ಬೆಂಗಳೂರು,ಜ.3- ಪ್ರಸಕ್ತ 2025-26ನೇ ಸಾಲಿನ ರಾಜ್ಯ ಮಟ್ಟದ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ದತಾ( ಪರೀಕ್ಷೆ-1) ಪರೀಕ್ಷೆಯು ಜ.5ರಿಂದ 10ರವರೆಗೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ.
ಪೂರ್ವ ಸಿದ್ದತಾ ಪರೀಕ್ಷೆಯನ್ನು ಮುಖ್ಯ ಪರೀಕ್ಷೆಯ ಮಾದರಿಯಂತೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ ಆಯಾ ದಿನದ ವೇಳಾಪಟ್ಟಿಯಂತೆ ವಿಷಯವಾರು ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ದಿನದಂದು ಬೆಳಗ್ಗೆ 7 ಗಂಟೆಗೆ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ಮಂಡಳಿ ತಿಳಿಸಿದೆ.
ಪ್ರೌಢಶಾಲಾ ಮುಖ್ಯ ಶಿಕ್ಷಕರು, ಪ್ರಶ್ನೆ ಪತ್ರಿಕೆಯನ್ನು ಮುದ್ರಿಸಿಕೊಂಡು ಪೂರ್ವ ಸಿದ್ದತಾ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮ ವಹಿಸಬೇಕು. ಈ ಪರೀಕ್ಷೆಯು ವಿದ್ಯಾರ್ಥಿಗಳಿಗೆ ದಿಕ್ಸೂಚಿಯಾಗಿರುತ್ತದೆ. ಹೀಗಾಗಿ ಮುಖ್ಯ ಪರೀಕ್ಷೆ ನಡೆಸುವ ರೀತಿಯಲ್ಲೇ ಶಿಸ್ತುಬದ್ಧವಾಗಿ ಮತ್ತು ಪಾರದಶರ್ಕವಾಗಿ ನಡೆಸಲು ಮಾರ್ಗಸೂಚಿ ಪ್ರಕಟಿಸಿದೆ.
ಒಂದು ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ಪ್ರಶ್ನೆ ಪತ್ರಿಕೆ ನಕಲು ಮಾಡುವುದು, ಪ್ರಶ್ನೆ ಪತ್ರಿಕೆ ಫೋಟೋ ತೆಗೆಯುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿಗಳನ್ನು ಸರಬರಾಜು ಮಾಡುವುದು ಸೇರಿದಂತೆ ಮುಂತಾದ ಪರೀಕ್ಷಾ ಅವ್ಯವಹಾರದ ಕೃತ್ಯಗಳಿಗೆ ಸಂಬಂಧಿಸಿದವರ ವಿರುದ್ಧ ಮಂಡಳಿ ಹಾಗೂ ಶಿಕ್ಷಣ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು.
ಪೂರ್ವ ಸಿದ್ದತಾ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಗೌಪ್ಯತೆಯನ್ನು ಕಾಪಾಡಬೇಕು.ಯಾವುದಾದರೂ ಶಾಲೆಯ ಪ್ರಶ್ನೆಪತ್ರಿಕೆಗಳು ಪರೀಕ್ಷಾ ಪೂರ್ವದಲ್ಲಿ ಮತ್ತು ಪರೀಕ್ಷಾ ಸಂದರ್ಭದಲ್ಲಿ ಸೋರಿಕೆಯಾದಲ್ಲಿ ಮುಖ್ಯ ಶಿಕ್ಷಕರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗದಂತೆ ಆಯಾ ಜಿಲ್ಲಾ ಉಪನಿರ್ದೇಶಕರು( ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ವಾಣಿಜ್ಯ ಪರೀಕ್ಷೆ:
ಜನವರಿ 12ರಿಂದ 20ರವರೆಗೆ ವಾಣಿಜ್ಯ ಪರೀಕ್ಷೆಗಳನ್ನು ನಡೆಸುತ್ತಿದ್ದು, ಪ್ರವೇಶಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮಂಡಳಿ ಅವಕಾಶ ಕಲ್ಪಿಸಿದೆ. ಪ್ರವೇಶಪತ್ರದಲ್ಲಿ ಅಭ್ಯರ್ಥಿಗಳ ವೈಯಕ್ತಿಕ ವಿವರಗಳ ತಿದ್ದುಪಡಿ ಅಗತ್ಯವಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಜ.6ರ ಸಂಜೆ 4 ಗಂಟೆಯೊಳಗಾಗಿ ವಾಣಿಜ್ಯ ಶಾಖೆಯ ಶಾಖಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
