Wednesday, March 5, 2025
Homeಬೆಂಗಳೂರುನಿಯಮ ಉಲ್ಲಂಘಿಸಿ ವಿದೇಶಿಗರಿಗೆ ಮನೆ ಬಾಡಿಗೆ ನೀಡಿದರೆ ಕಠಿಣ ಕ್ರಮ..

ನಿಯಮ ಉಲ್ಲಂಘಿಸಿ ವಿದೇಶಿಗರಿಗೆ ಮನೆ ಬಾಡಿಗೆ ನೀಡಿದರೆ ಕಠಿಣ ಕ್ರಮ..

ಬೆಂಗಳೂರು,ಮಾ.4- ವಿದೇಶಿ ಕಾಯ್ದೆಯ ನಿಯಮ ಗಳನ್ನು ಉಲ್ಲಂಘಿಸಿ, ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆ ನೀಡುವ ಮನೆ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ದಯಾನಂದ ಅವರು ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿಯರ ಕಾಯ್ದೆ-1946 ರ ಕಲಂ.7ರ ರೀತ್ಯಾ ಯಾವುದೇ ಮನೆಯ ಮಾಲೀಕ ಅಥವಾ ನಿರ್ವಹಣೆ ಮಾಡುವ ವ್ಯಕ್ತಿ ಯಾವುದೇ ವಿದೇಶಿ ಪ್ರಜೆಗಳಿಗೆ ತನ್ನ ಮನೆಯನ್ನು ಬಾಡಿಗೆಗೆ ನೀಡಿದ 24 ಘಂಟೆಯ ಒಳಗಾಗಿ ವಿದೇಶಿಯರ ನೋಂದಣಿ ಇಲಾಖೆಯ ಆನ್‌ಲೈನ್‌ ಪೋರ್ಟಲ್‌ಮೂಲಕ ಪಾರಂ-ಸಿ ನಮೂನೆಯನ್ನು ತಪ್ಪದೇ ಎಫ್‌ಆರ್‌ಆರ್‌ಒ ಅಧಿಕಾರಿಗಳಿಗೆ ಸಲ್ಲಿಸಬೇಕಿರುತ್ತದೆ ಎಂದು ವಿವರಿಸಿದರು.

ಅದೇ ರೀತಿ ಎಫ್‌ಆರ್‌ಆರ್‌ಒ ಅಧಿಕಾರಿಗಳು ನಮೂನೆ-ಸಿಯನ್ನು ಅನುಮೋದಿಸಿದ ನಂತರ, ಮನೆಯ ಮಾಲೀಕ ಅಥವಾ ನಿರ್ವಹಣೆ ಮಾಡುವ ವ್ಯಕ್ತಿ, ವಿದೇಶಿ ವ್ಯಕ್ತಿ ವಾಸ್ತವ್ಯಕ್ಕೆ ಬಂದ 24 ಘಂಟೆಯ ಒಳಗಾಗಿ ನಮೂನೆ-ಸಿ ಮುದ್ರಿತ ಪ್ರತಿಗಳನ್ನು ಹೊಂದಿರಬೇಕೆಂಬ ನಿಯಮವಿದೆ. ಆದರೆ ಮನೆಯ ಕೆಲವು ಮಾಲೀಕರುಗಳು ಈ ನಿಯಮಗಳನ್ನು ಪಾಲಿಸದೇ 2020ನೇ ಸಾಲಿನಿಂದ ಇಲ್ಲಿಯ ವರೆಗೆ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆಗೆ ನೀಡಿರುವವರ ವಿರುದ್ಧ ಒಟ್ಟು 70 ಪ್ರಕರಣಗಳು ದಾಖಲಾಗಿರುತ್ತವೆ ಎಂದು ಅವರು ಹೇಳಿದರು.

ಈ 70 ಪ್ರಕರಣಗಳ ಪೈಕಿ 42 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿರುತ್ತವೆ. 26 ಪ್ರಕರಣಗಳು ತನಿಖೆ ಹಂತದಲ್ಲಿರುತ್ತವೆ. 1 ಪ್ರಕರಣವು ವರ್ಗಾಯಿಸಲಾಗಿರುತ್ತದೆ. ಬಂಡೇಪಾಳ್ಯ ಪೊಲೀಸ್‌‍ ಠಾಣೆಯ 1 ಪ್ರಕರಣದಲ್ಲಿ ಆರೋಪಿಯ ವಿರುದ್ಧ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿ, ಆರೋಪಿಗೆ 5 ಸಾವಿರ ರೂ.ದಂಡವನ್ನು ವಿಧಿಸಲಾಗಿದೆ. ಅದ್ದರಿಂದ ಇನ್ನು ಮುಂದೆ ಯಾವುದೇ ವಿದೇಶಿ ಪ್ರಜೆಗಳಿಗೆ ಬಾಡಿಗೆ ಅಥವಾ ಆಶ್ರಯ ನೀಡುವ ಮುನ್ನ ಅವರುಗಳ ಪೂರ್ವಪರ ವಿವರಗಳನ್ನು ವಿಚಾರಣೆ ಮಾಡಿ, ಅವರುಗಳ ವಿವರಗಳನ್ನು ನಿಯಮಾನುಸಾರ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನೀಡುವುದು ಪ್ರತಿ ಮನೆ ಮಾಲೀಕರ ಕರ್ತವ್ಯವೆಂಬ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದರು.

ಇಬ್ಬರು ವಿದೇಶಿ ಪ್ರಜೆಗಳ ಬಂಧನ: ನಗರದ ಹೆಬ್ಬಾಳ ಪೊಲೀಸ್‌‍ ಠಾಣಾ ಸರಹದ್ದಿನ ಆನಂದ್‌ನಗರದ ಮನೆಯೊಂದರಲ್ಲಿ ವೀಸಾ ಅವಧಿ ಮುಗಿದಿದ್ದರೂ ಸಹ ಅಕ್ರಮವಾಗಿ ವಾಸವಾಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಪ್ರಜೆಗಳನ್ನು ಭಾರತಿಯ ಪ್ರಜೆಯೊಬ್ಬ ಬ್ಯುಸೆನೆಸ್‌‍ ವೀಸಾದ ಅಡಿಯಲ್ಲಿ ಭಾರತ ದೇಶಕ್ಕೆ ಕರೆಯಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.

ಇಬ್ಬರು ವಿದೇಶಿ ಪ್ರಜೆಗಳ ವೀಸಾ ಅವಧಿ ಮುಗಿದಿದ್ದರೂ ಸಹ, ಭಾರತದಲ್ಲಿಯೇ ವಾಸವಾಗಿದ್ದು, ಈ ವಿದೇಶಿ ಪ್ರಜೆಗಳ ವಿರುದ್ಧ ಹಾಗೂ ಮನೆಯ ಮಾಲೀಕ ಮತ್ತು ಭಾರತ ದೇಶಕ್ಕೆ ಕರೆಸಿಕೊಂಡವರ ವಿರುದ್ಧ ಹೆಬ್ಬಾಳ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಒಪ್ಪಿಸಲಾಗಿರುತ್ತದೆ. ಈ ಕಾರ್ಯಚಾರಣೆಯನ್ನು ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಕೈಗೊಂಡಿರುತ್ತಾರೆ.

RELATED ARTICLES

Latest News