Sunday, January 25, 2026
Homeರಾಜ್ಯ400 ಕೋಟಿ ರೂ. ಲೂಟಿ ಪ್ರಕರಣದ ತನಿಖೆಗೆ ಎಸ್‌‍ಐಟಿ ರಚನೆ

400 ಕೋಟಿ ರೂ. ಲೂಟಿ ಪ್ರಕರಣದ ತನಿಖೆಗೆ ಎಸ್‌‍ಐಟಿ ರಚನೆ

SIT formed to investigate Rs 400 crore loot case

ಬೆಳಗಾವಿ, ಜ.25- ಸುಮಾರು 400 ಕೋಟಿ ರೂ. ದರೋಡೆ ಘಟನೆಗೆ ಸಂಬಂಧಿಸಿದಂತೆ ಎಸ್‌‍ಐಟಿ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಕೆ.ರಾಮ್‌ರಾಜನ್‌ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಖಾನಾಪುರ ಸಬ್‌ಇನ್ಸ್ ಪೆಕ್ಟರ್‌ ನೇತೃತ್ವದಲ್ಲಿ ತಂಡವನ್ನು ಕೂಡಾ ರಚಿಸಲಾಗಿದೆ. ಕಳೆದ ಅಕ್ಟೋಬರ್‌ 16ರಂದು ಈ ಹಣ ದರೋಡೆಯಾಗಿದೆ ಎಂಬ ಮಾಹಿತಿ ಇದೆ ಎಂದು ವಿವರಿಸಿದರು.

ಚೋರ್ಲಾಘಾಟ್‌ ಮೂರು ರಾಜ್ಯಗಳ ವ್ಯಾಪ್ತಿಯಲ್ಲಿ ಬರುತ್ತದೆ. ಮಹಾರಾಷ್ಟ್ರ ಪೊಲೀಸರು ಈಗಾಗಲೇ ತನೀಖೆ ನಡೆಸುತ್ತಿದ್ದಾರೆ. ಅವರಿಗೆ ಸಹಕಾರ ನೀಡಲಾಗುವುದು. ಇನ್ನೂ ಯಾರಾದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಘಟನೆಯನ್ನು ಯಾರಾದರೂ ನೋಡಿದ್ದವರು ಅಥವಾ ಇದರಲ್ಲಿ ನೊಂದವರು ಇದ್ದರೇ, ದೂರು ನೀಡಲಿ ಎಂದು ಅವರು ತಿಳಿಸಿದ್ದಾರೆ.ಚೋರ್ಲಾಘಾಟ್‌ನಲ್ಲಿ ಸಿಸಿ ಕ್ಯಾಮೆರಾಗಳಿಲ್ಲ. ಹೀಗಾಗಿ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಸದ್ಯ ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಭದ್ರಗೊಳಿಸಲು ಕ್ರಮ ಕೈಗೊಳುತ್ತೇವೆ ಎಂದು ಹೇಳಿದರು.

ಈ ಹಣ ಎಲ್ಲಿಗೆ ಹೋಗಿದೆ ಎಂಬುದು ತಿಳಿದುಬಂದಿಲ್ಲ, ಕೇವಲ ಚೋರ್ಲಾಘಾಟ್‌ನಲ್ಲಿ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಕಳೆದ ಅಕ್ಟೋಬರ್‌ 22ರಂದು ನಾಸಿಕ್‌ನಲ್ಲಿಅಪಹರಣಗೊಂಡಿದ್ದ ವಿಶಾಲ್‌ ನಾಯ್ಡು ಮತ್ತುಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದ ಸಂದೀಪ್‌ ಪಾಟೀಲ್‌ ಜೊತೆಯೂ ಕೂಡ ಮಾತನಾಡಿದ್ದೇವೆ ಎಂದು ತಿಳಿಸಿದರು.ಘಟನೆಯ ಕುರಿತಂತೆ ಯಾರೇ ದೂರು ನೀಡಿದರೂ ನಾವು ಅದನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದರು.

ತನಿಖೆಗೆ ಸಹಕಾರ ಕೋರಿದ ಮಹಾರಾಷ್ಟ್ರ ಪೊಲೀಸರು
ಬೆಳಗಾವಿ ಜಿಲ್ಲೆಯ ಗಡಿಯಲ್ಲಿ 400 ಕೋಟಿ ರೂ.ಲೂಟಿ ಪ್ರಕರಣದ ಕುರಿತು ಮಹಾರಾಷ್ಟ್ರ ಪೊಲೀಸರು ನಮ ಪೊಲೀಸರಿಗೆ ಪತ್ರ ಬರೆದಿದ್ದಾರೆ. ತನಿಖೆಯಲ್ಲಿ ನಮ ಪೊಲೀಸರ ಸಹಾಯವನ್ನು ಅವರು ಕೇಳಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ,
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಗೆ ನಮ ಸರ್ಕಾರದ ಸಹಾಯದ ಅವಶ್ಯಕತೆ ಇದೆ ಎಂಬ ದೃಷ್ಟಿಯಿಂದ ಮಹಾರಾಷ್ಟ್ರದವರು ಪತ್ರ ಬರೆದಿದ್ದಾರೆ. ಕೋಟ್ಯಂತರ ಹಣ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಮಾಹಿತಿಯನ್ನು ಪೊಲೀಸರಿಂದ ಕೇಳಿದ್ದೇನೆ. ಅದಿನ್ನೂ ಪ್ರಾರಂಭಿಕ ಹಂತದಲ್ಲಿರುವುದರಿಂದ ಹೆಚ್ಚು ಮಾಹಿತಿ ದೊರೆತಿಲ್ಲ್ಲ ಎಂದರು.

ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತ ಮೇಲೆ ನಮ ರಾಜ್ಯದ ಪೊಲೀಸರು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಗಮನ ಹರಿಸುತ್ತಾರೆ. ಇದರ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ವಿವರವಾದ ಮಾಹಿತಿ ಕೊಡುವಂತೆ ಸೂಚಿಸಿದ್ದೇನೆ.

ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತರಿಗೆ ನಿಂದನೆ ಮಾಡಿದ ಆರೋಪಿ ರಾಜೀವ್‌ಗೌಡ ಬಂಧನಕ್ಕೆ ಬಹಳ ಕಠಿಣವಾಗಿ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಆರೋಪ ಕೇಳಿಬಂದ ಮೊದಲ ದಿನವೇ ಬಂಧಿಸಲು ನಿರ್ದೇಶನ ನೀಡಿದ್ದೆ. ಆದರೆ, ಆತ ಅಷ್ಟರಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ. ತಲೆಮರೆಸಿಕೊಂಡು ಎಷ್ಟು ದಿನ ಇರುತ್ತಾರೆ? ತಪ್ಪಿಸಿಕೊಂಡು ಎಲ್ಲಿಗೆ ಹೋಗುತ್ತಾರೆ? ಒಂದಲ್ಲ ಒಂದು ದಿನ ಸಿಗಲೇ ಬೇಕಲ್ಲವೆ? ಎಂದು ಅವರು ಪ್ರಶ್ನಿಸಿದರು.
ಆರೋಪಿಯನ್ನು ಖಂಡಿತವಾಗಿ ಹಿಡಿಯುತ್ತೇವೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ, ಯಾರ ಒತ್ತಡವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಿಕಾಸ್‌‍ ಪುತ್ತೂರ ಅವರಿಗೆ ದ್ವೇಷಭಾಷಣದ ಮಸೂದೆಯಡಿ ನೋಟೀಸ್‌‍ ವಿಚಾರದ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ. ದ್ವೇಷ ಭಾಷಣ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ದೊರೆತಿಲ್ಲ. ಪೊಲೀಸರು ಏಕೆ, ಯಾವ ರೀತಿ ನೋಡಿದ್ದಾರೆ ಎಂಬುದನ್ನು ನೋಡಬೇಕಿದೆ.
ಚಾಲ್ತಿಯಲ್ಲಿರುವಂತಹ ಕಾನೂನು ಅಡಿಯಲ್ಲಿ ನೋಟೀಸ್‌‍ ನೀಡಿದ್ದರೆ ಸರಿಯಾಗಿರುತ್ತದೆ ಎಂದರು.
ಸಂಜೆ ಗೊತ್ತಾಗಲಿದೆ :ನಾಳಿನ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಪಾಲರು ಭಾಷಣ ಮಾಡುತ್ತಾರೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಇಂದು ಸಂಜೆಯೊಳಗೆ ಅದರ ಬಗ್ಗೆ ಗೊತ್ತಾಗಲಿದೆ. ನಮ ಸರ್ಕಾರದ ಭಾಷಣದ ಪ್ರತಿಯನ್ನು ನಾನು ನೋಡಿಲ್ಲ. ಈ ವಿಚಾರದಲ್ಲಿ ರಾಜ್ಯಪಾಲರು ಯಾವ ರೀತಿ ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

RELATED ARTICLES

Latest News