Homeರಾಜ್ಯಹಾಸನಾಂಬ ಮಹೋತ್ಸವಕ್ಕೆ ವಿಶೇಷ ರೈಲು ವ್ಯವಸ್ಥೆ, ಉಚಿತ ವೈಫೈ ಸೌಲಭ್ಯ

ಹಾಸನಾಂಬ ಮಹೋತ್ಸವಕ್ಕೆ ವಿಶೇಷ ರೈಲು ವ್ಯವಸ್ಥೆ, ಉಚಿತ ವೈಫೈ ಸೌಲಭ್ಯ

ಹಾಸನ,ಅ.23- ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಉತ್ಸವವಾದ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸಲು ಅನುಮೋದನೆ ನೀಡಿದ್ದು, ದೇವಸ್ಥಾನದ ಸುತ್ತಮುತ್ತ ಉಚಿತ ವೈಫೈ ಸೌಲಭ್ಯವನ್ನೂ ಕಲ್ಪಿಸಲಾಗಿದೆ ಎಂದು ಸಂಸದ ಶ್ರೇಯಸ್‌‍ ಪಟೇಲ್‌ ತಿಳಿಸಿದರು.

ತಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರೊಂದಿಗೆ ಹಾಸನಾಂಬ ಮಹೋತ್ಸವವನ್ನು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಇನ್‌ಕ್ರೆಡಿಬಲ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಸೇರ್ಪಡೆಗೊಳಿಸಲಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಹೋತ್ಸವಕ್ಕೆ ಪ್ರಚಾರ ದೊರೆಯುವ ನಿರೀಕ್ಷೆಯಿದೆ ಎಂದರು.

ಅಕ್ಟೋಬರ್‌ 29ರಿಂದ ನವೆಂಬರ್‌ 11ರವರೆಗೆ ನಡೆಯಲಿರುವ ಹಾಸನಾಂಬ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲ, ಜನದಟ್ಟಣೆ ನಿರ್ವಹಣೆ, ಮೂಲಸೌಕರ್ಯ ಹಾಗೂ ಸುರಕ್ಷತೆಗೆ ಜಿಲ್ಲಾಡಳಿತ ವಿಶೇಷ ಆದ್ಯತೆ ನೀಡಿದೆ. ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ ರೈಲುಗಳನ್ನು ಮಂಜೂರು ಮಾಡಿರುವುದಕ್ಕೆ ಜಿಲ್ಲೆಯ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಬೆಂಗಳೂರು-ಹಾಸನ ನಡುವೆ ವಿಶೇಷ ಎಕ್ಸ್ ಪ್ರೆಸ್‌‍ ರೈಲು :
ಹಾಸನಾಂಬ ಮಹೋತ್ಸವದ ಪ್ರಯುಕ್ತ ಕೆಎಸ್‌‍ಆರ್‌ ಬೆಂಗಳೂರು-ಹಾಸ ಕೆಎಸ್‌‍ಆರ್‌ ಬೆಂಗಳೂರು ನಡುವೆ ವಿಶೇಷ ಎಕ್‌್ಸಪ್ರೆಸ್‌‍ ರೈಲು ಸಂಚರಿಸಲಿದೆ. ರೈಲು ಸಂಖ್ಯೆ 06573/06574 ಅ.29ರಿಂದ ನ.11ರವರೆಗೆ ಪ್ರತಿದಿನ ಸಂಚರಿಸಲಿದ್ದು, ಎರಡೂ ಮಾರ್ಗಗಳಲ್ಲೂ ತಲಾ 14 ಟ್ರಿಪ್‌ಗಳನ್ನು ನಡೆಸಲಾಗುತ್ತದೆ.ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಈ ರೈಲು ಅನುಕೂಲವಾಗಲಿದೆ.

ರೈಲಿನ ವೇಳಾಪಟ್ಟಿ :
ಬೆಂಗಳೂರು-ಹಾಸನ ವಿಶೇಷ ಎಕ್ಸ್ ಪ್ರೆಸ್‌‍ (06573):
ಕೆಎಸ್‌‍ಆರ್‌ ಬೆಂಗಳೂರು ನಿರ್ಗಮನ: ಬೆಳಿಗ್ಗೆ 7.30
ಯಶವಂತಪುರ: ಬೆಳಿಗ್ಗೆ 7.43
ನೆಲಮಂಗಲ: ಬೆಳಿಗ್ಗೆ 8.15
ಕುಣಿಗಲ್‌: ಬೆಳಿಗ್ಗೆ 8.48
ಯಡಿಯೂರು: ಬೆಳಿಗ್ಗೆ 9.02
ಬಿ.ಜಿ. ನಗರ: ಬೆಳಿಗ್ಗೆ 9.18
ಶ್ರವಣಬೆಳಗೊಳ: ಬೆಳಿಗ್ಗೆ 9.50
ಚನ್ನರಾಯಪಟ್ಟಣ: ಬೆಳಿಗ್ಗೆ 10.03
ಹಾಸನ ಆಗಮನ: ಬೆಳಿಗ್ಗೆ 11.30
ಹಾಸನ-ಬೆಂಗಳೂರು ವಿಶೇಷ ಎಕ್‌್ಸಪ್ರೆಸ್‌‍ (06574):
ಹಾಸನ ನಿರ್ಗಮನ: ಮಧ್ಯಾಹ್ನ 3.15
ಚನ್ನರಾಯಪಟ್ಟಣ: ಮಧ್ಯಾಹ್ನ 3.43 ರಿಂದ 3.45
ಶ್ರವಣಬೆಳಗೊಳ: ಮಧ್ಯಾಹ್ನ 3.55 ರಿಂದ 3.57
ಬಿ.ಜಿ. ನಗರ: ಸಂಜೆ 4.23 ರಿಂದ 4.25
ಯಡಿಯೂರು: ಸಂಜೆ 4.38 ರಿಂದ 4.40
ಕುಣಿಗಲ್‌: ಸಂಜೆ 4.53 ರಿಂದ 4.55
ನೆಲಮಂಗಲ: ಸಂಜೆ 5.30 ರಿಂದ 5.32
ಯಶವಂತಪುರ: ಸಂಜೆ 6.30 ರಿಂದ 6.32
ಕೆಎಸ್‌‍ಆರ್‌ ಬೆಂಗಳೂರು ಆಗಮನ: ಸಂಜೆ 7 ಗಂಟೆ
ಈ ರೈಲು 21 ಬೋಗಿಗಳನ್ನು ಹೊಂದಿರಲಿದೆ. ಮಾರ್ಗಮಧ್ಯದ ನಿಲ್ದಾಣಗಳ ಪ್ರಯಾಣಿಕರಿಗೂ ಇದರಿಂದ ಅನುಕೂಲವಾಗಲಿದೆ ಎಂದು ವಿವರಿಸಿದರು.

ಅರಸೀಕೆರೆ-ಹಾಸನ ನಡುವೆ ಮೆಮು ವಿಶೇಷ ರೈಲು :
ಅರಸೀಕೆರೆ-ಹಾಸನ-ಅರಸೀಕೆರೆ ಮಾರ್ಗದಲ್ಲಿಯೂ ಮೆಮು ವಿಶೇಷ ರೈಲು ಸಂಚರಿಸಲಿದೆ. ರೈಲು ಸಂಖ್ಯೆ 06291/06292 ನವೆಂಬರ್‌ 11ರವರೆಗೆ, ಭಾನುವಾರ ಹೊರತುಪಡಿಸಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ. ಈ ರೈಲಿನಿಂದ ಅರಸೀಕೆರೆ ಹಾಗೂ ಮಾರ್ಗಮಧ್ಯದ ನಿಲ್ದಾಣಗಳ ಮೂಲಕ ಹಾಸನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ. ರೈಲುಗಳ ವಿವರವಾದ ವೇಳಾಪಟ್ಟಿಯನ್ನು ಪ್ರಯಾಣಕ್ಕೂ ಮುನ್ನ ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆಯಲ್ಲಿ ಪರಿಶೀಲಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ ಎಂದರು.

ಹಾಸನಾಂಬ ದೇವಸ್ಥಾನದ ಸುತ್ತಮುತ್ತ ಉಚಿತ ವೈಫೈ :
ಕಳೆದ ವರ್ಷ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಎದುರಿಸಿದ್ದರು. ಲಕ್ಷಾಂತರ ಜನರು ಒಂದೇ ಪ್ರದೇಶದಲ್ಲಿ ಸೇರುವುದರಿಂದ ಕರೆ ಮಾಡಲು ಹಾಗೂ ಇಂಟರ್ನೆಟ್‌ ಬಳಸಲು ತೊಂದರೆಯಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ದೇವಸ್ಥಾನದ ಸುತ್ತಮುತ್ತ ಉಚಿತ ವೈಫೈ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ.

ಇನ್‌ಕ್ರೆಡಿಬಲ್‌ ಇಂಡಿಯಾದಲ್ಲಿ ಹಾಸನಾಂಬ ಮಹೋತ್ಸವ :
ಹಾಸನಾಂಬ ಮಹೋತ್ಸವಕ್ಕೆ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಪ್ರಚಾರ ದೊರೆಯುವ ಉದ್ದೇಶದಿಂದ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದೆ. ಇದರ ಫಲವಾಗಿ ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಇನ್‌ಕ್ರೆಡಿಬಲ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಕೂಡ ಮಹೋತ್ಸವದ ಸಿದ್ಧತೆಗಳ ಕುರಿತು ಪರಿಶೀಲನಾ ಸಭೆ ನಡೆಸಲಿದ್ದಾರೆ.

RELATED ARTICLES
spot_img

Latest News