ಬೆಂಗಳೂರು,ಅ.22- ರಾಜಕಾಲುವೆಯಲ್ಲಿ ಮಹಿಳೆಯ ಶವಪತ್ತೆಯಾದ ಪ್ರಕರಣ ಬೆನ್ನತ್ತಿದ ಮಾಗಡಿರಸ್ತೆ ಠಾಣೆ ಪೊಲೀಸರು ಕೊನೆಗೂ ಆರೋಪಿ ಪತಿಯನ್ನು ಬಂಧಿಸಿದ್ದಾರೆ.ಬಿಹಾರ ರಾಜ್ಯದ ಮಧುಬನಿ ನಗರದ ನಿವಾಸಿ ಮೊಹಮದ್ ಇಜ್ಹಾರ್ (22) ಬಂಧಿತ ಆರೋಪಿ.
ಬಿಹಾರ ಮೂಲದವನಾದ ಈತ ರುಕ್ಸಾನ ಕಾತುನ್(25) ಎಂಬ ಯುವತಿಯನ್ನು ಪ್ರೀತಿಸಿ ಬಿಹಾರದಲ್ಲಿ ಮದುವೆ ಮಾಡಿಕೊಂಡು ಆರು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಪತ್ನಿಯನ್ನು ಕರೆದುಕೊಂಡು ಬಂದು ಗೋಪಾಲ ಪುರಂನ ಮಿನರ್ವ ಮಿಲ್ ಹಿಂಭಾಗದ ಐದನೇ ಕ್ರಾಸ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ದಂಪತಿ ವಾಸವಾಗಿದ್ದರು.
ಮೊಹಮದ್ ಬಟ್ಟೆ ಫ್ಯಾಕ್ಟರಿಯೊಂದರಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದರೆ ಈತನ ಪತ್ನಿ ಗುಜರಿ ಅಂಗಡಿಯೊಂದರಲ್ಲಿ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಪತ್ನಿ ಮೇಲೆ ಗಂಡನಿಗೆ ಅನುಮಾನ. ಯಾರಾದರೊಂದಿಗೆ ಮಾತನಾಡಿ ದರೆ ಜಗಳವಾಡುತ್ತಿದ್ದನು. ಇದೇ ವಿಚಾರಕ್ಕೆ ದಂಪತಿ ನಡುವೆ ಅ.13 ರಂದು ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೋಪದಲ್ಲಿ ಪತ್ನಿ ತಲೆಗೆ ಕಲ್ಲಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.
ನಂತರ ಶವವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಸ್ಕೂಟರ್ನಲ್ಲಿ ತಂದು ಗೋಪಾಲಪುರ ಮುಖ್ಯರಸ್ತೆಯಲ್ಲಿರುವ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದನು. ಮಾರನೇ ದಿನ ರಾಜಕಾಲುವೆಯಲ್ಲಿ ಮಹಿಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೋರಿಯಿಂದ ಹೊರತೆಗೆದು ನೋಡಿದಾಗ ಮಹಿಳೆಯ ಹಣೆಯ ಭಾಗದಲ್ಲಿ ಗಾಯದ ಗುರುತಿರುವುದು ಗಮನಕ್ಕೆ ಬಂದಿದೆ. ನಂತರ ಈ ಮಹಿಳೆಯ ಗುರುತು ಪತ್ತೆ ಹಚ್ಚಿದ ಪೊಲೀಸರು ಆಕೆಯ ಮನೆಯನ್ನು ಹುಡುಕಿ ಕೊನೆಗೂ ಆರೋಪಿ ಪತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
