Homeರಾಜ್ಯರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ

ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ

Rain to continue in the state for another week

ಬೆಂಗಳೂರು, ಮೇ 31-ನೈಋತ್ಯ ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಒಂದು ವಾರ ಮಳೆ ಮುಂದುವರೆಯಲಿದೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದೆ. ನಿನ್ನೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಮಂಡ್ಯ, ಹಾಸನ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಐದರಿಂದ ಹತ್ತು ಸೆಂ.ಮೀ.ನಷ್ಟು ಉತ್ತಮ ಮಳೆಯಾಗಿದೆ. ತುಮಕೂರಿನ ತಿಮರಾಜನಹಳ್ಳಿ 111.5 ಮಿ.ಮೀ.ನಷ್ಟು ಭಾರಿ ಮಳೆಯಾಗಿದೆ.

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗುವ ಮುನ್ಸೂಚನೆಗಳಿವೆ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಆದರೆ, ಭಾರಿ ಮಳೆ ಮುನ್ನೆಚ್ಚರಿಕೆಗಳಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯಾದ್ಯಂತ ಮಳೆ ಮುಂದುವರೆಯಲಿದ್ದು, ಮಧ್ಯಾಹ್ನದ ನಂತರ ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಹಲವೆಡೆ ಸಂಜೆ ಹಾಗೂ ರಾತ್ರಿ ವೇಳೆ ಮಿಂಚು, ಗುಡುಗಿನಿಂದ ಕೂಡಿದ ಮಳೆಯಾಗಲಿದೆ. ಕೆಲವೆಡೆ ಜೋರಾದ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ. ನಿನ್ನೆಯಂತೆ ಇಂದೂ ಸಹ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಕೆಲವೆಡೆ ಭಾರಿ ಮಳೆಯಾಗುವ ಲಕ್ಷಣಗಳಿವೆ.

ಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಮೇ 26ರಂದು ಕೇರಳಂ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದಕ್ಕೆ ಪೂರಕವಾದ ವಾತಾವರಣ ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಎರಡು ವಾರಗಳ ಹಿಂದೆಯೇ ಕಂಡುಬಂದಿತ್ತು. ಆದರೂ ಇದುವರೆಗೆ ಮುಂಗಾರು ಪ್ರವೇಶವಾಗಿಲ್ಲ. ಜೂನ್‌ ಒಂದರ ವೇಳೆಗೆ ಮುಂಗಾರು ಕೇರಳಂ ಪ್ರವೇಶ ಮಾಡುವುದು ವಾಡಿಕೆ. ಅದರಂತೆ ಮುಂಗಾರು ನಾಳೆಯೊಳಗೆ ಪ್ರವೇಶ ಆಗಲಿದೆಯೇ ಅಥವಾ ವಿಳಂಬವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES

Latest News