Monday, November 25, 2024
Homeರಾಷ್ಟ್ರೀಯ | Nationalಬೋರ್ಡ್‌ ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ : ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ತರಾಟೆ

ಬೋರ್ಡ್‌ ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ : ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ತರಾಟೆ

Supreme Court restrains Karnataka govt from conducting half-yearly board exams for Classes 8,9 & 10

ನವದೆಹಲಿ, ಅ.21- ವಿವಿಧ ತರಗತಿಗಳಿಗೆ ಬೋರ್ಡ್‌ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತೆದೆ ಎಂದು ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಮುಂದಿನ ಆದೇಶದವರೆಗೆ 8, 9 ಮತ್ತು 10 ನೇ ತರಗತಿಗಳ ಬೋರ್ಡ್‌ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸದಂತೆ ನಿರ್ಬಂಧಿಸಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್‌ ಚಂದ್ರ ಶರ್ಮಾ ಅವರಿದ್ದ ದ್ವೀಸದಸ್ಯ ಪೀಠವು ಯಾವುದೇ ಜಿಲ್ಲೆಯಲ್ಲಿ ಪರೀಕ್ಷೆಯನ್ನು ನಡೆಸದಿದ್ದರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಿದೆ.

ವಿದ್ಯಾರ್ಥಿಗಳಿಗೆ ಯಾಕೆ ಕಿರುಕುಳ ನೀಡುತ್ತಿದ್ದೀರಿ? ಇದೊಂದು ರಾಜ್ಯವೇ? ನೀವು ಈ ರೀತಿ ವರ್ತಿಸಬಾರದು. ಇದನ್ನು ಅಹಂಕಾರವನ್ನಾಗಿ ಮಾಡಿಕೊಳ್ಳಬೇಡಿ, ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಹಿತದ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ. ವಿದ್ಯಾರ್ಥಿಗಳಿಗೆ ಕಿರುಕುಳ ಕೊಟ್ಟು ಏನು ಸಾಧನೆ ಮಾಡಲು ಹೊರಟಿದ್ದೀರಿ? ಎಂದು ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದೇವದತ್‌್ತ ಕಾಮತ್‌ ಅವರಿಗೆ ಪೀಠ ಪ್ರಶ್ನೆ ಮಾಡಿತು..

ಕರ್ನಾಟಕ ಸರ್ಕಾರ ಅನುಸರಿಸುತ್ತಿರುವ ಶಿಕ್ಷಣದ ಮಾದರಿಯನ್ನು ಬೇರೆ ಯಾವುದೇ ರಾಜ್ಯಗಳು ಅನುಸರಿಸುತ್ತಿಲ್ಲ ಎಂದು ಪೀಠ ಹೇಳಿದೆ.ರಾಜ್ಯದ ಏಳು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5, 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆಗಳನ್ನು ನಡೆಸುವ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇತರ 24 ಜಿಲ್ಲೆಗಳಲ್ಲಿಯೂ ಪರೀಕ್ಷೆ ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ ಎಂದು ಕಾಮತ್‌ ಹೇಳಿದರು.

ನಾಲ್ಕು ವಾರಗಳಲ್ಲಿ ಪರೀಕ್ಷೆಯ ನಿಖರವಾದ ವಿವರಗಳನ್ನು ನೀಡುವ ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಮಾರ್ಚ್‌ 22 ರಂದು ಕರ್ನಾಟಕ ಹೈಕೋರ್ಟ್‌ ನೀಡಿದ ತೀರ್ಪಿನ ವಿರುದ್ಧ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಸಲ್ಲಿಸಿದ ಮೇಲನವಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ಮಾರ್ಚ್‌ 6 ರಂದು ಏಕ ನ್ಯಾಯಾಧೀಶರ ಪೀಠದ ನೀಡಿದ್ದ ಆದೇಶವನ್ನು ತಳ್ಳಿಹಾಕಿ 2023-24ನೇ ಶೈಕ್ಷಣಿಕ ವರ್ಷಕ್ಕೆ ವಿವಿಧ ತರಗತಿಗಳಿಗೆ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್‌ನ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌‍ಇಎಬಿ) ಮೂಲಕ ವಿವಿಧ ತರಗತಿಗಳಿಗೆ ಬೋರ್ಡ್‌ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ಅಕ್ಟೋಬರ್‌ 2023 ರ ನಿರ್ಧಾರವನ್ನು ಹೈಕೋರ್ಟ್‌ನ ಏಕ ನ್ಯಾಯಾಧೀಶರು ರದ್ದುಗೊಳಿಸಿದ್ದರು.

ತೀರ್ಪಿನ ಹಿನ್ನಲೆ :
ಈ ಹಿಂದೆ ರಾಜ್ಯ ಪಠ್ಯಕ್ರಮದ ಶಾಲೆಗಳ 5, 8, 9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್‌) ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ, ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳಿಗಾಗಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ನ್ಯಾಯಪೀಠ ತೀರ್ಪು ಪ್ರಕಟಿಸಿತು.

ಹೈಕೋರ್ಟ್‌ನ ಈ ಆದೇಶದಿಂದ ಇದೇ ಮಾರ್ಚ್‌ 13 ರಿಂದ 19 ರವರೆಗೂ ನಿಗದಿಯಾಗಿದ್ದ ಬೋರ್ಡ್‌ ಪರೀಕ್ಷೆಗಳು ರದ್ದಾದಂತಾಗಿದೆ. ಅಲ್ಲದೆ ಸೆಕ್ಷನ್‌ 22ರ ಪ್ರಕಾರ ವಿದ್ಯಾರ್ಥಿಗಳ ಪರೀಕ್ಷಾ ವ್ಯವಸ್ಥೆಯ ಮೂಲಕ ಆಂತರಿಕ ಅಥವಾ ಬಾಹ್ಯ ಮೌಲ್ಯಮಾಪನ ಮಾಡುವುದಕ್ಕಾಗಿ ನಿಯಮಗಳಿಗೆ ತಿದ್ದುಪಡಿ ಮಾಡಬೇಕು ಎಂದು ಹೇಳಲಾಗಿತ್ತು.

ಸೆಕ್ಷನ್‌ 145 (4)ರ ಪ್ರಕಾರ ಯಾವುದೇ ನಿಯಮಗಳಲ್ಲಿ ಬದಲಾವಣೆ ಮಾಡಬೇಕಾದಲ್ಲಿ ಶಾಸನ ಸಭೆಯಲ್ಲಿ ಚರ್ಚಿಸಿದ ಬಳಿಕ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಲಾಗಿದೆ. ಆದರೆ, ಶಿಕ್ಷಣ ಇಲಾಖೆ ಬೋರ್ಡ್‌ ಪರೀಕ್ಷೆ ನಡೆಸುವುದಕ್ಕೆ ಈ ರೀತಿಯ ಯಾವುದೇ ನಿಯಮಗಳಿಗೆ ತಿದ್ದುಪಡಿ ಮಾಡಿಲ್ಲ. ಆದ್ದರಿಂದ ಬೋರ್ಡ್‌ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿರುವ ಕ್ರಮ ಶಿಕ್ಷಣ ಕಾಯ್ದೆ ಸೆಕ್ಷನ್‌ 22ಕ್ಕೆ ತದ್ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

ದೊಡ್ಡ ಮಟ್ಟದ ವಿದ್ಯಾರ್ಥಿಗಳಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರ ಬದಲಾವಣೆ ತರಬೇಕಾದಲ್ಲಿ ಯಾವುದೇ ಆಕ್ಷೇಪಗಳು ಇಲ್ಲದಂತೆ ಮತ್ತು ಕಡ್ಡಾಯವಾಗಿ ನಿಗದಿ ಪಡಿಸಿರುವ ಕಾರ್ಯವಿಧಾನದ ಮೂಲಕ ತರಬೇಕಾಗುತ್ತದೆ. ಹೀಗಾಗಿ ಶಿಕ್ಷಣ ಇಲಾಖೆಯ ಸುತ್ತೋಲೆ ದೋಷಪೂರಿತವಾಗಿದೆ ಎಂದು ಪೀಠ ಆದೇಶ ನೀಡಿತ್ತು.

ರಾಜ್ಯ ಶಿಕ್ಷಣ ಇಲಾಖೆ ಶಿಕ್ಷಣ ಕಾಯ್ದೆಯಡಿ 2023ರ ಅಕ್ಟೋಬರ್‌ 6 ಮತ್ತು 9 ರಂದು ಎರಡು ಸುತ್ತೋಲೆಗಳನ್ನು ಹೊರಡಿಸಿ ಬೋರ್ಡ್‌ ಮಟ್ಟದ ಪರೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ನಿಯಮಗಳನ್ನು ಬದಲಾವಣೆ ಮಾಡಬೇಕಾದಲ್ಲಿ ವಿಧಾನ ಮಂಡಲದಲ್ಲಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ, ಸರ್ಕಾರ ಯಾವುದೇ ಚರ್ಚೆ ನಡೆಸದೆ ತೀರ್ಮಾನ ತೆಗೆದುಕೊಂಡಿದ್ದ ಸುತ್ತೋಲೆ ಮೂಲಕ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿತ್ತು. ಆದ್ದರಿಂದ ಸುತ್ತೋಲೆ ರದ್ದುಮಾಡಬೇಕು ಎಂದು ಕೋರಿದ್ದರು.

RELATED ARTICLES

Latest News