ಬೆಂಗಳೂರು, ಜೂ.20– ಕನಕಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿದ್ದು, ಇದೀಗ ಚನ್ನಪಟ್ಟಣದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವುದಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಲೇವಡಿ ಮಾಡಿದ್ದಾರೆ.ರಾಜ್ಯದ ಇನ್ನುಳಿದ 220 ಕ್ಷೇತ್ರಗಳ ಶಾಸಕರಂತೆ 2028ರವರೆಗೂ ಡಿ.ಕೆ. ಶಿವಕುಮಾರ್ ಅವರಿಗೂ ಅವಧಿ ಇದೆ. ಇದೀಗ ಡಿ.ಕೆ. ಶಿವಕುಮಾರ್ ರಾಜಕಾರಣದಲ್ಲಿ ಹೊಸ ನಾಂದಿ ಹಾಡುವ ಸಡಗರದಲ್ಲಿದ್ದಾರೆ.
ಕಳೆದ ವರ್ಷ, 2023ರ ಮೇ ತಿಂಗಳಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಎಚ್.ಡಿ. ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಕೇಂದ್ರದ ಸಚಿವರೂ ಆಗಿದ್ದಾರೆ.ಹೀಗಾಗಿ ಚನ್ನಪಟ್ಟಣ ಕ್ಷೇತ್ರದ ತನ್ನ ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ಅವರು ರಾಜೀನಾಮೆ ಕೊಟ್ಟಿದ್ದಾರೆ.
ಈಗ ಶಾಸಕ ಸ್ಥಾನ ಖಾಲಿಯಾಗಿರುವ ಚನ್ನಪಟ್ಟಣ ಕ್ಷೇತ್ರದಿಂದ ಉಪಚುನಾವಣೆ ಅಗತ್ಯವಾಗಿದೆ. ಹಾಗಾಗಿ ಆ ಕ್ಷೇತ್ರದಿಂದ ಸ್ಪರ್ಧಿಸಲು ಡಿ.ಕೆ. ಶಿವಕುಮಾರ್ ಅವರು ಮುಂದಾಗಿರುವುದು ಹಾಸ್ಯಸ್ಪದ.ಇತಿಹಾಸದಲ್ಲಿ ಓರ್ವ ವ್ಯಕ್ತಿ ತನ್ನ ರಾಜಧಾನಿಯನ್ನು ದೆಹಲಿಯಿಂದ ಸಾವಿರಾರು ಮೈಲಿ ದೂರದ ಮಹಾರಾಷ್ಟ್ರದಲ್ಲಿನ ದೌಲತಾಬಾದಿಗೆ ಬದಲಾಯಿಸಿದ್ದ. ನಂತರ ಮತ್ತೆ ದೌಲತಾಬಾದಿಂದ ದೆಹಲಿಗೆ ವಾಪಸ್ಸು ರಾಜಧಾನಿಯನ್ನು ತಂದ. ಇತಿಹಾಸದಲ್ಲಿ ಈ ವಿಲಕ್ಷಣ ವ್ಯಕ್ತಿ ಹೆಸರು ಯಾವಾಗಲೂ ನೆನಪಿರುತ್ತದೆ. ಇದನ್ನೇ ತುಘಲಕ್ ದರ್ಬಾರ್ ಅನ್ನುವುದು.
ಇದೀಗ ಕನಕಪುರದಿಂದ ಆಯ್ಕೆಯಾಗಿ 2028ರವರೆಗೆ ಶಾಸಕನಾಗಿ ಮುಂದುವರಿಯುವ ಅವಕಾಶ ಮತ್ತು ಕರ್ತವ್ಯ ಹೊಂದಿರುವ ಡಿ.ಕೆ. ಶಿವಕುಮಾರ್ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿರುವುದು ಒಂದು ಅನಗತ್ಯ ಪ್ರಹಸನವೇ ಹೌದು.
ಮಾಧ್ಯಮಗಳಲ್ಲಿ ಕೇಳಿ ಬಂದಂತೆ ಚನ್ನಪಟ್ಟಣದಿಂದ ಸ್ಪರ್ಧಿಸಿ ತಾನು ಗೆದ್ದು, ಈಗಾಗಲೇ ಆಯ್ಕೆ ಯಾಗಿರುವ ಕನಕಪುರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಲ್ಲಿಂದ ಲೋಕಸಭಾ ಚುನಾವಣೆಯಲ್ಲಿ ಪರಾಜಿತರಾದ ತನ್ನ ಸಹೋದರ ಡಿ.ಕೆ. ಸುರೇಶ್‌ಗೆ ಸ್ಪರ್ಧಿಸುವಂತೆ ಮಾಡಿ ಅವರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡುವ ಮಹದೋದ್ದೇಶ ಡಿಕೆ ಶಿವಕುಮಾರ್ ಅವರದಂತೆ. ಇದಕ್ಕೆ ಏನು ಹೇಳಬೇಕು ಎಂದು ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಸಾರ್ವಜನಿಕರ ಹಣ, ರಾಷ್ಟ್ರದ ಸಂಪತ್ತು ಹೇಗೆ ವೈಯಕ್ತಿಕ ಪ್ರತಿಷ್ಠೆಗಾಗಿ ವೆಚ್ಚವಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಡಿ.ಕೆ.ಶಿವಕುಮಾರ್ ರವರ ಈ ನಡೆ ವಿವೇಚನೆ ಮತ್ತು ವಿವೇಕದಿಂದ ಕೂಡಿದ ಅತಿರೇಕದ ನಡೆ ಎಂದೆನಿಸದು!, ಇದಕ್ಕೆ ರಾಹುಲ್ ಗಾಂಧಿಯವರು ಒಪ್ಪುತ್ತಾರೆಯೇ ಎಂದು ಸುರೇಶ್‌ಕುಮಾರ್ ಅವರು ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.