ಬೆಂಗಳೂರು, ಜ.28- ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರು ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವುದಲ್ಲದೆ, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಉಪ ಮುಖ್ಯಮಂತ್ರಿಗಳ ನಿವಾಸದಲ್ಲಿ ನಿನ್ನೆ ಸೂರಜ್ ರೇವಣ್ಣ ಮತ್ತು ಡಿ.ಕೆ.ಶಿವಕುಮಾರ್ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಗೌಪ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಇದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ. ರಾಜಕೀಯವಾಗಿ ತೀವ್ರ ಚರ್ಚೆಗೆ ಎಡಮಾಡಿ ಕೊಟ್ಟಿದೆ. ಅಲ್ಲದೆ, ಇಬ್ಬರು ಭೇಟಿಯಾದ ಪೋಟೋ ಮಾತ್ರ ಬಹಿರಂಗ ಪಡಿಸಿದ್ದು, ಹೆಚ್ಚಿನ ಮಾಹಿತಿ ನೀಡಿಲ್ಲ. ಇದು ಇನ್ನಷ್ಟು ಊಹಾಪೋಹಗಳಿಗೆ ಅವಕಾಶ ಕಲ್ಪಿಸಿದೆ.
ಹಾಸನ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಹಿರಂಗವಾಗಿ ಈಗಾಗಲೇ ಘೋಷಿಸಿದ್ದು, ಗೊಂದಲಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಪಕ್ಷದ ಸಭೆಯನ್ನು ನಡೆಸುವ ಮೂಲಕ ಗೌಡರು ಚುನಾವಣೆ ಸಿದ್ಧತೆ ಆರಂಭಿಸಿದ್ದಾರೆ.
ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್ ಫಿನಾಲೆ ಹಬ್ಬ ಶುರು
ಇದರ ನಡುವೆ ಶಿವಕುಮಾರ್ ಅವರನ್ನು ಸೂರಜ್ ಅವರು ಭೇಟಿಯಾಗಿರುವ ಉದ್ದೇಶವೇನು ಎಂಬ ಪ್ರಶ್ನೆ ಕೇಳಿಬರುತ್ತದೆ. ಇದೊಂದು ಸೌಹಾರ್ಧ ಭೇಟಿಯಾಗಿತ್ತು. ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿರಬಹುದು ಎಂದು ಜೆಡಿಎಸ್ ಮೂಲಗಳು ಸ್ಪಷ್ಟಪಡಿಸಿವೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿದ್ದು, ಗೆಲ್ಲುವವರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ ಎಂಬ ಸಂದೇಶ ನೀಡಲಾಗಿದೆ. ಚುನಾವಣಾ ಪೂರ್ವ ಸಮೀಕ್ಷೆ ವರದಿ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಗಳು ಗೆಲ್ಲಬೇಕು. ನಮಗೆ ಕ್ಷೇತ್ರ ಅಥವಾ ಅಭ್ಯರ್ಥಿ ಮುಖ್ಯವಲ್ಲ ಎಂದು ಹೇಳಿದ್ದಾರೆ.
ಇನ್ನೂ ಉಭಯ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ ಅಂತಿಮವಾಗಿಲ್ಲ. ಜೆಡಿಎಸ್‍ನಲ್ಲೂ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ. ಈ ಸಂದರ್ಭದಲ್ಲಿ ಸೂರಜ್ ಅವರು ಶಿವಕುಮಾರ್ ಭೇಟಿಯಾಗಿರುವುದು ರಾಜಕೀಯವಾಗಿ ಸಂಚಲನ ಮೂಡಿಸಿದೆ ಮಾತ್ರವಲ್ಲ, ಹಲವು ರೀತಿಯ ಚರ್ಚೆಗೂ ಆಸ್ಪದ ನೀಡಿದಂತಾಗಿದೆ.