ಬೆಂಗಳೂರು,ಸೆ.10- ಲಾಲ್‌ಬಾಗ್ ಪ್ರದೇಶದಲ್ಲಿ ಟನಲ್ ಎಕ್ಸಿಟ್ ಗೇಟ್ ನಿರ್ಮಿಸುವ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸರ್ಕಾರದ ಮುಂದೀಗ ಹೊಸ ಪ್ರಶ್ನೆಯೊಂದು ದೊಡ್ಡದಾಗಿ ನಿಂತಿದೆ.ಲಾಲ್‌ಬಾಗ್ ಜಾಗವನ್ನು ಕೈಬಿಟ್ಟರೆ, ಟನಲ್ ಎಕ್ಸಿಟ್ ಗೇಟ್‌ಗೆ ಪರ್ಯಾಯ ಜಾಗ ಯಾವುದು? ಲಾಲ್‌ಬಾಗ್‌ನಿಂದ ಟನಲ್ ಮಾರ್ಗವನ್ನು ಬದಲಿಸುವುದು ಅಷ್ಟು ಸುಲಭದ ವಿಚಾರವಲ್ಲ. ಯೋಜನೆಯ ಅಲೈನ್‌ಮೆಂಟ್ ಬದಲಾದರೆ ನಗರದ ದಟ್ಟ ಜನವಸತಿ ಪ್ರದೇಶಗಳ ಮೂಲಕ ಟನಲ್ ಹಾದುಹೋಗಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಇದರಿಂದ ನೂರಾರು ಮನೆಗಳು, ಬೋರ್‌ವೆಲ್‌ಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಸರ್ಕಾರದ ಮುಂದಿರುವ ಪರ್ಯಾಯ ಆಯ್ಕೆಗಳ ಪೈಕಿ ವಿಲ್ಸನ್ ಗಾರ್ಡನ್ ಸಶಾನ, ಸಿದ್ದಾಪುರ ಸ್ಲಂ, ಸೋಮೇಶ್ವರ ನಗರ, ನಿಮ್ಹಾನ್‌್ಸ ಪ್ರದೇಶ, ಗುಲ್ಬರ್ಗ ಕಾಲೋನಿ, ತಿಲಕ್ ನಗರ ಹಾಗೂ ಬನ್ನೇರುಘಟ್ಟ ರಸ್ತೆ ಭಾಗಗಳು ಪ್ರಮುಖವಾಗಿ ಚರ್ಚೆಗೆ ಬರುತ್ತಿವೆ. ಆದರೆ, ಈ ಪ್ರದೇಶಗಳಲ್ಲಿ ಯಾವುದನ್ನೇ ಟನಲ್ ಎಕ್ಸಿಟ್ ಅಥವಾ ಪರ್ಯಾಯ ಅಲೈನ್‌ಮೆಂಟ್‌ಗೆ ಆಯ್ಕೆ ಮಾಡಿದರೂ ಹೊಸ ವಿವಾದ ಹುಟ್ಟಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ವಿಶೇಷವಾಗಿ ವಿಲ್ಸನ್ ಗಾರ್ಡನ್ ಸಶಾನ ಪ್ರದೇಶದ ಮೂಲಕ ಮಾರ್ಗ ಹಾದುಹೋದರೆ ಸಶಾನದ ಭೂಮಿ ಹಾಗೂ ಸುತ್ತಮುತ್ತಲಿನ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಆತಂಕವಿದೆ. ಸಿದ್ದಾಪುರ ಸ್ಲಂ ಮಾರ್ಗವನ್ನು ಪರಿಗಣಿಸಿದರೆ ನೂರಾರು ಕುಟುಂಬಗಳ ಪುನರ್ವಸತಿ ಪ್ರಶ್ನೆ ಎದುರಾಗಬಹುದು. ಸೋಮೇಶ್ವರ ನಗರ ಹಾಗೂ ಗುಲ್ಬರ್ಗ ಕಾಲೋನಿಯಂತಹ ದಟ್ಟ ಜನವಸತಿ ಪ್ರದೇಶಗಳಲ್ಲಿ ಅಲೈನ್‌ಮೆಂಟ್ ಬದಲಾದರೆ ಮನೆಗಳ ಸುರಕ್ಷತೆ ಮತ್ತು ಭೂಸ್ವಾಧೀನದ ಪ್ರಶ್ನೆ ತೀವ್ರಗೊಳ್ಳುವ ಸಾಧ್ಯತೆ ಇದೆ.
ನಿಮ್ಹಾನ್‌್ಸ ಹಾಗೂ ತಿಲಕ್ ನಗರ ಭಾಗಗಳಲ್ಲಿ ಪರ್ಯಾಯ ಮಾರ್ಗ ರೂಪಿಸುವುದೂ ಸುಲಭದ ಕೆಲಸವಲ್ಲ. ಈಗಾಗಲೇ ಅಭಿವೃದ್ಧಿ ಹೊಂದಿರುವ ನಗರ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಕಾಮಗಾರಿ ನಡೆಸಬೇಕಾದರೆ ಸಾರ್ವಜನಿಕ ವಿರೋಧ, ಸಂಚಾರ ಸಮಸ್ಯೆ ಹಾಗೂ ಮೂಲಸೌಕರ್ಯಗಳ ಸ್ಥಳಾಂತರದ ಸವಾಲು ಎದುರಾಗಬಹುದು.
ಇನ್ನೊಂದೆಡೆ ಬನ್ನೇರುಘಟ್ಟ ರಸ್ತೆ ಮಾರ್ಗವನ್ನು ಪರ್ಯಾಯವಾಗಿ ಪರಿಗಣಿಸಿದರೂ ಅಲ್ಲಿ ಈಗಾಗಲೇ ಭಾರೀ ವಾಹನ ದಟ್ಟಣೆ ಇದೆ. ಹೊಸ ಟನಲ್ ಸಂಪರ್ಕ ಹಾಗೂ ಎಕ್ಸಿಟ್ ಕಾಮಗಾರಿಯಿಂದ ಸಂಚಾರ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಬೀಳುವ ಆತಂಕವಿದೆ. ಲಾಲ್‌ಬಾಗ್ ಕೈಬಿಟ್ಟರೆ ಒಂದೇ ಮಾರ್ಗವೇ? ಲಾಲ್‌ಬಾಗ್ ಪ್ರದೇಶದ ಆಯ್ಕೆಯನ್ನು ಸಂಪೂರ್ಣವಾಗಿ ಕೈಬಿಟ್ಟರೆ ಸರ್ಕಾರದ ಮುಂದಿರುವ ಅಲೈನ್‌ಮೆಂಟ್ ಆಯ್ಕೆಗಳು ಸೀಮಿತವಾಗಬಹುದು. ಪರ್ಯಾಯ ಮಾರ್ಗದಲ್ಲಿ ಟನಲ್ ಸಾಗಿಸಿದರೆ ನೂರಾರು ಮನೆಗಳು, ಖಾಸಗಿ ಆಸ್ತಿಗಳು, ಬೋರ್‌ವೆಲ್‌ಗಳು ಮತ್ತು ಕೆಲವು ಸಾರ್ವಜನಿಕ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.ಹೀಗಾಗಿ ಸರ್ಕಾರಕ್ಕೆ ಇದೀಗ ಎರಡು ದೊಡ್ಡ ಸವಾಲುಗಳು ಎದುರಾಗಿವೆ.
ಒಂದು ಕಡೆ ಲಾಲ್‌ಬಾಗ್ ಪ್ರದೇಶದ ಸಂರಕ್ಷಣೆ ಮತ್ತು ಸಾರ್ವಜನಿಕ ವಿರೋಧವನ್ನು ಗಮನಿಸಬೇಕು. ಮತ್ತೊಂದೆಡೆ ಯೋಜನೆಯ ತಾಂತ್ರಿಕ ಸಾಧ್ಯತೆ, ಟನಲ್ ಮಾರ್ಗದ ಸುರಕ್ಷತೆ ಹಾಗೂ ಪರ್ಯಾಯ ಪ್ರದೇಶಗಳಲ್ಲಿ ಉಂಟಾಗಬಹುದಾದ ಜನವಿರೋಧವನ್ನು ಎದುರಿಸಬೇಕು. ಪರ್ಯಾಯ ಮಾರ್ಗಗಳ ಪಟ್ಟಿ,-1. ವಿಲ್ಸನ್ ಗಾರ್ಡನ್ ಸ್ಮಶಾನ 2. ಸಿದ್ದಾಪುರ ಸ್ಲಂ 3. ಸೋಮೇಶ್ವರ ನಗರ 4. ನಿಮ್ಹಾನ್‌್ಸ ಪ್ರದೇಶ5. ಗುಲ್ಬರ್ಗ ಕಾಲೋನಿ 6. ತಿಲಕ್ ನಗರ 7. ಬನ್ನೇರುಘಟ್ಟ ರಸ್ತೆ ಲಾಲ್‌ಬಾಗ್ ಉಳಿಸಬೇಕು ಎಂಬ ಒತ್ತಾಯದ ನಡುವೆ, ಹಾಗಾದರೆ ಟನಲ್ ಎಕ್ಸಿಟ್ ಎಲ್ಲಿಗೆ? ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪರ್ಯಾಯ ಮಾರ್ಗಗಳಲ್ಲಿ ಯಾವುದನ್ನೇ ಅಂತಿಮಗೊಳಿಸಿದರೂ ಸ್ಥಳೀಯ ನಿವಾಸಿಗಳು ಹಾಗೂ ಸಂಘಟನೆಗಳಿಂದ ತೀವ್ರ ವಿರೋಧ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಲಾಲ್‌ಬಾಗ್ ಟನಲ್ ಎಕ್ಸಿಟ್ ವಿವಾದ ಕೇವಲ ಒಂದು ಜಾಗದ ಪ್ರಶ್ನೆಯಾಗಿ ಉಳಿದಿಲ್ಲ. ಲಾಲ್‌ಬಾಗ್ ಉಳಿಸಬೇಕೇ, ಅಥವಾ ಪರ್ಯಾಯ ಮಾರ್ಗದಲ್ಲಿ ನೂರಾರು ಮನೆ ಮತ್ತು ಜನವಸತಿ ಪ್ರದೇಶಗಳ ಆತಂಕವನ್ನು ಎದುರಿಸಬೇಕೇ? ಎಂಬ ಕಠಿಣ ಆಯ್ಕೆ ಈಗ ಸರ್ಕಾರದ ಮುಂದಿದೆ.
