ಬೆಂಗಳೂರು,ಜ.5- ಯಾರು ತಪ್ಪು ಮಾಡಿದ್ದಾರೋ, ಅದರ ಹಿಂದೆ ಯಾರು ಇದ್ದಾರೋ ಅವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ತಿಳಿಸಿದ್ದಾರೆ.
ಜೆಜೆ ನಗರದಲ್ಲಿ ಕಳೆದ ರಾತ್ರಿ ಓಂಶಕ್ತಿ ಮಾಲಾಧಾರಿಗಳ ಮೇಲೆ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ
ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಲ್ಲು ಹೊಡೆದರು ಬಾಲಕರಂದು ಹೇಳಲಾಗುತ್ತಿದೆ,ಚಿಕ್ಕವರಾಗಲಿ ಅಥವಾ ದೊಡ್ಡವರಾಗಲಿ ತಪ್ಪು ತಪ್ಪೇ ಮತ್ತು ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಿ ಎಂದು ಡಿಸಿಪಿ ಅವರಿಗೆ ಸೂಚನೆ ನೀಡಿದ್ದೇನೆ.
ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಾನು ಕಳೆದ 8 ವರ್ಷಗಳಿಂದ ನನ್ನ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದೇನೆ. ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈ ಘಟನೆ ನಡೆಯಬಾರದಿತ್ತು ಆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ಯಾವುದೇ ಮುಲಾಜಿಲ್ಲದೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಹೇಳಿದರು. ಇಲ್ಲಿ ಹಿಂದೂ,ಮುಸ್ಲಿಂ ಸಮುದಾಯದವರು ಸಹೋದರರಂತೆ ವಾಸಿಸುತ್ತಿದ್ದಾರೆ, ಇಂತಹ ಘಟನೆ ಮರಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೇ ಈ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು ಗಾಂಜಾ ಸೇವಿಸಿ ಅಡ್ಡಾಡುತ್ತಾ, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ.
ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿರುವುದಾಗಿ ಹೇಳಿದರು. ಇದಕ್ಕೂ ಮುನ್ನ ಅವರು ಪೊಲೀಸ್ ಠಾಣೆಯಲ್ಲಿ ಓಂ ಶಕ್ತಿ ಮಾಲಾಧಾರಿ ಪ್ರಮುಖರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸೌಹಾರ್ದ ಮಾತುಕತೆ ನಡೆಸುವ ಮೂಲಕ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
