ಬೆಂಗಳೂರು,ಜು.23-ಬಿಜೆಪಿ ಶಾಸಕ ಬಿ.ಪಿ ಹರೀಶ್ ಹಾಗು ಇತರರ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿ ಪುಣ್ಯೇಶ್ ಒಂದು ಬಾಕ್ಸ್ ನಲ್ಲಿ ಮೊಟ್ಟೆಗಳನ್ನು ತಂದಿದ್ದ ಎಂದು ಬೆಳಕಿಗೆ ಬಂದಿದೆ.
ಈ ಕೃತ್ಯದ ಹಿಂದೆ ಇನ್ನೂ ಕೆಲವರು ಇದ್ದಾರೆಯೇ ಎಂಬ ಅನುಮಾನವೂ ಪೊಲೀಸರಿಗೆ ಮೂಡಿದ್ದು, ಆ ದಿಕ್ಕಿನಲ್ಲೂ ತನಿಖೆ ಮುಂದುವರಿದಿದೆ. ಪ್ರಮುಖ ಅರೋಪಿ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೊಟ್ಟೆಗಳನ್ನು ಎಲ್ಲಿಂದ ತಂದಿದ್ದ, ಘಟನೆ ಪೂರ್ವನಿಯೋಜಿತವಾಗಿತ್ತೇ, ಮೊಟ್ಟೆ ಎಸೆಯಲು ಯಾರಾದರೂ ಸೂಚನೆ ನೀಡಿದ್ದರೇ ಹಾಗೂ ಪುಣ್ಯೇಶ್ ಜೊತೆಗೆ ಇದ್ದವರು ಯಾರು ಎಂಬ ಬಗ್ಗೆ ಪೊಲೀಸರು ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ
