Homeರಾಷ್ಟ್ರೀಯತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಲಾಗಿದೆ : ಬೊಮ್ಮಾಯಿ ಟೀಕೆ

ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಲಾಗಿದೆ : ಬೊಮ್ಮಾಯಿ ಟೀಕೆ

Water released to Tamil Nadu in a hurry: Bommai criticises

ಬೆಂಗಳೂರು, ಆ.2- ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಗಳಿಗೆ ಉತ್ತಮ ಪ್ರಮಾಣದ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಿ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ವರುಣದೇವನ ಕೃಪೆಯಿಂದ ಉತ್ತಮ ಮಳೆಯಾಗಿದೆ. ಆದರೆ, ಜಲಾಶಯಗಳು ಭರ್ತಿಯಾಗುವ ಮುನ್ನವೇ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಿದೆ. ಏನೇ ಆಗಲಿ ಸುಪ್ರೀಂಕೋರ್ಟ್‌ನಲ್ಲಿ ನಮ ಪರವಾಗಿ ವಾದ ಮಂಡಿಸಲು ನಮಗೆ ಬಲವಾದ ಅಂಶಗಳು ಲಭ್ಯವಾಗಿವೆ. ಜೂನ್‌,ಜುಲೈನಲ್ಲಿ ನೀರು ಬಿಡುವುದಷ್ಟೇ ಅಲ್ಲ, ಸರ್ಕಾರ ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ನಿರ್ವಹಣೆಯನ್ನು ಹೇಗೆ ಮಾಡುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ ಎಂದು ಹೇಳಿದರು.

ಕರ್ನಾಟಕದ ಜನತೆಗೆ ಕುಡಿಯುವ ನೀರು ಒದಗಿಸುವುದು, ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಕುಡಿಯುವ ನೀರಿನ ಅಗತ್ಯತೆ ಹಾಗೂ ನಮ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಸುರಕ್ಷಿತವಾಗಿ ಸಿಗುವಂತೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು.

ತಮಿಳುನಾಡಿನವರು 9500 ಕ್ಯೂಸೆಕ್‌್ಸ ಕೇಳಿದ್ದರು. ನಾವು 3500 ಕ್ಯೂಸೆಕ್ಸ್ ಬಿಟ್ಟಿದ್ದೇವೆ ಎನ್ನುವುದು ಹುಡುಗಾಟಿಕೆಯ ಮಾತಾಗಿದೆ. ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುವ ರಾಜ್ಯ ಸರ್ಕಾರದ ಧೋರಣೆ ಸರಿಯಲ್ಲ. ಏಕೆಂದರೆ ಇಲ್ಲಿಯವರೆಗೆ ನಮ ರೈತರ ಕಾಲುವೆಗಳಿಗೆ ಒಂದು ಹನಿ ನೀರನ್ನೂ ಹರಿಸಿಲ್ಲ.

ರೈತರಿಗೆ ನೀರು ಕೊಡದೆ, ಸಾಧನೆ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು. ಸರ್ಕಾರ ಕೈಗೊಳ್ಳುವ ನಿರ್ಧಾರ ಹಾಗೂ ಸಭೆಯಲ್ಲಿ ಮಂಡಿಸುವ ಪ್ರಸ್ತಾಪಗಳನ್ನು ಗಮನಿಸಿ ಮುಂದಿನ ನಡೆ ತೀರ್ಮಾನಿಸಲಾಗುವುದು ಎಂದು ಬೊಮಾಯಿ ತಿಳಿಸಿದರು.

RELATED ARTICLES
spot_img

Latest News