Sunday, November 3, 2024
Homeಆರೋಗ್ಯ / ಜೀವನಶೈಲಿಗರ್ಭಾವಸ್ಥೆಯಲ್ಲಿ ಸ್ತನಕ್ಯಾನ್ಸರ್‌ಗೆ ಒಳಗಾಗಿದ್ದ ಮಹಿಳೆಗೆ ಯಶಸ್ವಿ ಚಿಕಿತ್ಸೆ

ಗರ್ಭಾವಸ್ಥೆಯಲ್ಲಿ ಸ್ತನಕ್ಯಾನ್ಸರ್‌ಗೆ ಒಳಗಾಗಿದ್ದ ಮಹಿಳೆಗೆ ಯಶಸ್ವಿ ಚಿಕಿತ್ಸೆ

ಬೆಂಗಳೂರು: ಅವಳಿ ಶಿಶುಗಳ ಗರ್ಭಾವಸ್ಥೆಯಲ್ಲೇ ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದ 37 ವರ್ಷದ ಗರ್ಭಿಣಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಆಂಕೊಲಾಜಿ ಸಲಹೆಗಾರರಾದ ಡಾ ಭರತ್ ಜಿ, ಮೆಡಿಕಲ್‌ ಆಂಕೊಲಾಜಿಯ ಹಿರಿಯ ಸಲಹೆಗಾರ ಡಾ ವಿವೇಕ್ ಬೆಳತ್ತೂರ್ ಹಾಗೂ ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ವಿಭಾಗದ ನಿರ್ದೇಶಕ ಡಾ ಸಂದೀಪ್ ನಾಯಕ್ ಪಿ ನೇತೃತ್ವದ ತಂಡ ಈ ಚಿಕಿತ್ಸೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಶಸ್ತ್ರಚಿಕಿತ್ಸಕ ಆಂಕೊಲಾಜಿಯ ಸಲಹೆಗಾರರಾದ ಡಾ ಭರತ್ ಜಿ, 18 ನೇ ವಾರ ತುಂಬಿದ್ದ ಪ್ರಿಯಾ (ಹೆಸರು ಬದಲಿಸಲಾಗಿದೆ) ಎಂಬ ಗರ್ಭಿಣಿಯು ತನ್ನ ಬಲ ಸ್ತನದಲ್ಲಿ ಗಡ್ಡೆ ಇರುವುದನ್ನು ಗಮನಿಸಿ ಆಸ್ಪತ್ರೆಗೆ ಭೇಟಿ ನೀಡಿ ಎಂಆರ್‌ಐ ಸ್ಕ್ಯಾನ್‌ಗೆ ಒಳಗಾದರು. ಈ ವೇಳೆ ಅವರಿಗೆ ಸ್ತನಕ್ಯಾನ್ಸರ್‌ ಇರುವುದು ದೃಢ ಪಟ್ಟಿತು. ಆದರೆ, ಈ ಸೋಂಕು ಸುತ್ತಲಿನ ಸ್ನಾಯುಗಳಿಗೆ ಇನ್ನೂ ಹರಡಿರಲಿಲ್ಲ. ಜೊತೆಗೆ ಎದೆಯ ಜಾಗದಲ್ಲಿ ದುಗ್ಧರಸ ಗ್ರಂಥಿಗಳು (ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಸಣ್ಣ, ಹುರುಳಿ-ಆಕಾರದ ರಚನೆಗಳು) ಕಂಡು ಬಂದಿತ್ತು. ಎಲ್ಲಾ ತಪಾಸಣೆಗಳ ಬಳಿಕ ಆಕೆಯ ಕ್ಯಾನ್ಸರ್ ಹಂತ 3 ತಲುಪಿತ್ತು. ಜೊತೆಗೆ, HER2-ಪಾಸಿಟಿವ್ ಎಂದು ವರ್ಗೀಕರಿಸಲಾಯಿತು. ಅಂದರೆ ಅವರ ಕ್ಯಾನ್ಸರ್ ಕೋಶಗಳು HER2 ಎಂಬ ಪ್ರೋಟೀನ್‌ನನ್ನು ಅಧಿಕವಾಗಿ ಹೊಂದಿದ್ದವು, ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ವರ್ಗೀಕರಣವು ಆಕೆಯ ಕ್ಯಾನ್ಸರ್, ಹಾರ್ಮೋನ್ ಚಿಕಿತ್ಸೆಗಳಿಗೆ ಸ್ಪಂದಿಸುವುದಿಲ್ಲ ಎಂದು ಸೂಚಿಸಿತು, ಇದರಿಂದ ಆಕೆಯ ಚಿಕಿತ್ಸೆ ಇನ್ನಷ್ಟು ಜಟಿಲಗೊಂಡಿತ್ತು.

ಆಂಕೊಲಾಜಿ ತಜ್ಞರು ಮತ್ತು ಪ್ರಸೂತಿ ತಜ್ಞರ ಸಮ್ಮುಖದಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಆರೈಕೆಗೆ ಮುಂದಾದೆವು. ಅವಳಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಆಕೆಗೆ ಕಿಮೋಥೆರಪಿಯನ್ನು ಪ್ರಾರಂಭಿಸಿದೆವು. ಆಕೆಯು ಉತ್ತಮವಾಗಿ ಸ್ಪಂದಿಸಲು ಪ್ರಾರಂಭಿಸಿದರು. 34 ವಾರಗಳಲ್ಲಿ ಆಕೆಗೆ ಸಿಸೇರಿಯನ್‌ ಮೂಲಕ ಅವಳಿ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು, ಎನ್‌ಐಸಿಯು ಮೂಲಕ ಮಕ್ಕಳ ಆರೈಕೆಯನ್ನು ಮುಂದುವರೆಸಿದೆವು. ಇತ್ತ ತಾಯಿಗೂ ಕಿಮೋಥೆರಪಿ ಮುಂದುವರೆಸಿದೆವು ಎಂದರು.

ವೈದ್ಯಕೀಯ ಆಂಕೊಲಾಜಿಯ ಹಿರಿಯ ಸಲಹೆಗಾರರಾದ ಡಾ ವಿವೇಕ್ ಬೆಳತ್ತೂರ್ ಮಾತನಾಡಿ, ಅವಳಿ ಮಕ್ಕಳ ಹೆರಿಗೆಯ ನಂತರ, ಪೀಡಿತ ಸ್ತನವನ್ನು ತೆಗೆದುಹಾಕಲು ಪ್ರಿಯಾ ಸ್ತನಛೇದನ ಶಸ್ತ್ರಚಿಕಿತ್ಸೆಗೆ ಒಳಗಾದರು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಈ ಹಂತವು ನಿರ್ಣಾಯಕವಾಗಿತ್ತು. ಆಕೆಯ ಮೂಳೆಗಳನ್ನು ಬಲಪಡಿಸಲು ಮತ್ತು ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಮೂಳೆ ಆರೋಗ್ಯದ ಔಷಧಿಗಳ ಜೊತೆಗೆ, HER2-ಪಾಸಿಟಿವ್ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಟ್ಟುಕೊಂಡು ಅವರಿಗೆ ಚಿಕಿತ್ಸೆ ನೀಡಲಾಯಿತು. ಆಕೆ ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸಿದ್ದು, ಕ್ಯಾನ್ಸರ್‌ ವಿರುದ್ಧ ಆಕೆ ಗೆಲುವು ಸಾಧಿಸಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ.ಮುಂದಿನ ದಿನಗಳಲ್ಲಿ ಆಕೆ ಸ್ತನ ಪುನರ್‌ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದರು.

RELATED ARTICLES

Latest News