ಬೆಂಗಳೂರು, ಅ.16- ಕರ್ನಾಟಕ ರಾಜ್ಯದ ಎರಡನೇ ಮಹಿಳಾ ರಾಜ್ಯಪಾಲರಾಗಿ ಕಾರ್ಯಾರಂಭಿಸಿರುವ ಡಾ.ಸುಧಾ ಯಾದವ್ ಅವರ ರಾಜಕೀಯ ಪ್ರವೇಶವೇ ಸ್ವಾರಸ್ಯಕರವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅನ್ವೇಷಣೆಯ ಮಹಿಳಾ ನಾಯಕಿ ರಾಜ್ಯದ ಸಂವಿಧಾನ ರಕ್ಷಣೆಯ ಪ್ರಮುಖ ಜವಾಬ್ದಾರಿಯಲ್ಲಿ ಆಸೀನರಾಗಿದ್ದಾರೆ.
1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹರಿಯಾಣದ ಭಿವಾನಿ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದ ಓಂ ಪ್ರಕಾಶ್ ಧನಕರ್, ಯುದ್ಧದಲ್ಲಿ ಹುತಾತರಾದ ಹರಿಯಾಣದ ಸೈನಿಕರ ಹೆಸರುಗಳು ಮತ್ತು ಅವರ ಕುರಿತ ಪತ್ರಿಕಾ ವರದಿಗಳನ್ನು ಶಾಲೆಯ ಸಿಬ್ಬಂದಿ ಕೊಠಡಿಯಲ್ಲಿದ್ದ ಫಲಕಕ್ಕೆ ಅಂಟಿಸುತ್ತಿದ್ದರು. ಆಗ ಅವರು ಭಾರತೀಯ ಜನತಾ ಪಕ್ಷದ ಹರಿಯಾಣ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಆ ಫಲಕದಲ್ಲಿದ್ದ ಹುತಾತ್ಮರ ಪೈಕಿ ಒಬ್ಬರಾಗಿದ್ದ ಗಡಿ ಭದ್ರತಾ ಪಡೆಯ ಉಪ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್ ಅವರ ಪತ್ನಿ ಸುಧಾ ಯಾದವ್, ಇದೀಗ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಸುಖಬೀರ್ ಸಿಂಗ್ ಯಾದವ್ ಕಾರ್ಗಿಲ್ ಯುದ್ಧದಲ್ಲಿ ಹುತಾತರಾಗುವ ಸಂದರ್ಭದಲ್ಲಿ ಸುಧಾ ಯಾದವ್ ಅವರಿಗೆ 34 ವರ್ಷ ವಯಸ್ಸಾಗಿತ್ತು. ಅವರು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪಡೆದಿದ್ದರು. ಕಾರ್ಗಿಲ್ ಯುದ್ಧದ ನಂತರ ನಡೆದ 1999ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಹತ್ತು ಲೋಕಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಸ್ಪರ್ಧಿಸಲು ನಿರ್ಧರಿಸಿತ್ತು. ಸೀಟು ಹಂಚಿಕೆ ಪ್ರಕಾರ ಬಿಜೆಪಿಯ ಮಿತ್ರ ಪಕ್ಷದ ಭಾರತೀಯ ರಾಷ್ಟ್ರೀಯ ಲೋಕದಳ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿತ್ತು.
ಆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ ಹರಿಯಾಣದ ಬಿಜೆಪಿ ಉಸ್ತುವಾರಿಯೂ ಆಗಿದ್ದರು. ಅವರು ಓಂ ಪ್ರಕಾಶ್ ಧನಕರ್ ಅವರಿಗೆ ದೂರವಾಣಿ ಕರೆ ಮಾಡಿ, ಕಾರ್ಗಿಲ್ ಯುದ್ಧದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರನ್ನು ಚುನಾವಣಾ ಕಣಕ್ಕಿಳಿಸುವ ಉದ್ದೇಶವಿದೆ ಎಂದು ತಿಳಿಸಿ, ಸೂಕ್ತ ಅಭ್ಯರ್ಥಿಯ ಹೆಸರನ್ನು ಸೂಚಿಸುವಂತೆ ಕೇಳಿದ್ದರು.
ಹುತಾತ ಯೋಧರ ವಿವರ ಗಳನ್ನು ಸಂಗ್ರಹಿಸುತ್ತಿದ್ದ ಧನಕರ್ ಅವರಿಗೆ ಸುಧಾ ಯಾದವ್ ಅವರ ಹಿನ್ನೆಲೆ ತಿಳಿದಿತ್ತು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರಲ್ಲಿ ಹರಿಯಾಣದ ಚರ್ಖಿ ಗ್ರಾಮದ ಸುರೇಶ್ ಮೊದಲಿಗರಾಗಿದ್ದರೆ, ಗಡಿ ಭದ್ರತಾ ಪಡೆಯ ಉಪ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್ ಎರಡನೇಯವರಾಗಿ ದ್ದರು.
ಯುದ್ಧದಲ್ಲಿ ಮೃತಪಟ್ಟ ಹಲವು ಯೋಧರು ಅವಿವಾಹಿತರಾಗಿದ್ದರು. ಕೆಲವರು 20 ರಿಂದ 24 ವರ್ಷದೊಳಗಿನ ಪತ್ನಿಯರನ್ನು ಅಗಲಿದ್ದರು. ಆದರೆ ಸುಧಾ ಯಾದವ್ ಅವರಿಗೆ ಸುಮಾರು 34 ವರ್ಷ ವಯಸ್ಸಾಗಿದ್ದು, ಉನ್ನತ ಶಿಕ್ಷಣ ಪಡೆದಿದ್ದರು. ಹೀಗಾಗಿ ಅವರು ಚುನಾವಣೆಗೆ ಸೂಕ್ತ ಅಭ್ಯರ್ಥಿಯಾಗಬಲ್ಲರು ಎಂದು ಧನಕರ್ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದರು. ಬಳಿಕ ತಮ್ಮ ಹಳೆಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹೋದ್ಯೋಗಿ ರಾಮ್ ಅವತಾರ್ ಲಂಬಾ ಅವರನ್ನು ಸುಧಾ ಯಾದವ್ ಅವರ ಮನೆಗೆ ಕಳುಹಿಸಿ ಅವರ ವಿದ್ಯಾರ್ಹತೆ ಸೇರಿದಂತೆ ಅಗತ್ಯ ವಿವರಗಳನ್ನು ಪರಿಶೀಲಿಸಿದ್ದರು.
ಆ ದಿನಗಳಲ್ಲಿ ನರೇಂದ್ರ ಮೋದಿ ತಂತ್ರಜ್ಞಾನವನ್ನು ಪರಿಣಾಮ ಕಾರಿಯಾಗಿ ಬಳಸುತ್ತಿದ್ದರು ಎಂದು ಧನಕರ್ ಸುದ್ದಿಗಾರರೊಂದಿಗೆ ತಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪಕ್ಷದ ಪದಾಧಿಕಾರಿಗಳು ತಮ ಮನೆಗಳಲ್ಲಿಯೂ ಫ್ಯಾಕ್್ಸ ಯಂತ್ರಗಳನ್ನು ಇಟ್ಟುಕೊಳ್ಳುವಂತೆ ನರೇಂದ್ರ ಮೋದಿ ಸೂಚಿಸಿದ್ದರು. ಒಂದು ದಿನ ಮೋದಿ ಅವರಿಂದ ಫ್ಯಾಕ್್ಸ ಸಂದೇಶ ಬಂದಿದ್ದು, ಪಕ್ಷದ ಉಪಾಧ್ಯಕ್ಷ ಕೈಲಾಶ್ ಶರ್ಮಾ ಅವರೊಂದಿಗೆ ಸುಧಾ ಯಾದವ್ ಅವರನ್ನು ಭೇಟಿಯಾಗುವಂತೆ ಅದರಲ್ಲಿ ತಿಳಿಸಲಾಗಿತ್ತು.
ಇಬ್ಬರೂ ಕೈಲಾಶ್ ಶರ್ಮಾ ಅವರ ವಾಹನದಲ್ಲಿ ಸುಧಾ ಯಾದವ್ ಅವರ ಮನೆಗೆ ತೆರಳಿ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದ ಪ್ರಸ್ತಾವನೆಯನ್ನು ಮುಂದಿಟ್ಟರು. ಆದರೆ ಸುಧಾ ಯಾದವ್ ಅವರು ಅನುಕಂಪದ ಆಧಾರದ ಮೇಲೆ ಹರಿಯಾಣ ನಾಗರಿಕ ಸೇವೆಯ ಅಧಿಕಾರಿಯಾಗಿ ನೇಮಕಗೊಳ್ಳಲು ಹೆಚ್ಚು ಆಸಕ್ತಿ ಹೊಂದಿದ್ದರು. ಈ ಕುರಿತು ಕೈಲಾಶ್ ಶರ್ಮಾ ಮತ್ತು ಓಂ ಪ್ರಕಾಶ್ ಧನಕರ್ ಅವರು ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಮಾಹಿತಿಯ ಪ್ರತ್ಯೇಕ ವರದಿ ನೀಡಿದ್ದರು.
ಶರ್ಮಾ ನೀಡಿದ್ದ ವರದಿಯಲ್ಲಿ ಸುಧಾ ಯಾದವ್ ಸರ್ಕಾರಿ ಹುದ್ದೆಗೆ ಸೇರಲು ಸಿದ್ಧರಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಧನಕರ್ ನೀಡಿದ್ದ ವರದಿಯಲ್ಲಿ ಸರ್ಕಾರಿ ಸೇವೆಯ ಆಕಾಂಕ್ಷೆಯ ಬದಲಿಗೆ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮನವೋಲಿಸಬಹುದು ಎಂಬ ಅಭಿಪ್ರಾಯ ಇತ್ತು. ಅದರಂತೆ ಮೋದಿ ಅವರು ಸುಧಾ ಯಾದವ್ ಅವರನ್ನು ಮನವೋಲಿಸಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ನಂತರ ಗುರುಗ್ರಾಮದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ನರೇಂದ್ರ ಮೋದಿ ಅವರು ಸುಧಾ ಯಾದವ್ ಅವರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಸುಧಾ ಯಾದವ್ ಅವರ ಚುನಾವಣೆಯ ಖರ್ಚಿಗೆ ದೇಣಿಗೆ ಸಂಗ್ರಹಿಸುವಂತೆ ಹಿರಿಯ ನಾಯಕ ರಾಮ್ಬಿಲಾಸ್ ಶರ್ಮಾ ಅವರಿಗೆ ಮೋದಿ ಸಲಹೆ ನೀಡಿದರು. ಶರ್ಮಾ ಅವರು ತಮ್ಮ ಕುರ್ತಾದ ತುದಿಯನ್ನು ಚೀಲದಂತೆ ಹಿಡಿದು ಹಣ ಸಂಗ್ರಹಿಸಲು ಆರಂಭಿಸಿದರು. ಮೊದಲಿಗೆ ನರೇಂದ್ರ ಮೋದಿ ತಮ್ಮಲ್ಲಿದ್ದ ಹಣವನ್ನು ಅದರಲ್ಲಿ ಹಾಕಿ ಚಾಲನೆ ನೀಡಿದರು. ಇದರಿಂದ ಪ್ರೇರಿತರಾದ ಸಭೆಯಲ್ಲಿದ್ದ ಕಾರ್ಯಕರ್ತರು ಮತ್ತು ಮುಖಂಡರು ತಮ ಕೈಲಾದಷ್ಟು ಹಣವನ್ನು ನೀಡಿದರು. ಕೆಲವೇ ನಿಮಿಷಗಳಲ್ಲಿ ಒಟ್ಟು 12.5 ಲಕ್ಷ ರೂಪಾಯಿ ಸಂಗ್ರಹವಾಯಿತು. ಸುಧಾ ಯಾದವ್ ಅವರ ಚುನಾವಣಾ ಪ್ರಚಾರಕ್ಕೆ ಈ ನೆರವು ಮಹತ್ವದ ಬೆಂಬಲವಾಯಿತು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಡೆದ ಮತ್ತೊಂದು ಘಟನೆ ಸಾರ್ವಜನಿಕರ ಗಮನ ಸೆಳೆಯಿತು. ಕಾರ್ಗಿಲ್ ಯುದ್ಧದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಮತ್ತೊಬ್ಬ ಮಹಿಳೆ ವೇದಿಕೆಗೆ ಬಂದು ಸುಧಾ ಯಾದವ್ ಅವರನ್ನು ತಬ್ಬಿಕೊಂಡು ಅತ್ತರು. ಇಬ್ಬರೂ ಮಹಿಳೆಯರು ಭಾವುಕರಾಗಿ ಕಣ್ಣೀರಿಟ್ಟರು. ಈ ಘಟನೆಯ ಛಾಯಾಚಿತ್ರವನ್ನು ಹಲವು ಪತ್ರಿಕೆಗಳು ಪ್ರಕಟಿಸಿದ್ದವು.
ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ ಸುಧಾ ಯಾದವ್, ಕಾಂಗ್ರೆಸ್ ಅಭ್ಯರ್ಥಿ ರಾವ್ ಇಂದರ್ಜಿತ್ ಸಿಂಗ್ ಅವರನ್ನು 1.39 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು. ಇದು ಅವರ ರಾಜಕೀಯ ಜೀವನದ ಮೊದಲ ಚುನಾವಣೆಯಾಗಿತ್ತು. ಅದೇ ವರ್ಷ ಭಾರತೀಯ ಜನತಾ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಲೋಕದಳದ ಮೈತ್ರಿಕೂಟ ಹರಿಯಾಣದ ಎಲ್ಲ ಹತ್ತು ಲೋಕಸಭಾ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿತ್ತು.
ಆದರೆ 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಸುಧಾ ಯಾದವ್ ಸೋಲು ಅನುಭವಿಸಿದರು. 2014ರ ವೇಳೆಗೆ ಅವರ ರಾಜಕೀಯ ಎದುರಾಳಿ ರಾವ್ ಇಂದರ್ಜಿತ್ ಸಿಂಗ್ ಕೂಡ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಸುಧಾ ಯಾದವ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ದೊರೆತಿರಲಿಲ್ಲ. ಆದರೂ ಪಕ್ಷದ ಸಂಘಟನೆಯಲ್ಲಿ ಅವರಿಗೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ ದರು.
2015ರ ಜುಲೈನಲ್ಲಿ ಅವರನ್ನು ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ನೇಮಕ ಮಾಡಲಾಯಿತು. 2019ರಿಂದ 2022ರವರೆಗೆ ಅವರು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದರು.
2022ರ ಆಗಸ್ಟ್ನಲ್ಲಿ ಪಕ್ಷದ ಸಂಸದೀಯ ಮಂಡಳಿಗೆ ಅವರನ್ನು ನೇಮಕ ಮಾಡಲಾಯಿತು. ಸುಷಾ ಸ್ವರಾಜ್ ಅವರ ನಂತರ ಈ ಮಂಡಳಿಯಲ್ಲಿ ಸ್ಥಾನ ಪಡೆದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. ಸುಧಾ ಯಾದವ್ ಅವರು 1987ರಲ್ಲಿ ಐಐಟಿ ರೂರ್ಕಿಯಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 1992ರಲ್ಲಿ ಪಿಎಚ್ಡಿ ಪೂರ್ಣಗೊಳಿಸಿದ್ದಾರೆ. ರಾಷ್ಟ್ರಪತಿಗಳ ಮಾರ್ಗದರ್ಶಕ ಪ್ರಶಸ್ತಿಯನ್ನೂ ಪಡೆದಿರುವ ಅವರು ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ.
