ನವದೆಹಲಿ,ಮಾ.24- ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿರುವ ಹನಿಟ್ರಾಪ್ ಪ್ರಕರಣವನ್ನು ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗಿದೆ.
ಇದರಿಂದ ಹನಿಟ್ರಾಪ್ ಪ್ರಕರಣ ಮತ್ತೊಂದು ರೋಚಕ ಘಟ್ಟ ತಲುಪಿದ್ದು, ಒಂದು ವೇಳೆ ನ್ಯಾಯಾಲಯ ಸಿಬಿಐ ಇಲ್ಲವೇ ಯಾವುದಾದರೊಂದು ತನಿಖೆಗೆ ಆದೇಶ ನೀಡಿದರೆ ಪ್ರಕರಣದ ಪ್ರಮುಖ ರೂವಾರಿಗಳಿಗೆ ಭಾರೀ ಕಾನೂನಿನ ಸಂಕಷ್ಟ ಎದುರಾಗಲಿದೆ.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಪೀಠಕ್ಕೆ ಪಿಐಎಲ್ ಸಲ್ಲಿಸಲಾಗಿದ್ದು, ಹನಿಟ್ರಾಪ್‌ನಲ್ಲಿ ನ್ಯಾಯಾಧೀಶರು, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 48 ಮಂದಿ ಇದರಲ್ಲಿ ಇದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಬಯಲೆಗೆಳೆಯಬೇಕೆಂದು ಕೋರಲಾಗಿದೆ.
ನೀವು ಮೊದಲು ಅರ್ಜಿಯನ್ನು ಸಲ್ಲಿಸಿ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅರ್ಜಿದಾರರಿಗೆ ಸೂಚನೆ ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅರ್ಜಿದಾರರು ಆಗಲೇ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ. ಅದು ಲಿಸ್ಟ್ ಕೂಡ ಆಗಿದೆ. ಹೀಗಾಗಿ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಮೊದಲು ಪಟ್ಟಿಯಾಗಲಿ, ಅರ್ಜಿಯನ್ನು ಆದ್ಯತೆ ಮೇರೆಗೆ ಪರಿಗಣಿಸಿ ಇಂದು ಅಥವಾ ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.
ಪಿಐಎಲ್‌ನಲ್ಲಿ ಪ್ರಮುಖವಾಗಿ ಅರ್ಜಿದಾರರು ಇತ್ತೀಚೆಗೆ ಮುಕ್ತಾಯಗೊಂಡ ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದ ವೇಳೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ತಮ ವಿರುದ್ಧ ಹನಿಟ್ರಾಪ್ ಯತ್ನ ನಡೆದಿದೆ. ಇದರಲ್ಲಿ ರಾಜಕಾರಣಿಗಳು, ನ್ಯಾಯಾಧೀಶರು ಹಾಗೂ ಅಧಿಕಾರಿಗಳು ಸೇರಿದಂತೆ ಒಟ್ಟು 48 ಮಂದಿ ಇದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ.
ಇದು ಗಂಭೀರ ಸ್ವರೂಪದ ಪ್ರಕರಣವಾಗಿರುವುದರಿಂದ ತನಿಖೆ ನಡೆಸುವ ಅಗತ್ಯವಿದೆ. ಪ್ರಕರಣದಲ್ಲಿ ನ್ಯಾಯಮೂರ್ತಿಗಳ ಹೆಸರು ಉಲ್ಲೇಖವಾಗಿರುವುದರಿಂದ ಇದು ನ್ಯಾಯಾಂಗ ವ್ಯವಸ್ಥೆ ಮೇಲೆಯೇ ಸಾರ್ವಜನಿಕರ ನಂಬಿಕೆ ಹುಸಿಗೊಳಿಸಲಿದೆ. ಹೀಗಾಗಿ ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಪೀಠ ಇಂದು ಅಥವಾ ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ತಲ್ಲಣ ಸೃಷ್ಟಿಸಿದೆ. ಈ ನಡುವಲ್ಲೇ ಭಾನುವಾರವಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದರು. ಪ್ರಕರಣದಿಂದ ಪಕ್ಷಕ್ಕೆ ಆಗುವ ಹಾನಿಯನ್ನು ನಿಯಂತ್ರಿಸಲು ಸಾಧ್ಯವಾದಷ್ಟು ಬೇಗ ತನಿಖೆಗೆ ಆದೇಶಿಸುವಂತೆ ಸಿದ್ದರಾಮಯ್ಯ ಅವರಿಗೆ ಖರ್ಗೆ ಸಲಹೆ ನೀಡಿದ್ದಾರೆಂದು ಹೇಳಲಾಗಿದೆ.
ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವರೊಬ್ಬರು ಹನಿಟ್ರಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ವದಂತಿಗಳು ಹರಡಿದ್ದು, ಬಿಜೆಪಿ ಈ ವಿಷಯವನ್ನು ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.
ರಾಜಣ್ಣ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನವದೆಹಲಿಯಲ್ಲಿ ಹೈಕಮಾಂಡ್ ವಿಶೇಷವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಚಿಂತನೆ ನಡೆಸುತ್ತಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಗುರುವಾರ ರಾಜಣ್ಣ ಅವರು ತಮ ವಿರುದ್ಧ ಹನಿಟ್ರಾಪ್ ನಡೆದಿದ್ದು, ಅದಕ್ಕೆ ದಾಖಲೆಗಳಿರುವುದಾಗಿ ಹೇಳಿದ್ದರು. ನ್ಯಾಯಾಧೀಶರು ಸೇರಿದಂತೆ 48 ಮಂದಿಯನ್ನು ಈ ಖೆಡ್ಡಾಕ್ಕೆ ಕೆಡವಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ವಿಚಾರವೇ ಸದ್ಯ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಪಕ್ಷದ ರಾಷ್ಟ್ರೀಯ ನಾಯಕರನ್ನೂ ಈ ಜಾಲಕ್ಕೆ ಕೆಡಕುವ ಪ್ರಯತ್ನ ನಡೆದಿದೆ ಎಂಬುದರ ಬಗ್ಗೆ ಚರ್ಚೆ ಪಕ್ಷಕ್ಕೆ ಇನ್ನಷ್ಟು ಮುಜುಗರ ಉಂಟಾಗುವ ಭೀತಿ ಕಾಡುವಂತೆ ಮಾಡಿದೆ. ಈ ನಡುವೆ ತಮ ಮೇಲೆ ಹನಿಟ್ರಾಪ್ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿರುವ ಸಚಿವ ಕೆ.ಎನ್.ರಾಜಣ್ಣ ಅವರು ಗುರುವಾರ ದೂರು ನೀಡುವುದಾಗಿ ಪ್ರಕಟಿಸಿದ್ದಾರೆ. ಅವರ ಈ ನಡೆ ಬಗ್ಗೆ ಕುತೂಹಲ ಮೂಡಿದೆ.