ಬೆಂಗಳೂರು,ಮಾ.5-ರಾಜ್ಯದ ಬಹುತೇಕ ಖಾಸಗಿ ಅನುದಾನಿತ ಶಾಲೆಗಳು ಮುಂಬರುವ 2026-27 ಸಾಲಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಹಾಲಿ ಇರುವ ವಾರ್ಷಿಕ ಶುಲ್ಕವನ್ನು ಶೇ 5 ರಿಂದ 8ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಪೋಷಕರಿಗೆ ಮತ್ತೊಂದು ಹೊರೆಬೀಳುವುದು ಗ್ಯಾರಂಟಿ.
ಒಂದೇ ಬಾರಿಗೆ ಶುಲ್ಕವನ್ನು ಗಣನೀಯವಾಗಿ ಏರಿಕೆ ಮಾಡಿದ್ದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಹೊರೆಯಾಗಿದೆ ಎಂದು ಹಲವು ಪೋಷಕರು ದೂರಿದ್ದಾರೆ.ಖಾಸಗಿ ಶಾಲೆಗಳನ್ನು ನಿಯಂತ್ರಿಸುವ ಶಿಕ್ಷಣ ಇಲಾಖೆಯ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿರುವ ಕಾರಣ, ಶುಲ್ಕ ಹೆಚ್ಚಿಸಲು ರಾಜ್ಯದ ಕೆಲ ಅನುದಾನರಹಿತ ಖಾಸಗಿ ಶಾಲೆಗಳು ನಿರ್ಧರಿಸಿವೆ.
ಶಿಕ್ಷಣ ಇಲಾಖೆ ಎರಡು ದಶಕಗಳಿಂದ ಮಕ್ಕಳ ಶುಲ್ಕ ನಿಗದಿ ಸೇರಿದಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಕೆಲ ಚಟುವಟಿಕೆಗಳನ್ನು ನಿಯಂತ್ರಿಸಿತ್ತು. ಈ ಆದೇಶದಿಂದಾಗಿ ಖಾಸಗಿ ಶಾಲೆಗಳು ಪ್ರತಿ ವರ್ಷ ಶುಲ್ಕ ಹೆಚ್ಚಳ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.
ಸರ್ಕಾರದ ಆದೇಶದ ವಿರುದ್ಧ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ) ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್, ಸರ್ಕಾರದ ಅನುದಾನ ಪಡೆಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲೞ ಎಂದು ತೀರ್ಪು ನೀಡಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನ ಪಡೆಯುವುದಿಲ್ಲ. ಮೂಲ ಸೌಕರ್ಯ, ಶಿಕ್ಷಕರಿಗೆ ವೇತನ ಸೇರಿದಂತೆ ಎಲ್ಲ ವೆಚ್ಚವನ್ನೂ ಸಂಸ್ಥೆಗಳೇ ಭರಿಸಬೇಕಿದೆ. ಹಾಗಾಗಿ, ಶುಲ್ಕ ಹೆಚ್ಚಳ ಅನಿವಾರ್ಯ ಎನ್ನುತ್ತಾರೆ ಖಾಸಗಿ ಶಾಲೆಗಳ ಒಕ್ಕೂಟದ ಪದಾಧಿಕಾರಿಗಳು.
ವಾರ್ಷಿಕವಾಗಿ ಶೇ.2 ರಿಂದ 3 ರಷ್ಟು ಶುಲ್ಕ ಏರಿಕೆ ಸ್ವಾಭಾವಿಕ ಎನ್ನಲಾಗುತ್ತಿದೆ. ಆದರೆ ಈ ಬಾರಿ ಶೇ.15ರವರೆಗೂ ಶುಲ್ಕ ಹೆಚ್ಚಿಸಲು ಖಾಸಗಿ ಶಾಲೆಗಳು ಮುಂದಾಗಿದ್ದವು. ಆದರೆ ಇದಕ್ಕೆ ಪೋಷಕರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಪ್ರತಿ ವರ್ಷ ಶೇ. 8ರಿಂದ 10ರಷ್ಟು ಶುಲ್ಕ ಹೆಚ್ಚಳ ಮಾಡಲಾಗುತ್ತಿತ್ತು. 2026-27ನೇ ಸಾಲಿಗೆ ಶೇ. 15 ರಷ್ಟು ಶುಲ್ಕ ಹೆಚ್ಚಳ ಮಾಡುವ ಪ್ರಸ್ತಾವನೆ ನಮ ಮುಂದಿತ್ತು. ಕೆಲವು ಶಾಲೆಗಳು ತಮ ಅನುಕೂಲಕ್ಕೆ ತಕ್ಕ ಹಾಗೆ ಶುಲ್ಕ ಏರಿಕೆ ಮಾಡಲಿವೆ. ಕನಿಷ್ಠ ಶೇ. 5 ರಿಂದ ಗರಿಷ್ಠ 8 ರ ವರೆಗೂ ಶುಲ್ಕ ಹೆಚ್ಚಳವಾಗಲಿದೆ.ಸರ್ಕಾರ ಮನಸ್ಸೊ ಇಚ್ಛೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಿದೆ. ಇದರಿಂದ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. 30 ರಿಂದ 40 ಲಕ್ಷ ರೂ.ಗಳಷ್ಟು ಮೂಲ ಸೌಕರ್ಯ ಬಳಕೆಯಾಗದೆ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದೆ. ಶಿಕ್ಷಕರ ವೇತನವೂ ಹೆಚ್ಚಾಗುತ್ತಿದೆ. ಹೀಗಾಗಿ ಶುಲ್ಕ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.
ಕರ್ನಾಟಕದಲಷ್ಟೇ ಅಲ್ಲ, ದೇಶಾದ್ಯಂತ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ರಾಜ್ಯದಲ್ಲಿಯೇ 700 ರಿಂದ 800 ಖಾಸಗಿ ಶಾಲೆಗಳಿಗೆ ವರ್ಷ ಒಂದರಲ್ಲೇ ಅನುಮತಿ ನೀಡಲಾಗುತ್ತಿದೆ. ಇದರ ಮಧ್ಯೆ ಬಹು ರಾಷ್ಟ್ರೀಯ ಕಂಪನಿಗಳು, ದೊಡ್ಡ ದೊಡ್ಡ ಸಂಸ್ಥೆಗಳು ಶೈಕ್ಷಣಿ ಕ್ಷೇತ್ರಕ್ಕೆ ಕಾಲಿಟ್ಟಿವೆ. ಕೋಟ್ಯಂತರ ರೂ. ಬಂಡವಾಳ ಹೂಡಿಕೆ ಮಾಡಿ ಶಾಲೆ ಆರಂಭಿಸುತ್ತಿವೆ. ಅದಕ್ಕನುಗುಣವಾಗಿಯೇ ಶುಲ್ಕವೂ ಹೆಚ್ಚಳವಾಗುತ್ತಿದೆ ಎಂಬುದು ಖಾಸಗಿ ಶಾಲೆಗಳ ಸಮರ್ಥನೆ.
ತಮಿಳುನಾಡು ಮಾದರಿ ಜಾರಿಗೆ ತನ್ನಿ!
ಮುನಸ್ಸಿಗೆ ಬಂದಂತೆ ಶುಲ್ಕ ಹೆಚ್ಚಿಸುತ್ತಿರುವ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕಬೇಕು ಎಂದು ಪೋಷಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ತಮಿಳುನಾಡು ಸರ್ಕಾರವು ಇತ್ತೀಚೆಗೆ ಶಾಲೆಗಳ ಶುಲ್ಕ ಸಂಗ್ರಹ ನಿಯಂತ್ರಣ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ್ದು, ಖಾಸಗಿ ಶಾಲೆಗಳ ಅನಿಯಂತ್ರಿತ ಶುಲ್ಕ ಹೆಚ್ಚಳ ತಡೆಯಲು ಮತ್ತು ಪೋಷಕರಿಗೆ ಪರಿಹಾರ ನೀಡಲು ಈ ಕಾಯ್ದೆಯನ್ನು ಜಾರಿಗೊಳಿಸಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೆ ತರುವಂತೆ ಕೂಗು ಎದ್ದಿದೆ.
ತಮಿಳುನಾಡಿನ ಕಾಯ್ದೆಯ ಪ್ರಕಾರ, ಸರ್ಕಾರವೇ ಖಾಸಗಿ ಶಾಲೆಗಳ ಶುಲ್ಕ ಮಿತಿಯನ್ನು ನಿಗದಿಪಡಿಸುತ್ತದೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಏಳು ಜನರ ಸಮಿತಿ ರಚನೆಯಾಗಲಿದ್ದು, ಈ ಸಮಿತಿ ನಿಗದಿಪಡಿಸಿದ ಶುಲ್ಕವೇ ಎಲ್ಲಾ ಖಾಸಗಿ ಶಾಲೆಗಳಿಗೂ ಮೂರು ಶೈಕ್ಷಣಿಕ ವರ್ಷಗಳ ಅವಧಿಗೆ ಕಡ್ಡಾಯವಾಗಲಿದೆ.
ಖಾಸಗಿ ಶಾಲೆಗಳ ಒಕ್ಕೂಟದಿಂದ ತೀವ್ರ ವಿರೋಧ
ತಮಿಳುನಾಡು ಮಾದರಿ ಕಾಯ್ದೆಗೆ ಖಾಸಗಿ ಶಾಲೆಗಳ ಒಕ್ಕೂಟದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲೂ ಇದನ್ನು ಜಾರಿಗೆ ತಂದರೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಕೆಲವು ಖಾಸಗಿ ಶಾಲೆಗಳ ಪ್ರತಿನಿಧಿಗಳ ಪ್ರಕಾರ, ತಮಿಳುನಾಡು ಮಾದರಿ ಎಂದು ಕೆಲವರು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಈ ಕಾಯ್ದೆಯು ಕಾನೂನು ವಿರುದ್ಧವಾಗಿದ್ದು, ಸಂವಿಧಾನಾತಕವಾಗಿಲ್ಲ ಎಂದು ಅವರು ವಾದಿಸಿದ್ದಾರೆ.
ತಮಿಳುನಾಡಿನಲ್ಲಿಯೂ ಥ್ರೀ ಮ್ಯಾನ್ ಕಮಿಟಿ ರಚನೆಯಾಗಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಆ ಕಾಯ್ದೆಗೆ ನ್ಯಾಯಾಲಯದಿಂದ ಸ್ಟೇ (ತಡೆಯಾಜ್ಞೆ) ಕೂಡ ಇದ್ದು, ಅದು ಚಾಲ್ತಿಯಲ್ಲಿ ಇಲ್ಲ ಎಂದು ಹೇಳಲಾಗಿದೆ. ಖಾಸಗಿ ಶಾಲೆಗಳ ಒಕ್ಕೂಟವು ಈ ಕಾಯ್ದೆಗೆ ತಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದೆ
