ನವದೆಹಲಿ,ಸೆ.27- ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶ ಕುರಿತು ಮರು ಮತಗಳ ಎಣಿಕೆ ಬಗ್ಗೆ ಕರ್ನಾಟಕ ಹೈಕೋರ್ಟ್ ಸೂಕ್ತ ವಿಚಾರಣೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಕಳೆದ 2023 ಮೇ ತಿಂಗಳಿನಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರು ಕಾಂಗ್ರೆಸ್ ವಿಜೇತ ಅಭ್ಯರ್ಥಿ ಟಿ.ಡಿ.ರಾಜೇಗೌಡ ವಿರುದ್ಧ 201 ಮತಗಳ ಅಂತರದಿಂದ ಸೋಲು ಕಂಡಿದ್ದರು.
ಪರಾಜಿತ ಜೀವರಾಜ್ ಅವರು ಒಟ್ಟು ಚಲಾವಣೆಯಾದ ಮತಗಳಲ್ಲಿ 279 ಕುಲಗೆಟ್ಟ ಮತಗಳಿರುವುದರಿಂದ ಮರು ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಬೇಕೆಂದು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು ಪುರಸ್ಕರಿಸಿರಲಿಲ್ಲ.
ಇದನ್ನು ಪ್ರಶ್ನಿಸಿ ಜೀವರಾಜ್ ಸುಪ್ರೀಂಕೋರ್ಟ್‌ನಲ್ಲಿ ಮೇಲನವಿ ಅರ್ಜಿ ಸಲ್ಲಿಸಿ ಚುನಾವಣಾಧಿಕಾರಿಗಳ ಕ್ರಮಕ್ಕೆ ಆಕ್ಷೇಪಿಸಿ ಮರು ಎಣಿಕೆಗೆ ಅವಕಾಶ ನೀಡಬೇಕೆಂದು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸೋತಿರುವ ಮತಗಳಿಗಿಂತ ಕುಲಗೆಟ್ಟ ಮತಗಳೇ ಹೆಚ್ಚಾಗಿವೆ. ಹೀಗಾಗಿ ಮರು ಮತ ಎಣಿಕೆ ನಡೆಸಬೇಕೆಂದು ಅವರ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು.
ಇದನ್ನು ಮನ್ನಿಸಿದ ನ್ಯಾಯಪೀಠ ನಿಮ ಅರ್ಜಿದಾರರು ಕೇಳುತ್ತಿರುವುದು ನ್ಯಾಯಯುತವಾಗಿದೆ. ಪರಾಜಿತ ಅಭ್ಯರ್ಥಿ 201 ಮತಗಳಿಂದ ಸೋಲು ಕಂಡಿದ್ದಾರೆ. ಕುಲಗೆಟ್ಟ ಮತಗಳೇ 279 ಇವೆ. ಹೀಗಾಗಿ ಮರು ಎಣಿಕೆ ನಡೆಸಬೇಕೆಂಬುದರಲ್ಲಿ ನಮಗೆ ಸಹಮತವಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಹೈಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಇದೀಗ ನ್ಯಾಯಾಲಯದ ಆದೇಶದಂತೆ ಹೈಕೋರ್ಟ್ ಮರು ಎಣಿಕೆ ನಡೆಸುತ್ತದೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.