ಹಾಸನ, ಅ.18- ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಡೆ ಹಾಗೂ ತನಿಖೆಯ ಪ್ರಾಮಾಣಿಕತೆಯನ್ನು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಸಂಬಂಧಪಟ್ಟ ವ್ಯಕ್ತಿಯೇ ಬಹಿರಂಗವಾಗಿ ಒಪ್ಪಿಕೊಂಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದೇಕೆ? ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿಗೆ ನಟ್ಟುಬೋಲ್್ಟ ಇಲ್ವಾ ? ರಾಜ್ಯ ಸರ್ಕಾರ ಆ ವ್ಯಕ್ತಿಗೆ ಗುಲಾಮಗಿರಿ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಪ್ರಕರಣದ ತನಿಖೆ ನ್ಯಾಯಸಮತವಾಗಿ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಡಿಜಿಪಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ, ಅಲ್ಲಿನವರ ಮುಖಭಾವ ಗಮನಿಸಿದರೆ, ಸೂಕ್ತ ತನಿಖೆ ನಡೆಯುವ ವಿಶ್ವಾಸ ಮೂಡುತ್ತಿಲ್ಲ. ತನಿಖೆಗೆ ಅಗತ್ಯ ದಾಖಲೆಗಳನ್ನು ನೀಡುವಂತೆ ಕೇಳುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಸಂಬಂಧಪಟ್ಟ ವ್ಯಕ್ತಿಯೇ ಒಪ್ಪಿಕೊಂಡಿರುವಾಗ ಮತ್ತೆ ಯಾವ ದಾಖಲೆಗಳನ್ನು ನೀಡಬೇಕು ಎಂದು ಅವರು ಪ್ರಶ್ನಿಸಿದರು.
ಸುಮಾರು 100ಕ್ಕೂ ಹೆಚ್ಚು ಪೊಲೀಸರ ಮೇಲೆ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ. ಮಾಜಿ ಪ್ರಧಾನಿಯನ್ನು ಏಕವಚನದಲ್ಲಿ ಸಂಬೋಧಿಸುವುದರ ಜತೆಗೆ ವಿವಿಧ ಪ್ರಕರಣಗಳನ್ನು ಒಂದಕ್ಕೊಂದು ತಳುಕು ಹಾಕಲಾಗುತ್ತಿದೆ. ಇಂತಹ ವ್ಯಕ್ತಿಯನ್ನು ರಾಜ್ಯ ಸರ್ಕಾರವೇ ಪೋಷಿಸುತ್ತಿದೆ. ಕಳೆದ ಒಂದು ವಾರದಿಂದ ಗೃಹ ಸಚಿವರು ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ತಮನ್ನು ಉದ್ರೇಕಗೊಳಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ತಿರುಗೇಟು ನೀಡಿದರು.
ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ತಮನ್ನು ರಾಜಕೀಯವಾಗಿ ಗುರಿಯಾಗಿಸಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಅವರ ಕೊಡುಗೆಯೂ ಇದೆ. ಸಿದ್ದರಾಮಯ್ಯ ಕಾಂಗ್ರೆಸ್ಗೆ ಸೇರಿದ ಬಳಿಕ ಅವರ ವಿರುದ್ಧ ರಾಜಕೀಯವಾಗಿ ಹೋರಾಟ ನಡೆಸಿದ್ದೇನೆ. ಆದರೆ, ತಮ ರಾಜಕೀಯ ಜೀವನದಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನನಗೂ ಚದುರಂಗದ ಆಟ ಆಡಲು ಬರುತ್ತದೆ. ಸಮಯ ಬಂದಾಗ ಪಾನ್ ಮುಂದೆ ಇಡುತ್ತೇನೆ. ಈ ಬಾರಿ ಕುಮಾರಸ್ವಾಮಿಯ ಇನ್ನೊಂದು ಮುಖವನ್ನು ತೋರಿಸುತ್ತೇನೆ ಎಂದು ಎಚ್ಚರಿಕೆ ನೀಡಿದ ಅವರು, 2028ರಲ್ಲಿ ರಾಜ್ಯದಲ್ಲಿ ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ. ರಾಜ್ಯದಲ್ಲಿ ಈಗ ನಡೆಯುತ್ತಿರುವ ಆಡಳಿತಕ್ಕೆ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ. ಈಗ ರಾಜ್ಯದ ಜನರು ತಮಗೆ ಶಕ್ತಿ ನೀಡಿದ್ದಾರೆ. ಈ ಹಿಂದೆ ತಮಿಂದಾದ ತಪ್ಪುಗಳನ್ನೂ ಬಹಿರಂಗವಾಗಿ ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದಾಗಿ ಹೇಳಿದ್ದೇನೆ. ಆದರೆ, ಪ್ರಸ್ತುತ ನಡೆಯುತ್ತಿರುವ ವಿಚಾರಗಳ ಕುರಿತು ತಮನ್ನು ಹೊರತುಪಡಿಸಿ ಉಳಿದವರು ಚರ್ಚೆಗೆ ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ :
ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಬೆಳಗಾವಿಗೆ ತೆರಳಿ ರೈತರೊಂದಿಗೆ ಚರ್ಚಿಸಿದ್ದು, ವಿಜಯದಶಮಿ ಬಳಿಕ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರತಿ ಟನ್ ಕಬ್ಬಿಗೆ 1,000 ರೂ. ಹೆಚ್ಚುವರಿ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ನಿರ್ಧಾರ ಕೈಗೊಳ್ಳಲಿವೆ ಎಂಬುದನ್ನು ಕಾಯುತ್ತಿದ್ದೇನೆ. ನನಗಿರುವ ಇತಿಮಿತಿಯಲ್ಲಿಯೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
