Homeರಾಜ್ಯಹಾಕಿ ತಂಡದ ಮಾಜಿ ನಾಯಕ ಸೋಮಯ್ಯ ಮನೆಯಲ್ಲಿ ಕಳ್ಳತನ : 3.53 ಲಕ್ಷ ರೂ. ಮೌಲ್ಯದ...

ಹಾಕಿ ತಂಡದ ಮಾಜಿ ನಾಯಕ ಸೋಮಯ್ಯ ಮನೆಯಲ್ಲಿ ಕಳ್ಳತನ : 3.53 ಲಕ್ಷ ರೂ. ಮೌಲ್ಯದ ಪದಕಗಳನ್ನೂ ದೋಚಿದ ಖದೀಮರು

ಬೆಂಗಳೂರು, ನ.4- ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕ ಸೋಮಯ್ಯ ಅವರ ಮನೆಯಲ್ಲಿ ಕಳ್ಳತನವಾಗಿದ್ದು, 30 ಸಾವಿರ ನಗದು ಸೇರಿದಂತೆ 3.53 ಲಕ್ಷ ರೂ. ಮೌಲ್ಯದ ಸ್ವರ್ಣ ಹಾಗೂ ಬೆಳ್ಳಿ ಪದಕಗಳನ್ನು ಚೋರರು ಕದ್ದೊಯ್ದಿರುವ ಘಟನೆ ಇಂದಿರಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಿಪ್ಪಸಂದ್ರದ ಎಚ್‌ಎಎಲ್‌ 3ನೇ ಹಂತದಲ್ಲಿ ವಾಸವಿರುವ ಸೋಮಯ್ಯ ಅವರು ಕುಟುಂಬದೊಂದಿಗೆ ಅ.25ರಂದು ಬೆಳಗ್ಗೆ ನಗರದಿಂದ ಕೊಡಗಿಗೆ ಹೋಗಿದ್ದಾರೆ.

ಆ ಸಮಯದಲ್ಲಿ ಕಳ್ಳರು ಇವರ ಮನೆಯ ಮುಂಬಾಗಿಲಿನ ಬೀಗ ಮೀಟಿ ಒಳಗೆ ನುಗ್ಗಿ ಚಿನ್ನ, ಬೆಳ್ಳಿ, ಕಂಚಿನ ಪದಕ, ಹಣ ಹಾಗೂ ಆಭರಣ ದೋಚಿ ಪರಾರಿಯಾಗಿದ್ದಾರೆ.ಅ.28ರಂದು ಬೆಳಗ್ಗೆ ನೆರೆಮನೆಯವರಾದ ನಾರಾಯಣ್‌ ಎಂಬುವವರು ಸೋಮಯ್ಯ ಅವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಕಳ್ಳತನವಾಗಿರಬಹುದೆಂದು ತಿಳಿದು ತಕ್ಷಣ ಅವರಿಗೆ ಮೊಬೈಲ್‌ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸೋಮಯ್ಯ ಅವರು ತಕ್ಷಣ ಕೊಡಗಿನಿಂದ ವಾಪಸ್‌ ಬಂದು ನೆರೆಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅ.28ರಂದು ಬೆಳಗಿನ ಜಾವ 2.30ರ ಸುಮಾರಿಗೆ ಇಬ್ಬರು ಕಳ್ಳರು ಮನೆಯ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಇಬ್ಬರ ಪೈಕಿ ಒಬ್ಬಾತ ನೀಲಿ ಬಣ್ಣದ ಶರ್ಟ್‌ ಹಾಗೂ ಮತ್ತೊಬ್ಬ ಕೆಂಪು ಬಣ್ಣದ ಶರ್ಟ್‌ ಧರಿಸಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಬಗ್ಗೆ ಸೋಮಯ್ಯ ಅವರು ಇಂದಿರಾನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕಳ್ಳರು 3 ಸಾವಿರ ರೂ. ಬೆಲೆಯ 144 ಗ್ರಾಂ ತೂಕದ ಎರಡು ಬೆಳ್ಳಿ ಟ್ರೋಫಿಗಳು, 1.30 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ, 45 ಸಾವಿರ ರೂ. ಬೆಲೆಯ 200 ಗ್ರಾಂ ತೂಕದ ಆರು ಬೆಳ್ಳಿ ಸ್ಪೂನ್‌ಗಳು, 18 ಸಾವಿರ ರೂ. ಬೆಲೆಯ 80 ಗ್ರಾಂ ತೂಕದ ಬೆಳ್ಳಿ ಪಾರ್ಟ್ಸ್‌, 1 ಲಕ್ಷ ರೂ. ಬೆಲೆಯ 8 ಗ್ರಾಂ ಚಿನ್ನದ ಕಾಯಿನ್‌ ಹಾಗೂ 30 ಸಾವಿರ ರೂ. ನಗದು ದೋಚಿದ್ದು, ಇವುಗಳ ಒಟ್ಟು ಮೌಲ್ಯ 3.53 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನಾಧರಿಸಿ ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News