿದೆ.

ಹೀಗಾಗಿ ಪಿಂಕ್‌ ಲೈನ್‌ ಪೂರ್ಣಗೊಂಡ ಬಳಿಕ ದಕ್ಷಿಣ ಬೆಂಗಳೂರಿನ ಕಲೇನ ಅಗ್ರಹಾರ-ಬನ್ನೇರುಘಟ್ಟ ರಸ್ತೆ ಪ್ರದೇಶದಿಂದ ಉತ್ತರ ಬೆಂಗಳೂರಿನ ನಾಗವಾರದವರೆಗೆ ನೇರ ಮೆಟ್ರೋ ಸಂಪರ್ಕ ಸಿಗಲಿದೆ. ಐಐಎಂಬಿ, ಜಯದೇವ ಆಸ್ಪತ್ರೆ, ಜೆ.ಪಿ.ನಗರ, ಎಂಜಿ ರಸ್ತೆ, ಶಿವಾಜಿನಗರ ಸೇರಿದಂತೆ ಪ್ರಮುಖ ವಾಣಿಜ್ಯ, ಶಿಕ್ಷಣ, ವೈದ್ಯಕೀಯ ಮತ್ತು ವಸತಿ ಪ್ರದೇಶಗಳಿಗೆ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.

ಹೊಸ ಮಾರ್ಗದ 6 ನಿಲ್ದಾಣಗಳು
ತಾವರೆಕೆರೆಯಿಂದ ನಾಗವಾರದವರೆಗಿನ 13.8 ಕಿ.ಮೀ. ಉದ್ದದ ಸುರಂಗ ಮಾರ್ಗದ ಕಾಮಗಾರಿಯು 2027ಕ್ಕೆ ಮುಕ್ತಾಯಗೊಳ್ಳಲಿದೆ. ನಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳಿದ್ದು ಬನ್ನೇರುಘಟ್ಟ ರಸ್ತೆಯ ಎತ್ತರಿಸಿದ ಮಾರ್ಗದಲ್ಲಿರುವ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ ಬೆಂಗಳೂರು , ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ, ತಾವರೆಕೆರೆ ನಿಲ್ದಾಣಗಳು ಈಗ ರೈಲು ಸಂಚಾರಕ್ಕೆ ಮುಕ್ತವಾಗಲಿವೆೆ.

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಂದ ಪಿಂಕ್‌ ಲೈನ್‌ನ ಮೊದಲ ಹಂತದ ಉದ್ಘಾಟನೆಯು ಬೆಂಗಳೂರಿನ ಮೆಟ್ರೋ ವಿಸ್ತರಣೆಯಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ನಗರದ ಮೆಟ್ರೋ ಜಾಲವನ್ನು 100 ಕಿ.ಮೀ. ಗಡಿ ದಾಟಿಸಿರುವುದರ ಜೊತೆಗೆ, ದಕ್ಷಿಣ-ಉತ್ತರ ಬೆಂಗಳೂರಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

RELATED ARTICLES

Latest News